ತನ್ನ ಕಾಮಿಡಿ ಸಹಿಸದವರಿಗೆ "ಸಂವಿಧಾನ ಓದಿ " ಎನ್ನುವ ಕುನಾಲ್ ಕಾಮ್ರಾ

Update: 2025-03-24 22:55 IST
Photo of Kunal Kamra

ಕುನಾಲ್ ಕಾಮ್ರಾ

  • whatsapp icon

ತನ್ನ ಪೊಲಿಟಿಕಲ್ ಕಾಮಿಡಿ ಇಷ್ಟವಾಗದವರಿಗೆ ಕುನಾಲ್ ಕಾಮ್ರಾ, ತನ್ನ ಹೊಸ ಕಾಮಿಡಿ ಷೋನ ಕೊನೆಯಲ್ಲಿ ಒಂದು ಪುಸ್ತಕವನ್ನು ತೋರಿಸುತ್ತಾರೆ. ಅದು ಭಾರತದ ಸಂವಿಧಾನದ ಪ್ರತಿ. ನನ್ನನ್ನು, ನನ್ನ ಕಾಮಿಡಿಯನ್ನು ಇಷ್ಟಪಡದ ಈ ದೇಶದ ಎಲ್ಲ ಇಂಜಿನಿಯರ್ ಗಳು, ಐಐಎಂ ಪದವೀಧರರಿಗೆ ನಾನು ಇದನ್ನೇ ತೋರಿಸುತ್ತೇನೆ. ಈ ಸಂವಿಧಾನದ ಮಿತಿಯೊಳಗೆ ನಾನು ಬಯಸಿದ್ದೆಲ್ಲವನ್ನು ಮಾಡುವ ಅವಕಾಶವಿದೆ, ಅದನ್ನೇ ನಾನು ಮಾಡುತ್ತಿದ್ದೇನೆ ಕುನಾಲ್ ಕಾಮ್ರಾ ಎಂದು ಹೇಳಿದ್ದಾರೆ.

ಅವರ ಹೊಸ ವಿಡಿಯೋಗೆ ಬರುತ್ತಿರುವ ಪ್ರತಿಕ್ರಿಯೆ ನೋಡಿದರೆ, ಅವರ ಕಾಮಿಡಿಯನ್ನು ಮೆಚ್ಚುವವರು ಅದೆಷ್ಟು ಜನ ಇದ್ದಾರೆ ಎಂದು ಅರಿವಾಗುತ್ತದೆ. ವಿಡಿಯೋದ ಕಮೆಂಟ್ ವಿಭಾಗದಲ್ಲಿ ಅವರಿಗೆ ಬೈಗುಳ, ಬೆದರಿಕೆ ಬಂದಷ್ಟೇ ಪ್ರಶಂಸೆಯ ಸುರಿಮಳೆಗಳು ಸುರಿಯುತ್ತವೆ. ಜನರು ಪ್ರೀತಿಯಿಂದ ತಮ್ಮಿಂದ ಆಗುವಷ್ಟು ಆರ್ಥಿಕ ಸಹಾಯವನ್ನೂ ಅವರಿಗೆ ಮಾಡುತ್ತಿದ್ದಾರೆ. ಜನರಿಗೆ ತಮ್ಮ ಭಾವನೆಗಳನ್ನು, ತಮ್ಮ ಗೋಳನ್ನು ನಿರ್ಭೀತವಾಗಿ, ಅಷ್ಟೇ ಅದ್ಭುತವಾಗಿ ವ್ಯಕ್ತಪಡಿಸುವ ಒಬ್ಬ ಕಲಾವಿದ ಇದ್ದಾನೆ ಎಂಬ ಸಮಾಧಾನ ಇದ್ದಂತೆ ಅವರ ಷೋಗಳು ಕಾಣಿಸಿಕೊಳ್ಳುತ್ತಿವೆ.

ಹಾಸ್ಯವನ್ನು ಪ್ರಭುತ್ವದ ಅತಿರೇಕಗಳ ವಿರುದ್ಧದ ಪ್ರತಿರೋಧವಾಗಿ ಬಳಸಿದ ಭಾರತೀಯ ಕಾಮಿಡಿಯನ್ ಗಳಲ್ಲಿ ಅಗ್ರಗಣ್ಯರು ಕುನಾಲ್ ಕಾಮ್ರಾ. ಅವರು ಏಕವ್ಯಕ್ತಿ ವಿಪಕ್ಷ.

