5 ವರ್ಷಕ್ಕೂ ಸಿದ್ದರಾಮಯ್ಯನವರೇ ಸಿಎಂ: ಬಸವರಾಜ ರಾಯರೆಡ್ಡಿ

PC: x.com/OpIndia_com
ಬೆಂಗಳೂರು: ಮಂಡಿ ನೋವಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ 16ನೇ ಬಜೆಟ್ ರೂಪಿಸುವುದರಲ್ಲಿ ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರಮುಖ ಪಾತ್ರವಹಿಸಿದ್ದಾರೆ. ಬಸವರಾಜ ರಾಯರೆಡ್ಡಿ ಕೂಡ ಸಿದ್ದರಾಮಯ್ಯ ಅವರಂತೆ ಯಾವುದೇ ಕಾಗದ ನೋಡದೇ ಹಲವಾರು ಅಂಕಿ-ಅಂಶಗಳನ್ನು ಸಮರ್ಥವಾಗಿ ಮಂಡಿಸಬಲ್ಲವರು. ಅವರು ‘ವಾರ್ತಾಭಾರತಿ’ ಜೊತೆಗಿನ ಸಂದರ್ಶನದಲ್ಲಿ ‘5 ವರ್ಷಕ್ಕೂ ಸಿದ್ದರಾಮಯ್ಯನವರೇ ಸಿಎಂ’ ಎಂಬುದರಿಂದ ಹಿಡಿದು ಸಿದ್ದರಾಮಯ್ಯ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇ ನಮ್ಮ ಮನೆಯಲ್ಲಿ ಎಂಬ ಹೊಸ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ‘ವಾರ್ತಾಭಾರತಿ’ ನಡೆಸಿದ ಅವರ ಸಂದರ್ಶನ ಇಲ್ಲಿದೆ.
ವಾರ್ತಾಭಾರತಿ: ಕಾಂಗ್ರೆಸ್‌ನಲ್ಲಿ ಈಗ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಮುಂದಿನ ಬಜೆಟ್ ಮಂಡಿಸುತ್ತಾರೋ ಇಲ್ಲವೋ ಎಂದು ಚರ್ಚೆಯಾಗುತ್ತಿದೆ. ನಿಜಕ್ಕೂ ಸಿದ್ದರಾಮಯ್ಯ ಬದಲಾಗುತ್ತಾರಾ?
ರಾಯರೆಡ್ಡಿ: ಇವೆಲ್ಲಾ ಸುಳ್ಳು. ಸಿದ್ದರಾಮಯ್ಯ ಅವರೇ 5 ವರ್ಷಕ್ಕೆ ಸಿಎಂ. ಅವರೇ ಇನ್ನೂ 3 ಬಜೆಟ್ ಮಂಡಿಸುತ್ತಾರೆ. ಇದರಲ್ಲಿ ಯಾವ ಅನುಮಾನವೂ ಇಲ್ಲ. ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಏಕೆಂದರೆ 2 ವರ್ಷದ ಹಿಂದೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು 5 ವರ್ಷಕ್ಕೆ ಶಾಸಕಾಂಗ ಪಕ್ಷದ ನಾಯಕ ಎಂದು ಆಯ್ಕೆ ಮಾಡಲಾಗಿದೆ. ಈಗ ಬದಲಿಸಬೇಕು ಎನ್ನುವುದಾದರೆ ಮೊದಲು ಶಾಸಕರು ಸಿದ್ದರಾಮಯ್ಯ ನಾಯಕತ್ವ ಬೇಡ ಎಂದು ಹೇಳಬೇಕು. ಆಗ ಹೈಕಮಾಂಡ್ ನಾಯಕರು ಮತ್ತೆ ಶಾಸಕರ ಅಭಿಪ್ರಾಯ ಪಡೆಯಬೇಕಾಗುತ್ತದೆ. ಆದರೆ ಅಂಥ ಪರಿಸ್ಥಿತಿ ಉದ್ಭವವಾಗುವುದಿಲ್ಲ.
