ಒಬ್ಬ ʼದೇಶ ವಿರೋಧಿʼಯ ಮುಗಿಯದ ಹೋರಾಟ

Update: 2025-04-18 20:44 IST
ಒಬ್ಬ ʼದೇಶ ವಿರೋಧಿʼಯ ಮುಗಿಯದ ಹೋರಾಟ
  • whatsapp icon

ಲೇ: ಪ್ರಕಾಶ್ ರಾಜ್, ಅನುವಾದ: ತುಫೈಲ್ ಮುಹಮ್ಮದ್

ನಾನು ಶೂಟಿಂಗ್ ನಿಮಿತ್ತ ದಿಲ್ಲಿಯಲ್ಲಿದ್ದೆ. ರಾತ್ರಿ ವೇಳೆಯ ಚಿತ್ರೀಕರಣವಾಗಿದ್ದರಿಂದ ಹಗಲಿಡೀ ನನ ಗೆ ಬಿಡುವಿತ್ತು. ದಿಲ್ಲಿಯ ಸೆಖೆಗಾಲ ತಾಳಿಕೊಳ್ಳಲಾಗದಷ್ಟು ತೀಕ್ಷ್ಣವಾಗಿತ್ತು. ರಾಜ್ಯದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದ ಮೊದಲ ದಿನಗಳವು. ಮತ್ತೊಂದೆಡೆ ದೇಶಾದ್ಯಂತದ ಸಂಸದರು ರಾಜಧಾನಿಗೆ ಧಾವಿಸಿ ಬಂದಿದ್ದರು. ವಕ್ಫ್ ತಿದ್ದುಪಡಿ ವಿಧೇಯಕದ (ಈಗ ಕಾಯ್ದೆ) ಚರ್ಚೆಯಿಂದಾಗಿ ಸಂಸತ್ತು ಕೊತಕೊತ ಕುದಿಯುತ್ತಿತ್ತು.

ನನ್ನ ಮನಸ್ಸಿನ ತುಂಬಾ ಉಮರ್ ಖಾಲಿದ್ ಆವರಿಸಿಕೊಂಡಿದ್ದ. ಆತನ ಜೈಲುವಾಸಕ್ಕೆ ಐದು ವರ್ಷ ಸಮೀಪಿಸುತ್ತಿತ್ತು. ಈ ಕಠೋರ ಬೇಸಿಗೆಯನ್ನು ಆತ ತಿಹಾರ್ ಜೈಲಿನೊಳಗೆ ಹೇಗೆ ನಿಭಾಯಿಸುತ್ತಿರಬಹುದು? ಆತನ ಹೆತ್ತವರ ಚಿತ್ರಣವೂ ನನ್ನ ಮನಸ್ಸಿನಲ್ಲಿ ಸುಳಿದಾಡಿತು. ಆ ಪೋಷಕರನ್ನೊಮ್ಮೆ ಮಾತಾಡಿಸಿಕೊಂಡು ಬರೋಣ ಎಂದು ಅವರ ಮನೆಯತ್ತ ಹೊರಟೇ ಬಿಟ್ಟೆ.

ಅಂದ ಹಾಗೆ, ನಿಮಗೆ ಈ “ದೇಶದ್ರೋಹಿ” ಉಮರ್ ಖಾಲಿದ್ ಯಾರೆಂಬುದು ಗೊತ್ತೇ? ಮೊದಲಿಗೆ ನಾವು “ದೇಶದ್ರೋಹಿ” ಎಂದರೆ ಯಾರು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನು ಅರ್ಥಮಾಡಿಕೊಳ್ಳದೆ ಯಾರು ದೇಶದ್ರೋಹಿ, ಯಾರು ದೇಶ ಪ್ರೇಮಿ ಎಂದು ನಾವು ವಿಂಗಡಿಸುವುದಾದರೂ ಹೇಗೆ, ಅಲ್ಲವೇ?

ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ನಾವು ಇತಿಹಾಸದ ಪುಟಗಳನ್ನು ತಿರುಗಿಸುತ್ತಾ ತುಂಬಾ ಹಿಂದಕ್ಕೆ ಹೋಗುವ ಅಗತ್ಯವೇನೂ ಇಲ್ಲ. ಚರಿತ್ರೆಯ ಇತ್ತೀಚಿನ ತುಣುಕೊಂದನ್ನು ಉದಾಹರಣೆಯಾಗಿ ತೆಗೆದುಕೊಂಡರೂ ಈ ವಿಚಾರ ನಮಗೆ ಸ್ಪಷ್ಟವಾಗಿ ಬಿಡುತ್ತದೆ.