" ಸರಕಾರ ನಾವು ಆಯ್ಕೆ ಮಾಡಿರುವ ಸೇವಾ ಪೂರೈಕೆದಾರ. ನಾವು ಅಧಿಕಾರ ಕೊಟ್ಟಿರುವುದು ನಮ್ಮ ಕೆಲಸ ಮಾಡಿ ಎಂದು. ಅದೇ ನಮಗೂ ಸರಕಾರಕ್ಕೂ ಇರುವ ಸಂಬಂಧ. ಸರಕಾರ ನಡೆಸುವವರ ಜೊತೆ ನಾವು ಇಮೋಷನಲ್ ಏಕೆ ಆಗ್ಬೇಕು? ನಾವು ವೊಡಾಫೋನ್ ಸಿಮ್ ಬಳಸಿದ್ರೆ ಅದರ ಮಾಲಕನ ಜೊತೆ ಇಮೋಷನಲ್ ಆಗಿರುತ್ತೇವೋ? ಇಲ್ಲ ಅಲ್ವ? ಅದೇ ರೀತಿ ಸರಕಾರ ನಡೆಸುವವರು ಸರಿಯಾಗಿ ಕೆಲಸ ಮಾಡಿದರೆ ಸರಿ, ಇಲ್ಲದಿದ್ದರೆ ಅವರನ್ನು ಟೀಕಿಸುವ, ಅವರಿಗೆ ಬೈಯ್ಯುವ ಹಕ್ಕು ನಮಗಿದೆ. ಸರಕಾರ ಅಂದರೆ ದೇಶ ಅಲ್ಲ, ಸರಕಾರವನ್ನು ಪ್ರೀತಿಸಬೇಕಾಗಿಲ್ಲ..."

ಹೀಗೆ ಎಂಟು ವರ್ಷಗಳ ಮೊದಲು 2017 ರಲ್ಲಿ ದೇಶದಲ್ಲಿ ಪ್ರಧಾನಿ ಮೋದಿಯವರ ಹವಾ ಬಹಳ ಜೋರಾಗಿರುವಾಗಲೇ ಹೇಳಿದವರು ಕುನಾಲ್ ಕಾಮ್ರಾ.

ಆಗಲೇ ಅವರ ಇಂತಹ ನಿರ್ಭೀತ ಹೇಳಿಕೆಗಳು ಮೋದಿ ಕಟ್ಟಾ ಬೆಂಬಲಿಗರನ್ನು ಬೆಚ್ಚಿ ಬೀಳಿಸಿತ್ತು. ಮೋದಿ ಟೀಕಾಕಾರರೂ, "ಪರ್ವಾಗಿಲ್ಲ, ಇಷ್ಟೊಂದು ಬೋಲ್ಡ್ ಆಗಿ ಒಬ್ಬ ಕಮಿಡಿಯನ್ ಮೋದಿಯವರ ವಿರುದ್ಧ ಈ ಕಾಲದಲ್ಲಿ ಮಾತನಾಡುತ್ತಾನಲ್ಲಾ? ಯಾರಪ್ಪ ಈ ಕಮಿಡಿಯನ್?", ಎಂದು ಹುಬ್ಬೇರಿಸಿ ನೋಡಿದ್ದರು.

ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗ ತನ್ನ ಉದ್ಯಮ ಸಾಮ್ರಾಜ್ಯವನ್ನು ಬೆಳೆಸಿ ಬಾಬಾ ರಾಮ್ ದೇವ್ ಭಾರೀ ಪ್ರಭಾವೀ ಎನಿಸಿಕೊಂಡಿದ್ದರು. ಯೋಗ ಹಾಗು ಭ್ರಷ್ಟಾಚಾರ ವಿರೋಧಿ ಆಂದೋಲನದ ಹೆಸರಲ್ಲಿ ಕೋಟಿಗಟ್ಟಲೆ ಸಂಪಾದಿಸಿದ ಬಾಬಾ ರಾಮ್ ದೇವ್ ಬಗ್ಗೆ ಎಂಟು ವರ್ಷಗಳ ಹಿಂದೆಯೇ ಕುನಾಲ್ ಕಾಮ್ರಾ ಕುಟುಕಿದ್ದರು. ಕುನಾಲ್ ರಂತೆ ಬಾಬಾ ರಾಮ್ ದೇವ್ ರನ್ನು ಆಗ ಕಾಮಿಡಿ ಮೂಲಕ ತಿವಿದ ಇನ್ನೊಬ್ಬರು ಸಿಗಲಿಕ್ಕಿಲ್ಲ.

ಕುನಾಲ್ ಕಾಮ್ರಾ ಅವರ ಪ್ರಥಮ ಸ್ಟಾಂಡ್ ಅಪ್ ಕಾಮಿಡಿ ವೀಡಿಯೊ ಶೀರ್ಷಿಕೆಯೇ ʼpatriotism and the governmentʼ ಎಂದು. ಕಾಮಿಡಿ ಮಾಡುವವರು ಸಾಮಾನ್ಯವಾಗಿ ಆಯ್ಕೆ ಮಾಡುವುದು ಪ್ರೀತಿ, ಪ್ರೇಮ, ಕುಟುಂಬ ಕಲಹ ವಿಚಾರಗಳು. ಇಂತಹ ಎಲ್ಲ ವಿಷಯಗಳನ್ನು ಬಿಟ್ಟು ದೇಶದಲ್ಲೆಡೆ ಬಹಳ ದೊಡ್ಡ ಫಾಲೋವರ್ಸ್ ಇರುವ, ಅಂಧ ಭಕ್ತರಿರುವ, ರಾಜಕೀಯವಾಗಿ ಅತ್ಯಂತ ಪವರ್ ಫುಲ್ ಆಗಿದ್ದ ಪ್ರಧಾನಿ ಮೋದಿ ಹಾಗು ಅವರ ಸರಕಾರವನ್ನೇ ತನ್ನ ಕಾಮಿಡಿಗೆ ವಿಷಯವಾಗಿ ಆಯ್ಕೆ ಮಾಡಿದ್ದರು ಕುನಾಲ್ ಕಾಮ್ರಾ. ಅಷ್ಟೇ ಅಲ್ಲ, ಕಾಮಿಡಿಯ ಮೂಲಕವೇ ಮೋದಿ ಸರಕಾರದ ಒಂದೊಂದೂ ವೈಫಲ್ಯವನ್ನು, ಜುಮ್ಲಾಗಳನ್ನು ಎಳೆಎಳೆಯಾಗಿ ಜನರೆದುರು ಅವರು ಬಿಚ್ಚಿಡುತ್ತಾ ಹೋದರು.

ಅಲ್ಲಿಗೆ "ನಾನೇ ಬೇರೆ, ನನ್ನ ಕಾಮಿಡಿನೇ ಬೇರೆ. ಇಷ್ಟ ಇದ್ರೆ ನೋಡಿ, ಇಲ್ಲಿದ್ದರೆ ಬಿಡಿ. ನಾನಂತೂ ಈ ಹೊತ್ತಿಗೆ ಈ ವಿಷಯದ ಬಗ್ಗೆಯೇ ಕಾಮಿಡಿ ಮಾಡುವುದು" ಅಂತ ಘೋಷಿಸಿಯೇ ಭಾರತೀಯ ಕಾಮಿಡಿ ರಂಗಕ್ಕೆ ಬಂದು ಸೂಪರ್ ಹಿಟ್ ಆದ ಕಮಿಡಿಯನ್ ಕುನಾಲ್ ಕಾಮ್ರಾ.