ವಾರ್ತಾಭಾರತಿ: ಹಿರಿಯ ನಾಯಕರಾಗಿ ನಿಮ್ಮ ಪ್ರಕಾರ ಈಗ ಪರಿಸ್ಥಿತಿ ಹೇಗಿದೆ? ಸಿದ್ದರಾಮಯ್ಯ ಅವರನ್ನು ಎಷ್ಟು ಜನ ಶಾಸಕರು ಬೆಂಬಲಿಸುತ್ತಾರೆ?
ರಾಯರೆಡ್ಡಿ: ನನ್ನ ಪ್ರಕಾರ 100ಕ್ಕಿಂತ ಹೆಚ್ಚು ಶಾಸಕರು ಸಿದ್ದರಾಮಯ್ಯ ಅವರ ಪರವಾಗಿಯೇ ಇದ್ದಾರೆ. ಸಿದ್ದರಾಮಯ್ಯ ಅವರ ಜನಪ್ರಿಯತೆ ಕಡಿಮೆ ಆಗಿಲ್ಲ.
ವಾರ್ತಾಭಾರತಿ: ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ನೀವು ಸಚಿವರಾಗಿದ್ದೀರಿ. ಈಗ ಆರ್ಥಿಕ ಸಚಿವರಾಗಿದ್ದೀರಿ. ಅಂದಿನ ಸರಕಾರಕ್ಕೂ ಇಂದಿನ ಸರಕಾರಕ್ಕೂ ಏನು ವ್ಯತ್ಯಾಸ ಗುರುತಿಸುತ್ತಿದ್ದೀರಿ?
ರಾಯರೆಡ್ಡಿ: ಆಗ ಸಾಕಷ್ಟು ಹಣ ಇತ್ತು. ಈಗ ಇಲ್ಲ. ಏಕೆಂದರೆ ಆಗ ಕಮಿಟಿಡ್ ಎಕ್ಸ್‌ಪೆಂಡಿಚರ್ 58,000 ಕೋಟಿ ರೂ.ಇತ್ತು. ಇದರ ಜೊತೆಗೆ ಹೊಸದಾಗಿ 57,000 ಕೋಟಿ ರೂ. ಸೇರಿಕೊಂಡಿದ್ದರಿಂದ ಆರಂಭದ 2 ವರ್ಷಗಳಲ್ಲಿ ಕಷ್ಟ ಆಯಿತು. ಇನ್ನು ಮುಂದೆ ಸರಿಹೋಗಲಿದೆ. ಇನ್ನೊಂದು ವಿಷಯವೇನೆಂದರೆ ಎಲ್ಲ ಗ್ಯಾರಂಟಿಗಳಿಂದ ಸಮಸ್ಯೆ ಎಂದು ಹೇಳುತ್ತಾರೆ. ಆದರೆ ನಮಗೆ ಹೊಡೆತ ಬಿದ್ದಿರುವುದು 7ನೇ ವೇತನ ಆಯೋಗದ ಶಿಫಾರಸನ್ನು ಒಪ್ಪಿರುವುದು. ಇದರ ಪ್ರಕಾರ ಸರಕಾರಿ ನೌಕರರ ಸಂಬಳ ಮತ್ತು ಪಿಂಚಣಿ 27.5% ಹೆಚ್ಚಾಗಿದೆ. ಅಂದರೆ ವರ್ಷಕ್ಕೆ 25,000 ಕೋಟಿ ರೂ.ಹೆಚ್ಚು ಹೊರೆಯಾಗಿದೆ. ರಾಜ್ಯದಲ್ಲಿ 7,10,000 ಸರಕಾರಿ ನೌಕರರಿದ್ದಾರೆ. ಅಂದರೆ ಒಟ್ಟು ಜನಸಂಖ್ಯೆಯ 1.1%. ಈ 1.1% ಜನರಿಗೆ 1,15,000 ಕೋಟಿ ಹಣ ಕೊಡುತ್ತಿದ್ದೇವೆ. ಇನ್ನೊಂದು ಕಡೆ 4 ಕೋಟಿ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಕೊಡುತ್ತಿರುವುದು 1,00,000 ಕೋಟಿ ರೂಪಾಯಿ ಮಾತ್ರ.