ದೇಶವನ್ನು ಅಹಿಂಸೆಯ ಧ್ಯೇಯವಾಕ್ಯದ ಮೂಲಕ ಒಗ್ಗೂಡಿಸಿದ ಮಹಾತ್ಮಾ ಗಾಂಧಿ ಸದಾ ಕೋಮು ಸೌಹಾರ್ದದ ಮಹತ್ವವನ್ನು ಎತ್ತಿಹಿಡಿದಿದ್ದರು. ಅವರ ಪ್ರಕಾರ ದೇಶವೆಂಬುದು ಒಂದು ಭೂಪಟವಲ್ಲ; ಅದು ಅಲ್ಲಿ ವಾಸವಾಗಿರುವ ಜನ. ದೇಶದ ಎಲ್ಲ ಜನರಿಗೂ ತಮಗೆ ಇಷ್ಟಬಂದ ಧರ್ಮವನ್ನು ಆಚರಿಸುವ ಅಧಿಕಾರವಿದೆ ಎಂಬುದು ಅವರ ಖಚಿತ ನಿಲುವಾಗಿತ್ತು. ಭಾರತದ ಜನರನ್ನು - ಅವರು ಯಾವುದೇ ಭಾಷೆಯಾಡುವವರಾಗಿದ್ದರೂ, ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ, ಯಾವುದೇ ಜಾತಿಯಲ್ಲಿ ಹುಟ್ಟಿದ್ದರೂ - ರಾಷ್ಟ್ರವು ಅವರೆಲ್ಲರನ್ನೂ ಬಂಧುತ್ವದ ಪ್ರಜ್ಞೆಯ ಮೂಲಕ ಒಟ್ಟುಗೂಡಿಸುತ್ತದೆ ಎಂದು ಗಾಂಧೀಜಿ ನಂಬಿದ್ದರು.

ವಿಪರ್ಯಾಸವೆಂದರೆ, ಭಾರತದಲ್ಲಿ ಸುದೀರ್ಘ ಕಾಲ ಬ್ರಿಟಿಷ್ ಆಳ್ವಿಕೆಗೆ ಸೆಡ್ಡುಹೊಡೆದೂ ಬದುಕುಳಿದಿದ್ದ ಬಾಪೂ, ತಮ್ಮ ಈ ಅಚಲ ನಿಲುವುಗಳಿಗಾಗಿ ದೇಶ ಸ್ವತಂತ್ರಗೊಂಡು ವರ್ಷ ತುಂಬುತ್ತಲೇ ನಾಥೂರಾಮ್ ಗೋಡ್ಸೆ ಎಂಬ ಒಬ್ಬ ಧಾರ್ಮಿಕ ಮೂಲಭೂತವಾದಿಯಿಂದ ಹತ್ಯೆಯಾಗಿಬಿಟ್ಟರು.

ಭಾರತೀಯ ಜನತಾ ಪಕ್ಷವು ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಒಮ್ಮಿಂದೊಮ್ಮೆಗೆ ಗಾಂಧೀಜಿ ದೇಶದ್ರೋಹಿಯಾಗಿಯೂ ಗೋಡ್ಸೆ ದೇಶಪ್ರೇಮಿಯಾಗಿಯೂ ಬದಲಾಗಿದ್ದಾರೆ.

ಜನಸಮೂಹಗಳನ್ನು ಒಡೆದು ಧಾರ್ಮಿಕ ಹಗೆತನವನ್ನು ಬಿತ್ತುವುದನ್ನೇ ತಮ್ಮ ಐತಿಹಾಸಿಕ ಕಾರ್ಯಸೂಚಿಯಾಗಿ ಮಾಡಿಕೊಂಡವರು ತಮ್ಮನ್ನು ದೇಶಭಕ್ತರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಸ್ವಘೋಷಿತ ರಾಷ್ಟ್ರಭಕ್ತರು ತಮ್ಮ ಕೋಮುವಾದಿ ಅಜೆಂಡಾವನ್ನು ಪ್ರಶ್ನಿಸುವ ಎಲ್ಲರನ್ನೂ ದೇಶದ್ರೋಹಿಗಳೆಂದು ಬ್ರಾಂಡ್ ಮಾಡುತ್ತಾರೆ. ಉಮರ್ ಖಾಲಿದ್ ಎಂಬ ಹೆಸರಿನ ವರ್ತಮಾನ ಭಾರತದ ಉಜ್ವಲ ಯುವ ವ್ಯಕ್ತಿತ್ವವೊಂದು ರಾತೋರಾತ್ರಿ ದೇಶದ್ರೋಹಿಯಾಗಿ ಮಾರ್ಪಟ್ಟಿದ್ದು ಕೂಡಾ ಹೀಗೆಯೇ.