8 ವರ್ಷಗಳ ಹಿಂದೆ ಅವರು ಯಾವ ಧೋರಣೆ ಇಟ್ಟುಕೊಂಡಿದ್ದರೋ, ಅದೆಷ್ಟು ಪ್ರಖರವಾಗಿ ಆಳುವ ಸರಕಾರವನ್ನು ಕುಟುಕುತ್ತಿದ್ದರೋ, ಅಷ್ಟೇ ಖಡಕ್ಕಾಗಿ ಇಂದಿಗೂ ಅದೇ ವಿಷಯದ ಬಗ್ಗೆ ಕಾಮಿಡಿ ಮಾಡುತ್ತಾ ಇದ್ದಾರೆ. ಲಕ್ಷಗಟ್ಟಲೆ ಜನ ಅವರ ಲೈವ್ ಕಾರ್ಯಕ್ರಮಗಳನ್ನು, ವಿಡಿಯೋಗಳನ್ನು ನೋಡುತ್ತಾರೆ. ದೇಶಾದ್ಯಂತ ಅವರಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ.

ನಮಗ್ಯಾಕೆ ಪಾಲಿಟಿಕ್ಸ್ ನ ಉಸಾಬರಿ ಎಂದು ಕಾಮಿಡಿ ಮಾಡಿಕೊಂಡಿರುವವರ ನಡುವೆ, ನಾನು ಕಾಮಿಡಿ ಮಾಡೋದೇ ಸರಕಾರದ ವಿರುದ್ಧ, ಅದರ ವೈಫಲ್ಯಗಳ ವಿರುದ್ಧ, ಅದು ಮಾಡುತ್ತಿರುವ ಅನ್ಯಾಯಗಳ ವಿರುದ್ಧ... ಅದೇನು ಮಾಡ್ಕೊಳ್ತಿರೋ ಮಾಡ್ಕೊಳ್ಳಿ ಎಂಬ ಧಾಡಸೀತನ ಕುನಾಲ್ ಕಾಮ್ರಾ ಅವರದ್ದು.

ರಾಹುಲ್ ಗಾಂಧಿಯವರು ಮೋದಿ ಸರಕಾರವನ್ನು ಸರಿಯಾಗಿ ತರಾಟೆಗೆ ತೆಗೆದುಕೊಳ್ಳಲು ಶುರು ಮಾಡಿದ ಇತ್ತೀಚಿನ ಮೂರ್ನಾಲ್ಕು ವರ್ಷ ಬಿಟ್ಟರೆ, ಅದಕ್ಕಿಂತ ಮೊದಲು ದೇಶದಲ್ಲಿ ಕುನಾಲ್ ಕಾಮ್ರಾ, ವರುಣ್ ಗ್ರೋವರ್ ರಂತಹ ಕಮಿಡಿಯನ್ ಗಳೇ ನಿಜವಾದ ಪ್ರತಿಪಕ್ಷವಾಗಿದ್ದರು ಎಂಬಂತಹ ಪರಿಸ್ಥಿತಿ ಇತ್ತು.

ತನ್ನ ಕಾಮಿಡಿ ಒನ್ ಸೈಡೆಡ್ ಆಗಿದೆ ಎಂದು ದೂರುವವರಿಗೆ ರಾತ್ರಿ ಒಂಭತ್ತರ ಪ್ರೈಮ್ ಟೈಮ್ ಟಿವಿ ಕಾರ್ಯಕ್ರಮ ನೋಡಿ, ಆಮೇಲೆ ಮಾತಾಡಿ ಎಂದು ಕುನಾಲ್ ಕಾಮ್ರಾ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಾರೆ.

ಈ ನಡುವೆ ಕುನಾಲ್ ಕಾಮ್ರಾ ಎದುರಿಸಿದ ಅವಹೇಳನ, ಟ್ರೋಲಿಂಗ್, ಬೆದರಿಕೆ, ಕಾನೂನು ಸವಾಲುಗಳೂ ಬೇಕಾದಷ್ಟಿವೆ. ಪ್ರತಿ ಬಾರಿ ಮೈಕ್ ಹಿಡಿಯುವಾಗಲೂ ಯಾವ ವಿಷಯದ ಬಗ್ಗೆ ಮಾತಾಡಲು ಜನ ಹೆದರುತ್ತಾರೋ ಅದನ್ನೇ ಕಾಮಿಡಿಯ ವಸ್ತುವಾಗಿಸಿಕೊಳ್ಳೋದೇ ಕುನಾಲ್ ಕಾಮ್ರಾ ಅವರ ವಿಶೇಷತೆ.