ವಾರ್ತಾಭಾರತಿ: ಸಿದ್ದರಾಮಯ್ಯ ಅವರ ರೀತಿ ಹೀಗೆ ನಿಖರವಾಗಿ ಮಾತನಾಡುವ ನಿಮ್ಮಂಥವರನ್ನು ಮಂತ್ರಿ ಮಾಡಿಲ್ಲ ಏಕೆ?
ರಾಯರೆಡ್ಡಿ: ನನ್ನನ್ನು ಮಂತ್ರಿ ಮಾಡಿದ್ದರು. ಆದರೆ ಕಡೆ ಘಳಿಗೆಯಲ್ಲಿ ‘ಲೋಕಸಭಾ ಚುನಾವಣೆವರೆಗೆ ಕಲ್ಬುರ್ಗಿಯಲ್ಲಿ ಬೇರೆಯವರನ್ನು ತೆಗೆದುಕೊಳ್ಳಬೇಕಾಗಿದೆ. ಒಂದು ವರ್ಷ ಕಾಯಿರಿ’ ಎಂದು ಸಿದ್ದರಾಮಯ್ಯ ಹೇಳಿದರು. ಒಪ್ಪಿಕೊಂಡೆ ಅಷ್ಟೇ. ಅದಕ್ಕಾಗಿ ನನಗೆ ಸಿಎಂ ಆರ್ಥಿಕ ಸಲಹೆಗಾರನ ಸ್ಥಾನ ಕೊಟ್ಟಿದ್ದಾರೆ.
ವಾರ್ತಾಭಾರತಿ: ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದ್ದು ನಾನೇ ಎಂದು ಕೆಲವರು ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ನನಗೊಂದು ಮಾಹಿತಿ ಇದೆ. ಸಿದ್ದರಾಮಯ್ಯ ಕಾಂಗ್ರೆಸ್ ಸೇರುವ ಮುನ್ನ ನಿಮ್ಮ ಮನೆಯಲ್ಲಿ ಸಭೆ ಸೇರಿದ್ದರು. ಅಲ್ಲೇ ನಿರ್ಧಾರ ಮಾಡಿದ್ದರು ಅಂತಾ. ನಿಜಾನಾ?
ರಾಯರೆಡ್ಡಿ: ನಿಮ್ಮ ಮಾಹಿತಿ ನೂರಕ್ಕೆ ನೂರು ನಿಜ. ಒಮ್ಮೆ ನನ್ನ ಜೊತೆ ಕಾಂಗ್ರೆಸ್ ಸೇರುವ ಸಾಧಕ ಬಾಧಕಗಳ ಬಗ್ಗೆ ಮಾತನಾಡುತ್ತಿದ್ದರು. ಆರ್.ವಿ. ದೇಶಪಾಂಡೆ ಜೊತೆ ಚರ್ಚೆ ಮಾಡೋಣ ಎಂದರು. ಎಲ್ಲಿ ಚರ್ಚೆ ಮಾಡೋಣ ಎನ್ನುವ ಪ್ರಶ್ನೆ ಉದ್ಭವಿಸಿದಾಗ ‘ನಿಮ್ಮ ಮನೆಯಲ್ಲೇ ಕುಳಿತುಕೊಳ್ಳೋಣ’ ಎಂದರು. ಒಂದು ದಿನ ನಾವೆಲ್ಲ ಕೂತು ಚರ್ಚೆ ಮಾಡಿದೆವು. ಅವತ್ತೇ ಅವರು ಕಾಂಗ್ರೆಸ್ ಸೇರಲು ನಿರ್ಧರಿಸಿದರು. ಆ ನಂತರ ಅವರು ಯಾರನ್ನು ಸಂಪರ್ಕ ಮಾಡಿದರು. ಯಾರ ಮೂಲಕ ಮಾಡಿದರು ಎನ್ನುವುದು ಬೇರೆ ವಿಷಯ.