► ಏನಿದು ಪ್ರಕರಣ?

ಉಮರ್ ಖಾಲಿದ್ ಮಾಡಿದ ತಪ್ಪಾದರೂ ಏನು? ದೇಶದ ವೈವಿಧ್ಯತೆಯೇ ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಆತ ನಂಬಿದ್ದ. ಸಂವಿಧಾನವನ್ನು ಧ್ವಂಸಗೊಳಿಸುವ ಪ್ರಯತ್ನಗಳ ವಿರುದ್ಧ ಆತ ಸೆಟೆದು ನಿಂತಿದ್ದ. ಅಲ್ಪಸಂಖ್ಯಾತ ಸಮುದಾಯಗಳನ್ನು ತುಳಿಯುತ್ತಿದ್ದ ಆಡಳಿಗಾರರ ವಿರುದ್ಧ ಸ್ವರ ಎತ್ತಿದ್ದ. ಕೋಮು ದ್ವೇಷ ಹರಡುವವರ ಮತ್ತು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಅಮಾಯಕರ ಬಲಿಪಡೆಯುತ್ತಿದ್ದವರಿಗೆ ಸವಾಲೆಸೆದು ಚಳವಳಿಗೆ ಧುಮುಕಿದ್ದ.

ಸತ್ತ ಮೀನು ಕೂಡಾ ಪ್ರವಾಹದ ದಿಕ್ಕಿಗೆ ಹರಿದು ಹೋಗುತ್ತದೆ. ಆದರೆ ಪ್ರವಾಹದ ವಿರುದ್ಧ ಈಜಲು ಸಾಧ್ಯವಾಗುವುದು ಜೀವಂತ ಮೀನಿಗೆ ಮಾತ್ರ - ಉಮರ್ ಖಾಲಿದ್ ನ ಹಾಗೆ. ಆತ ಸುಳ್ಳು ಮತ್ತು ದ್ವೇಷದ ಮಹಾಪೂರದ ವಿರುದ್ಧ ಈಜುತ್ತಿದ್ದಾನೆ. ಗಾಂಧೀವಾದದ ಒಬ್ಬ ನೈಜ ವಾರೀಸುದಾರನಿಂದ ಇದಕ್ಕಿಂತ ಕಡಿಮೆಯದನ್ನು ನಿರೀಕ್ಷಿಸಲು ಸಾಧ್ಯವೇ?

“ಸರ್ವಾಧಿಕಾರವನ್ನು ಪ್ರಶ್ನಿಸುತ್ತಿರುವವರಲ್ಲಿ ನಾವು ಮೊದಲಿಗರೂ ಅಲ್ಲ; ನಮ್ಮನ್ನು ಬಲಿ ಪಡೆದ ನಂತರ ಸರ್ವಾಧಿಕಾರ ಕೊನೆಗೊಳ್ಳುವುದೂ ಇಲ್ಲ,” ಎಂದಿದ್ದ ಭಗತ್ ಸಿಂಗ್. ಇಂದು ಉಮರ್ ಖಾಲಿದ್ ಆ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾನೆ.