ರಿಪಬ್ಲಿಕ್ ಟಿವಿಯ ಮಾಲಕ, ಸಂಪಾದಕ ಅರ್ನಬ್ ಗೋಸ್ವಾಮಿಯನ್ನು ವಿಮಾನದಲ್ಲಿ ಕಂಡಾಗ ಎಲ್ಲರೆದುರೇ ಅರ್ನಬ್ ಗೆ ಸವಾಲು ಹಾಕಿ, "ನನ್ನ ಜೊತೆ ಈಗ ಚರ್ಚೆ ಮಾಡು, ನೀನು ಸ್ಟುಡಿಯೋದಲ್ಲಿ ಬೊಬ್ಬೆ ಹಾಕಿದ ಹಾಗೆ ಇಲ್ಲಿ ಯಾಕೆ ಮಾಡ್ತಾ ಇಲ್ಲ" ಎಂದು ಕೇಳಿ ಸುದ್ದಿಯಾದವರು ಅರ್ನಬ್. ಅದಕ್ಕಾಗಿ ಅವರು ಆರು ತಿಂಗಳು ವಿಮಾನ ಪ್ರಯಾಣದ ನಿಷೇಧವನ್ನೂ ಎದುರಿಸಿದರು.

ಬಾಲಿವುಡ್ ನ ಹೈಕಮಾಂಡ್ ಎಂದೇ ಪರಿಗಣಿಸಲ್ಪಡುವ ಸಲ್ಮಾನ್ ಖಾನ್ ಬಗ್ಗೆ ಏನಾದರೂ ಮಾತಾಡಿದರೆ ಎಲ್ಲಿ ಎಡವಟ್ಟಾಗುತ್ತೆ ಎಂದು ಹೆದರಿ ನಟ, ನಟಿಯರು, ನಿರ್ದೇಶಕರು ಮಾತನಾಡಲು ಹಿಂಜರಿಯುತ್ತಾರೆ. ಆದರೆ ಕುನಾಲ್ ಕಾಮ್ರಾ ಸಲ್ಮಾನ್ ಖಾನ್ ಬಗ್ಗೆಯೇ ಹಿಗ್ಗಾಮುಗ್ಗಾ ತಮಾಷೆ ಮಾಡಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಮೋದಿ ಸರಕಾರ ಹಾಗು ಬಿಜೆಪಿಯ ಆಪ್ತ, ಓಲಾ ಇಲೆಕ್ಟ್ರಿಕ್ ಸ್ಕೂಟರ್ ಮಾಲಕ ಭವಿಶ್ ಅಗರ್ವಾಲ್ ಗೆ ಎಕ್ಸ್ ನಲ್ಲಿ ಸವಾಲು ಹಾಕಿ "ನೀನು ಮೊದಲು ಸರಿಯಾಗಿ ಸ್ಕೂಟರ್ ತಯಾರಿಸು, ಗ್ರಾಹಕರು ತುಂಬಾ ಸಮಸ್ಯೆಯಲ್ಲಿದ್ದಾರೆ, ಸ್ಕೂಟರ್ ಬೇಡ ಎಂದವರಿಗೆ ರೀ ಫಂಡ್ ಕೊಡು, ಮತ್ತೆ ಉಳಿದದ್ದನ್ನೆಲ್ಲ ಮಾಡು ಎಂದು ಹೇಳಿ" ಇರಿಸು ಮುರಿಸು ತಂದವರೂ ಇದೇ ಕುನಾಲ್ ಕಾಮ್ರಾ.