ವಾರ್ತಾಭಾರತಿ: ಈಗ ಕಾಂಗ್ರೆಸ್‌ನಲ್ಲಿ ಇನ್ನೊಂದು ಬೆಳವಣಿಗೆ ನಡೆಯುತ್ತಿದೆ. ಕೆಲವರನ್ನು ದೆಹಲಿಗೆ ಕರೆಸಿ ಮಾತನಾಡುತ್ತಿದ್ದಾರಂತೆ. ನಿಮಗೂ ಕರೆ ಬಂದಿದೆಯಾ? ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆಯಾ?
ರಾಯರೆಡ್ಡಿ: ನನ್ನನ್ನು ಕರೆದಿಲ್ಲ. ಆದರೆ ನನಗಿರುವ ಮಾಹಿತಿ ಪ್ರಕಾರ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಬರುತ್ತಿರುವುದರಿಂದ ಈ ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಅಸಾಧ್ಯ.
ವಾರ್ತಾಭಾರತಿ: ಈ ಬಾರಿ ಮಂಡಿ ನೋವಿನಿಂದ ಬಳಲುತ್ತಿದ್ದ ಸಿಎಂ ಸಿದ್ದರಾಮಯ್ಯ ತಮ್ಮ 16ನೇ ಬಜೆಟ್ ರೂಪಿಸುವುದರಲ್ಲಿ ನಿಮ್ಮ ಪಾತ್ರ ಏನು?
ರಾಯರೆಡ್ಡಿ: ಸಿದ್ದರಾಮಯ್ಯ ಜನಪರ ನಾಯಕ. ಒಳ್ಳೆಯ ಆಡಳಿತಗಾರ. ಸಾಮಾಜಿಕ ಕಳಕಳಿ ಇರುವ ನಾಯಕ. ಲಿಂಗಾಯತರಿಗಿಂತ ಹೆಚ್ಚು ಬಸವಣ್ಣನ ತತ್ವಗಳನ್ನು ತಿಳಿದುಕೊಂಡಿರುವ ಮತ್ತು ಪಾಲಿಸುವ ನಾಯಕ ಸಿದ್ದರಾಮಯ್ಯ. ಇದರಲ್ಲಿ ಯಾವ ವಿವಾದವೂ ಇಲ್ಲ. ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ನೊಂದವರ ಬಗ್ಗೆ ಅಪಾರ ಕಾಳಜಿ ಇರುವುದರಿಂದ ಅದಕ್ಕೆ ಪೂರಕವಾಗಿ ಬಜೆಟ್ ರೂಪಿಸಬೇಕಿತ್ತು. ನಾನು ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೆಲವು ಸಲಹೆ ಕೊಟ್ಟಿದ್ದೆ. ಜೊತೆಗೆ ಸಿದ್ದರಾಮಯ್ಯ ಆರ್ಥಿಕ ಶಿಸ್ತನ್ನು ಉಲ್ಲಂಘಿಸುವಂತಿಲ್ಲ ಎನ್ನುವ ಸ್ಪಷ್ಟ ಸೂಚನೆ ನೀಡಿದ್ದರು. ಅದರ ಪ್ರಕಾರವಾಗಿ ಬಜೆಟ್ ರೂಪಿಸಲಾಗಿದೆ.
ವಾರ್ತಾಭಾರತಿ: ಸಿದ್ದರಾಮಯ್ಯ ಅವರ ಬಜೆಟ್ ತಯಾರಿ ಹೇಗಿರುತ್ತದೆ?