ಓರ್ವ ವಿದ್ಯಾರ್ಥಿ ನಾಯಕನಾಗಿ ಆತ ದೇಶವನ್ನು ವಿಭಜಿಸಿ, ಅದರ ಸಾಹೋದರ್ಯವನ್ನು ಧ್ವಂಸಗೊಳಿಸುವ ಉದ್ದೇಶ ಹೊಂದಿದ್ದ ಪೌರತ್ವ (ತಿದ್ದುಪಡಿ) ಮಸೂದೆ (CAA) 2019ರ ವಿರುದ್ಧ ತೀವ್ರ ಹೋರಾಟ ನಡೆಸಿದ್ದ. 2020ರ ಫೆಬ್ರವರಿಯಲ್ಲಿ ಪ್ರಸ್ತಾವಿತ ಕಾಯ್ದೆಯ ವಿರುದ್ಧ ದಿಲ್ಲಿಯಲ್ಲಿ ಉಗ್ರ ಹೋರಾಟ ನಡೆಯುತ್ತಿತ್ತು. ಆದರೆ, ಮುಸ್ಲಿಮರಿಗೆ ಪೌರತ್ವವನ್ನು ನಿರಾಕರಿಸುವ ಈ ಮಸೂದೆಯ ಪರವಾಗಿ ಒಂದು ಗುಂಪು ಸಕ್ರಿಯವಾಗಿ ರಂಗಕ್ಕಿಳಿಯುವುದರೊಂದಿಗೆ ಇಡೀ ಪ್ರಕರಣ ಹಿಂಸಾತ್ಮಕ ತಿರುವು ಪಡೆಯಿತು. ಶಾಂತಿಯುತವಾಗಿ ನಡೆಯುತ್ತಿದ್ದ CAA ಚಳವಳಿಗೆ ತಡೆಯೊಡ್ಡಲಾಯಿತು. ಗಲಭೆಕೋರ ಗುಂಪುಗಳು ದಾಂಧಲೆಗಿಳಿದ ಪರಿಣಾಮವಾಗಿ 53 ಮಂದಿ ಪ್ರಾಣ ಕಳಕೊಂಡರು. ಮೃತರಲ್ಲಿ ಹೆಚ್ಚಿನವರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದರು.

ಅಂದು ಜನಜಂಗುಳಿಯನ್ನು ಹಿಂಸೆಗೆ ಪ್ರಚೋದಿಸಿದ ಆಡಳಿತ ಪಕ್ಷದ ನಾಯಕರು ಇಂದಿಗೂ ಹಾಯಾಗಿ ಓಡಾಡುತ್ತಿದ್ದಾರೆ. ಆದರೆ ಸರಕಾರ ಉಮರ್ ಖಾಲಿದ್ ನನ್ನು ಗುಂಪು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯನ್ವಯ ಜೈಲಿಗೆ ಹಾಕುತ್ತದೆ. ಸೆಷನ್ಸ್ ಕೋರ್ಟ್ ಮತ್ತು ದಿಲ್ಲಿ ಹೈಕೋರ್ಟ್ ಎರಡೂ ಕಡೆ ಆತನ ಜಾಮೀನು ಅರ್ಜಿ ವಜಾ ಆಗುತ್ತದೆ. 2023ರಲ್ಲಿ ಸುಪ್ರೀಮ್ ಕೋರ್ಟ್ ಎದುರು ಸಲ್ಲಿಸಿದ್ದ ಜಾಮೀನು ಅರ್ಜಿ ಇನ್ನೂ ಊರ್ಜಿತವಿದೆ. (2024ರ ಫೆಬ್ರವರಿ 14ರಂದು, ಖಾಲಿದ್ ಪರ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ ಗೆ "ಬದಲಾದ ಪರಿಸ್ಥಿತಿ”ಯ ಹಿನ್ನೆಲೆಯಲ್ಲಿ ಅರ್ಜಿಯನ್ನು ವಾಪಸ್ ಪಡೆಯುವ ನಿರ್ಧಾರವನ್ನು ತಿಳಿಸಿದ್ದರು - ಅನುವಾದಕ). ಒಬ್ಬ ಆರೋಪಿಯನ್ನು ಐದು ವರ್ಷ ಕಾಲ ಯಾವುದೇ ದೋಷಾರೋಪ ಪಟ್ಟಿ ಸಲ್ಲಿಸದೆ, ಯಾವುದೇ ಬಗೆಯ ತನಿಖೆ, ವಿಚಾರಣೆ ಇಲ್ಲದೆ ಬಂಧನದಲ್ಲಿಟ್ಟಿರುವುದೇ ಕಾನೂನು ಬಾಹಿರ ಮತ್ತು ಮಾನವ ಹಕ್ಕುಗಳ ಘೋರ ಉಲ್ಲಂಘನೆ.