"ಸುಪ್ರೀಂ ಕೋರ್ಟ್ ಎಂಬುದು ಬ್ರಾಹ್ಮಣ ಬನಿಯಾ ಕೋರ್ಟ್ ಆಗಿದೆ. ಅಲ್ಲಿ ಯಾರಿಗೂ ನ್ಯಾಯ ಸಿಗುವುದಿಲ್ಲ. ಅದಕ್ಕಿಂತ ಹೆಚ್ಚು ಗೌರವವನ್ನು ನಾನು ಫುಡ್ ಕೋರ್ಟ್ ಗೆ ಕೊಡುತ್ತೇನೆ" ಎಂದು ಹೇಳಿ ಕುನಾಲ್ ಕಾಮ್ರಾ ನ್ಯಾಯಾಂಗ ನಿಂದನೆಯ ಕೇಸು ಜಡಿಸಿಕೊಂಡಿದ್ದರು. ಇನ್ನೊಮ್ಮೆ ತನ್ನ ಎಕ್ಸ್ ಪೋಸ್ಟ್ ನಲ್ಲಿ ಅಂದಿನ ಸಿಜೆಐ ಬೋಬ್ಡೇ ಅವರಿಗೆ ಮಧ್ಯದ ಬೆರಳು ತೋರಿಸಿ ಸುದ್ದಿಯಾಗಿದ್ದರು.

ಬಿಜೆಪಿ ಐಟಿ ಸೆಲ್ , ವಾಟ್ಸ್ ಆಪ್ ಯುನಿವರ್ಸಿಟಿ ಹಾಗು ಇವುಗಳಿಗೆ ಜೋತು ಬಿದ್ದಿರುವ ನಿವೃತ್ತ ಅಂಕಲ್ ಆಂಟಿಗಳು ಮುಸ್ಲಿಂ ದ್ವೇಷದಿಂದಾಗಿ ಏನೇನು ಅವಾಂತರ ಮಾಡುತ್ತಿದ್ದಾರೆ ಎಂದು ತಮ್ಮ ಕಾಮಿಡಿ ಮೂಲಕವೇ ಲಕ್ಷಾಂತರ ಜನರಿಗೆ ಕುನಾಲ್ ಕಾಮ್ರಾ ತೆರೆದಿಟ್ಟಿದ್ದರು.

ಬಿಜೆಪಿ, ಸಂಘ ಪರಿವಾರ, ಮೋದಿ ಸರಕಾರ, ಅವರ ಆಪ್ತ ಉದ್ಯಮಿಗಳು, ಬಾಬಾಗಳು, ಬೆಂಬಲಿಗ ಪಡೆ ಎಲ್ಲರನ್ನೂ ಎದುರಿಸಿ ನೀವು ಈ ದೇಶಕ್ಕೆ, ಇಲ್ಲಿನ ಜನರಿಗೆ ಅನ್ಯಾಯ ಮಾಡುತ್ತಿದ್ದೀರಿ. ನೀವು ಸರಿಯಿಲ್ಲ, ನಿಮ್ಮನ್ನು ನಾನು ನನ್ನ ಕಾಮಿಡಿ, ನನ್ನ ಮಾತು, ನನ್ನ ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಮೂಲಕ ವಿರೋಧಿಸುತ್ತೇನೆ, ಎಂದು ಘಂಟಾಘೋಷವಾಗಿ ಸಾರಿದವರು ಕುನಾಲ್ ಕಾಮ್ರಾ.

ಮೋದಿ ಸರಕಾರ ಹಾಗು ಮಡಿಲ ಮೀಡಿಯಾಗಳ ಅನ್ಯಾಯಗಳ ವಿರುದ್ಧ ಹೋರಾಡುತ್ತಿದ್ದ ಕನ್ಹಯ್ಯ ಕುಮಾರ್, ಉಮರ್ ಖಾಲಿದ್ ಮತ್ತಿತರ ಹೋರಾಟಗಾರರ ಪರ ಬೀದಿಗಿಳಿದು ಬೆಂಬಲ ವ್ಯಕ್ತಪಡಿಸಲೂ ಕುನಾಲ್ ಕಾಮ್ರಾ ಹಿಂಜರಿಯಲಿಲ್ಲ. ಮೋದಿ ವಿರುದ್ಧ ಹಾಗು ಪ್ರಗತಿಪರ ಅಭ್ಯರ್ಥಿಗಳ ಪರ ಅವರು ಚುನಾವಣಾ ಪ್ರಚಾರವನ್ನೂ ಮಾಡಿದ್ದರು. ಅವರು ಬಾಯಿ ಬಿಟ್ಟರೆ, ಅವರು ಟ್ವೀಟ್ ಮಾಡಿದರೆ ಬಿಜೆಪಿ ಹಾಗು ಅದರ ಪರಿವಾರಕ್ಕೆ ಕಸಿವಿಸಿ, ಮುಜುಗರ ಖಚಿತ ಎಂಬಂತಾಗಿದೆ.