ರಾಯರೆಡ್ಡಿ: ಒಂದು ತಿಂಗಳ ಕಾಲ ಪ್ರತೀ ದಿನ 8 ಗಂಟೆ ಕುಳಿತು, ಪ್ರತಿ ಇಲಾಖೆಯ ಸಚಿವರು, ಹಿರಿಯ ಅಧಿಕಾರಿಗಳು, ವಿಷಯ ತಜ್ಞರು, ರಾಜಕೀಯ ಪ್ರತಿನಿಧಿಗಳು, ಸಂಘ ಸಂಸ್ಥೆಯವರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಮಂಡಿ ನೋವಿದ್ದರೂ ಹೀಗೆ ಕೂತು ಕೆಲಸ ಮಾಡಿದ್ದು ಬಜೆಟ್ ರೂಪಿಸುವ ಬಗ್ಗೆ ಅವರಿಗಿರುವ ಬದ್ಧತೆಯನ್ನು ತೋರುತ್ತದೆ.
ವಾರ್ತಾಭಾರತಿ: ಬಿಜೆಪಿಯವರು ಈ ಬಜೆಟ್ ಅನ್ನು ಹಲಾಲ್ ಬಜೆಟ್ ಎಂದು ಹೇಳುತ್ತಿದ್ದಾರಲ್ಲ?
ರಾಯರೆಡ್ಡಿ: ಹೌದು, ಇದು ಹಲಾಲ್ ಬಜೆಟ್. ಅರಬ್ಬಿ ಭಾಷೆಯಲ್ಲಿ ಹಲಾಲ್ ಎಂದರೆ ಕಾನೂನು ಬದ್ಧ ಅಂತಾ. ಕಾನೂನು ಬದ್ಧವಾಗಿದೆ ಎನ್ನುವುದಾರೆ ಅಲ್ಪಸಂಖ್ಯಾತರಿಗೆ ಅಥವಾ ಮುಸ್ಲಿಮರಿಗೆ ಯಾಕೆ ಹಣ ಕೊಡಬಾರದು? ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಪ್ರಮಾಣ 16%. ಅದರಲ್ಲಿ ಮುಸ್ಲಿಮರು 13%, ಕ್ರಿಶ್ಚಿಯನ್ನರು 2%, ಉಳಿದವರು 1%. ಈ 16% ಜನಕ್ಕೆ ಹಣ ಕೊಡಬೇಕೋ ಬೇಡವೋ? ಹಿಂದಿನ ಬಿಜೆಪಿ ಸರಕಾರದಲ್ಲಿ ಕೊಟ್ಟಿದೆ. ಕೇಂದ್ರ ಸರಕಾರವೂ ಕೊಟ್ಟಿದೆ. ಈ ವರ್ಷ ಬಜೆಟ್ ಗಾತ್ರ ದೊಡ್ಡದಾಗಿರುವುದರಿಂದ ಅದರ ಆಧಾರದ ಮೇಲೆ ಅಲ್ಪಸಂಖ್ಯಾತರಿಗೆ ಸಿಗಬೇಕಾದ ಅನುದಾನವೂ ಜಾಸ್ತಿಯಾಗಿದೆ.