“ಉಮರ್ ಖಾಲಿದ್ ನಿರಪರಾಧಿ ಎಂದು ಸಾಬೀತು ಪಡಿಸಲು ನಮಗೆ ಸುಪ್ರೀಮ್ ಕೋರ್ಟ್ ನಲ್ಲಿ ಇಪ್ಪತ್ತು ನಿಮಿಷದ ವಿಚಾರಣೆಯ ಕಾಲಾವಧಿ ಸಾಕು,” ಎನ್ನುತ್ತಾರೆ ಖಾಲಿದ್ ಪರ ವಕೀಲರು. ಆದರೆ 2023ರಿಂದ ಈವರೆಗೆ ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ವಿಚಾರಣೆ ನಡೆಸಲು ಆ 20 ನಿಮಿಷದ ಕಾಲಾವಕಾಶ ಇನ್ನೂ ಸಿಕ್ಕಿಲ್ಲ.

► ಪ್ರಭುತ್ವದ ವಿರುದ್ಧ ಪ್ರತಿರೋಧ

ಉಮರ್ ಖಾಲಿದ್ ನ ಮನೆಯತ್ತ ನಾನು ಹೊರಟು ನಿಂತಾಗ ಆತನ ಕೆಲವು ಸ್ನೇಹಿತರೂ ನನ್ನ ಜತೆಗೂಡಿದರು. ತಮ್ಮ ಸ್ನೇಹಿತನನ್ನು ಭೇಟಿಯಾಗಲು ತಾವು ಪ್ರತಿ ವಾರ ಜೈಲಿಗೆ ಹೋಗುತ್ತಿರುವುದಾಗಿ ಅವರು ಹೇಳಿದಾಗ ನನಗೆ ಆಶ್ಚರ್ಯವಾಯಿತು. “ನಿಮ್ಮ ನಿಬಿಡತೆಯ ಮಧ್ಯೆ ಇದಕ್ಕೆ ಹೇಗೆ ಸಮಯ ಹೊಂದಿಸುತ್ತೀರಿ?” ಎಂದು ನಾನು ಅವರನ್ನು ಪ್ರಶ್ನಿಸಿದೆ. ಆಗ ಉಮರ್ ಖಾಲಿದ್ ನ ಒಬ್ಬ ಸ್ನೇಹಿತ ಜೈಲಿನಲ್ಲಿ ಬಂಧಿಯಾಗಿರುವ ಆಮಿರ್ ಎಂಬಾತನ ವೃತ್ತಾಂತವನ್ನು ವಿವರಿಸತೊಡಗಿದ. ಆಮಿರ್ ಜೈಲುಪಾಲಾದ ನಂತರದ ಮೂರು ತಿಂಗಳಲ್ಲಿ ಆತನ ಪೋಷಕರು ಮತ್ತು ಗೆಳೆಯರು ನಿತ್ಯ ಆತನನ್ನು ಭೇಟಿಯಾಗಲು ಜೈಲಿಗೆ ಹೋಗುತ್ತಿದ್ದರು. ಕ್ರಮೇಣ ಅವರಿಗೆ ಬಡತನ ಮತ್ತು ಹೊಟ್ಟೆಪಾಡಿನ ಜಂಜಡಗಳ ಮಧ್ಯೆ ಜೈಲು ಭೇಟಿಗೆ ಸಮಯ ಹೊಂದಿಸುವುದು ಕಷ್ಟವಾಗತೊಡಗಿತು. ಜೈಲುವಾಸದ ಮೊದಲ ತಿಂಗಳುಗಳಲ್ಲಿ ಧೈರ್ಯದಿಂದಿದ್ದ ಆಮಿರ್ ಕ್ರಮೇಣ ಒಳಗಿಂದೊಳಗೆ ಕುಸಿಯತೊಡಗಿದ. ಇತರ ಕೈದಿಗಳಿಗೆ ಹೋಲಿಸಿದರೆ ಆತನಿಗೆ ಜಾಮೀನು ಸಿಗುವುದು ಅಷ್ಟೊಂದು ಕಷ್ಟವಿರಲಿಲ್ಲ. ಆದರೆ ಆತ ಹತ್ತು ವರ್ಷ ಜೈಲಿನಲ್ಲೇ ಕೊಳೆಯುವಂತಾಯಿತು.