ಈಗ ಮತ್ತೆ ಅವರ ಹೊಸ ಕಾಮಿಡಿ ಷೋ ನಯಾ ಭಾರತ್ ನಲ್ಲೂ ಅವರು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೋದಿಯವರ ಜುಮ್ಲಾಗಳು, ನಿರ್ಮಲಾ ಅವರ ಜನವಿರೋಧಿ ಆರ್ಥಿಕ ನೀತಿಗಳು, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಬ್ರಹ್ಮಾಂಡ ಭ್ರಷ್ಟಾಚಾರ, ಸಿಬಿಐ ಈ ಡಿ ಗಳ ದುರುಪಯೋಗ, ಅಂಬಾನಿ ಅದಾನಿಗಳ ಆಟ, ಅಧ್ಯಾತ್ಮದ ಹೆಸರಲ್ಲಿ ನಡೆಯುವ ವಂಚನೆ, ಇವುಗಳ ನಡುವೆ ಜನರ ಗೋಳು - ಇವೆಲ್ಲವನ್ನೂ ಅವರು ಹಾಸ್ಯ ಹಾಗು ಹಾಡುಗಳ ಮೂಲ ಚಿತ್ರಿಸಿಕೊಟ್ಟಿದ್ದಾರೆ. ಅವರ ವಿಡಿಯೋಗೆ ಒಂದೇ ದಿನದಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಬಂದಿವೆ. ಎರಡು ಲಕ್ಷದಷ್ಟು ಲೈಕುಗಳು, ಇಪ್ಪತ್ತು ಸಾವಿರದಷ್ಟು ಕಮೆಂಟುಗಳೂ ಬಂದಿವೆ.

ಈಗ ಈ ಹೊಸ ವಿಡಿಯೋದಿಂದ ಬಿಜೆಪಿ ಜೊತೆಗಿರುವ ಏಕನಾಥ ಶಿಂಧೆ ನಾಯಕತ್ವದ ಶಿವಸೇನಾ ಕಾರ್ಯಕರ್ತರು ಸಿಟ್ಟಾಗಿದ್ದಾರೆ.

ಕಾಮ್ರಾ ಆ ಕಾರ್ಯಕ್ರಮದಲ್ಲಿ ಶಿಂದೆಯನ್ನು ದ್ರೋಹಿ ಎಂದು ಬಣ್ಣಿಸಿದ್ದೇ ಅವರ ಸಿಟ್ಟಿಗೆ ಕಾರಣ. ಕಾಮ್ರಾ ಕಾರ್ಯಕ್ರಮ ರೆಕಾರ್ಡಿಂಗ್ ಆಗಿದ್ದ ಸ್ಟುಡಿಯೋಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಕಾಮ್ರಾ ಅವರ ಬಂಧನಕ್ಕೆ ಆಗ್ರಹಿಸಿದ್ದಾರೆ. ಶಿವಸೇನಾ ಸಂಸದರೊಬ್ಬರಂತೂ ಕುನಾಲ್ ಕಾಮ್ರಾ ದೇಶದಲ್ಲಿ ಎಲ್ಲೇ ಸಿಕ್ಕಿದರೂ ಅವರನ್ನು ಬಿಡುವುದಿಲ್ಲ ಎಂದು ಪರೋಕ್ಷ ಜೀವ ಬೆದರಿಕೆ ಹಾಕಿದ್ದಾರೆ. ಆ ಸ್ಟುಡಿಯೋದವರು ನಮಗೆ ಇದರ ಸಹವಾಸವೇ ಬೇಡ ಎಂದು ಸ್ಟುಡಿಯೊವನ್ನೇ ಬಂದ್ ಮಾಡಿದ್ದಾರೆ. ಆದರೆ ಕುನಾಲ್ ಕಾಮ್ರಾ ಇದರಿಂದ ಧೃತಿಗೆಟ್ಟಿಲ್ಲ. ಅವರು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಮತ್ತೆ ಸಂವಿಧಾನದ ಪ್ರತಿ ತೋರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News