ಜೈಲುವಾಸವೆಂಬುದು ಕೈದಿಯನ್ನು ತನ್ನ ಆಪ್ತರಿಂದ ಪ್ರತ್ಯೇಕಿಸುವುದಕ್ಕಿಂತಲೂ ಹೆಚ್ಚಾಗಿ ಅದು ಆತ ಅಥವಾ ಆಕೆಯ ಆತ್ಮವಿಶ್ವಾಸವನ್ನು ಒಳಗಿಂದೊಳಗೆ ಧ್ವಂಸಗೊಳಿಸುತ್ತಾ ಹೋಗುತ್ತದೆ; ಚೈತನ್ಯವನ್ನು ಉಡುಗಿಸುತ್ತದೆ. ಆಮಿರ್ ಎಂಬ ಕೈದಿಯ ಕಹಿ ಅನುಭವದಿಂದ ಪಾಠ ಕಲಿತಿರುವ ಉಮರ್ ನ ಗೆಳೆಯರು ಈಗ ಆತನನ್ನು ಭೇಟಿಯಾಗುವ ಅವಕಾಶವನ್ನು ಯಾವ ಕಾರಣಕ್ಕೂ ತಪ್ಪಿಸುತ್ತಿಲ್ಲ. ಪ್ರತಿ ವಾರವೂ “ಮುಲಾಖಾತ್”ನ ದಿನವನ್ನು ಎದುರು ನೋಡುವ ಅವರು “ನಾವು ನಿನ್ನೊಂದಿಗಿದ್ದೇವೆ” ಎಂಬುದನ್ನು ಉಮರ್ ಗೆ ನೆನಪಿಸಲು ಸರದಿಯಂತೆ ಆತನ ಭೇಟಿಗೆ ತೆರಳುತ್ತಾರೆ. ತಮ್ಮ ಸಂಗಾತಿಯ ಭಾವನಾತ್ಮಕ ಸ್ವಾಸ್ಥ್ಯವನ್ನು ಒಂದು ನಿರಂಕುಶ ಸರಕಾರದ ಕೈಯಿಂದ ರಕ್ಷಿಸುತ್ತಿರುವ ಈ ಯುವಕ-ಯುವತಿಯರ ನಿಲುವು ನನ್ನನ್ನು ಗಾಢವಾಗಿ ತಟ್ಟಿದೆ; ಅವರ ಬಗ್ಗೆ ನನಗೆ ಹೆಮ್ಮೆಯಿದೆ.

► ಉಮರ್ ಮನೆಯಲ್ಲಿ

ಉಮರ್ ನ ಅಮ್ಮಿ ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರು. ವಕ್ಫ್ (ತಿದ್ದುಪಡಿ) ವಿಧೇಯಕದ ಕುರಿತ ಸಂವಾದವೊಂದರಲ್ಲಿ ಭಾಗವಹಿಸಲು ಸ್ವಲ್ಪ ಸಮಯದ ಹಿಂದಷ್ಟೇ ಮನೆಯಿಂದ ತೆರಳಿದ್ದ ಆತನ ಅಬ್ಬು ಇನ್ನಷ್ಟೆ ವಾಪಸಾಗಬೇಕಿತ್ತು. ಈದ್ ಕಳೆದು ಕೆಲವು ದಿನಗಳಷ್ಟೇ ಆಗಿದ್ದವು. ಉಮರ್ ನ ಅಮ್ಮಿ ನಗುನಗುತ್ತಲೇ ನಮಗೆ ಸಿಹಿತಿಂಡಿಗಳನ್ನು ಕೊಟ್ಟು ಉಪಚರಿಸಿದಳು. ಆದರೂ ಆಕೆಯ ಕಣ್ಣುಗಳಲ್ಲಿ ಮಗನ ಗೈರುಹಾಜರಿಯ ನೋವು ಎದ್ದು ಕಾಣುತ್ತಿತ್ತು. “ನನ್ನ ಮಗ ಬೇಗನೇ ಹೊರಬರುತ್ತಾನೆ. ನ್ಯಾಯಾಂಗದ ಮೇಲೆ ನಮಗೆ ಅಪಾರ ನಂಬಿಕೆಯಿದೆ,” ಎಂದು ಆಕೆ ನಮ್ಮನ್ನು ಸಮಾಧಾನ ಪಡಿಸಲು ಹೇಳಿದ್ದಾದರೂ, ಆಕೆಯ ಮಾತುಗಳಿಂದ ನನ್ನ ಕಣ್ಣುಗಳು ತೇವಗೊಂಡಿದ್ದವು. ಈಮಧ್ಯೆ, ಮನೆಗೆ ವಾಪಸಾದ ಉಮರ್ ನ ಅಬ್ಬು ಕೈಯಿಂದ ಅತಿಥಿಗಳಿಗೆ ಚಹಾ ಪೂರೈಕೆಯಾಯಿತು.

“ನಿಮ್ಮ ಮಗ ಏಕಾಂಗಿಯಲ್ಲ. ಆವನೊಂದಿಗೆ ನಾವೂ ಇದ್ದೇವೆ,” ಎಂದು ನಾನು ಧೈರ್ಯ ತುಂಬಿದೆ. “ನನ್ನ ಮಗ ಯಾವ ಧ್ಯೇಯಕ್ಕಾಗಿ ಹೋರಾಡಿ ಜೈಲಿಗೆ ಹೋದ ಎಂಬುದು ನಮಗೂ ಗೊತ್ತು. ನಾವೂ ಆತನೊಂದಿಗಿದ್ದೇವೆ,” ಎಂದು ಆ ಇಳಿಜೀವ ಪ್ರತಿಕ್ರಿಯಿಸಿದಾಗ ನಾನೂ ಅವಾಕ್ಕಾದೆ.

ಈ ಮಧ್ಯೆ ಉಮರ್ ನ ಗೆಳೆಯನೊಬ್ಬ “ಬಿಡುಗಡೆಯ ನಂತರ ನಾವು ಆತನನ್ನು ಪ್ರಕಾಶ್ ಸರ್ ಜತೆಗೆ ದಕ್ಷಿಣ ಭಾರತಕ್ಕೆ ಕಳುಹಿಸಬೇಕೆಂದಿದ್ದೇವೆ. ಆತ ಅಲ್ಲಿ ಹೆಚ್ಚು ಸುರಕ್ಷಿತನಾಗಿರಬಹುದು” ಎಂದ. ಉಮರ್ ನ ಅಬ್ಬು ಒಂದು ತೀಕ್ಷ್ಣ ನೋಟ ಬೀರುತ್ತಾ, ”ಆತನ ಹೋರಾಟ ಅಗತ್ಯವಿರುವುದು ಇಲ್ಲಿ. ದಿಲ್ಲಿಯಲ್ಲಿ. ಆತ ಬೇರೆಲ್ಲಾದರೂ ಹೋಗಿ ಯಾಕೆ ಸುಮ್ಮನೆ ಕೂತು ಬಿಡಬೇಕು?” ಎಂದಾಗ ನಮ್ಮ ಬಳಿ ಉತ್ತರವಿರಲಿಲ್ಲ.

ವಿಷಯ ಇಷ್ಟೇ. ನಾವೆಲ್ಲ ಇನ್ನೂ ಜೀವಂತ ಇದ್ದೇವೆ ಎಂಬುದರ ದ್ಯೋತಕವೇ ಈ ಹೋರಾಟ. ಘನತೆಯ ಬದುಕಿಗಾಗಿ ನಾವೆಲ್ಲರೂ ಹೋರಾಡಲೇಬೇಕು. ಜೀವವಿದ್ದೂ ಹೆಣಗಳಂತಿದ್ದರೆ ಏನು ಲಾಭ?

ಉಮರ್ ಖಾಲಿದ್ ಮತ್ತ ಆತನ ಪೋಷಕರು ನಿಜವಾದ ದೇಶಭಕ್ತರೆಂಬುದಕ್ಕೆ ಮುಂದಿನ ಇತಿಹಾಸವೇ ಸಾಕ್ಷಿಯಾಗಲಿದೆ. ಕಳೆದ ಐದು ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವುದು ಕೇವಲ ಉಮರ್ ಖಾಲಿದ್ ಎಂಬ ಓರ್ವ ವ್ಯಕ್ತಿ ಮಾತ್ರವಲ್ಲ. ಜನರ ಅಭಿವ್ಯಕ್ತಿ ಸ್ವಾತಂತ್ರ್ಯ, ಅವರ ಬದುಕುವ ಹಕ್ಕು ಮತ್ತು ಇವೆಲ್ಲವುಗಳನ್ನು ಖಾತ್ರಿಪಡಿಸುವ ಸಂವಿಧಾನಕ್ಕೂ ಇಂದು ಅದೇ ಗತಿ ಬಂದೊದಗಿದೆ.

ಕೃಪೆ: ದಿ ಹಿಂದೂ

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News