ವಾರ್ತಾಭಾರತಿ: ರಾಜಕಾರಣಕ್ಕೂ ಮೀರಿ ಹಲಾಲ್ ಬಜೆಟ್ ಎಂದು ಹೇಳುವ ಮೂಲಕ ಸಮಾಜದ ಸಾಮರಸ್ಯ ಕದಡುವ ಪ್ರಯತ್ನವಾಗುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ರಾಯರೆಡ್ಡಿ: ನಾವು ಕೊಟ್ಟಿರುವುದು ಶಿಕ್ಷಣಕ್ಕೆ. ಕ್ರಿಶ್ಚಿಯನ್ನರು, ಬೌದ್ಧ, ಜೈನರಿಗೆ ಅವರದೇ ಆದ ಶಿಕ್ಷಣ ಸಂಸ್ಥೆಗಳಿವೆ. ಆದರೆ ಮುಸ್ಲಿಮ್ ಹೆಣ್ಣು ಮಕ್ಕಳ ಸ್ಥಿತಿ ಭಿನ್ನವಾಗಿದೆ. ಸುಮಾರು 70%ರಷ್ಟು ಹಿಂದೂ ಮಹಿಳೆಯರು ಶಿಕ್ಷಿತರು. ಶಿಕ್ಷಿತ ಮಸ್ಲಿಮ್ ಮಹಿಳೆಯರ ಪ್ರಮಾಣ ಶೇ.50ಕ್ಕಿಂತಲೂ ಕಮ್ಮಿ ಇದೆ. ಉನ್ನತ ಶಿಕ್ಷಣದಲ್ಲಂತೂ ಇಲ್ಲವೇ ಇಲ್ಲ. ಈ ಹಿನ್ನೆಲೆಯಲ್ಲಿ ಯಾವೊಬ್ಬ ಮುಸ್ಲಿಮ್ ನಾಯಕರೂ ವೈಯಕ್ತಿಕವಾಗಿ ಅವರ ಕ್ಷೇತ್ರಕ್ಕೆ ಹಣ ಕೇಳಿಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ಹಣ ಕೇಳಿಲ್ಲ. ಶಿಕ್ಷಣಕ್ಕೆ ಕೇಳಿದ್ದಾರೆ. ಇದನ್ನು ಮೆಚ್ಚಲೇಬೇಕಲ್ಲವೇ? ಅದಕ್ಕಾಗಿ ಶಿಕ್ಷಣಕ್ಕೆ ಹಣ ನೀಡಿದ್ದೇವೆ. 50 ವಸತಿ ಶಾಲಾ ಕಟ್ಟಡಗಳಿಗೆ ಹಣ ಕೊಟ್ಟಿದ್ದೇವೆ. ಆ ಶಾಲೆಗಳಲ್ಲಿ 75% ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು 25% ಹಿಂದೂ ವಿದ್ಯಾರ್ಥಿಗಳು ಓದುತ್ತಾರೆ. ಇದರಿಂದ ಭಾವೈಕ್ಯತೆ ಬೆಳೆಯುತ್ತದೆ. ವಿಶೇಷ ಏನೆಂದರೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲೂ ಬಹುಸಂಖ್ಯಾತ ಹೆಣ್ಣು ಮಕ್ಕಳು ಓದಲು ಅನುವು ಮಾಡಿಕೊಡುತ್ತಿದ್ದೇವೆ. ಇದು ಅಲ್ಪಸಂಖ್ಯಾತರ ಬಜೆಟ್ ಅಲಾಟ್ಮೆಂಟ್‌ನಲ್ಲೂ ಹಿಂದೂಗಳಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ.
ವಾರ್ತಾಭಾರತಿ: ವಾಸ್ತವದಲ್ಲಿ ಅಲ್ಪಸಂಖ್ಯಾತರು ಅಥವಾ ಮುಸ್ಲಿಮ್‌ರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಹಣ ಕೊಡದಿದ್ದರೂ ‘ಇದು ಓಲೈಕೆಯ ಬಜೆಟ್’ ಎಂದು ಆರೋಪ ಮಾಡಲಾಗುತ್ತಿದೆಯಲ್ಲಾ?
ರಾಯರೆಡ್ಡಿ: ಬಿಜೆಪಿಯವರಿಗೆ ರಾಜಕೀಯ ಮುಖ್ಯವೇ ಹೊರತು, ಜನರ ಅಭಿವೃದ್ಧಿ ಅಲ್ಲ. ಹಾಗೆ ನೋಡಿದರೆ ಮೋದಿ ಸರಕಾರದ ಬಜೆಟ್‌ನಲ್ಲಿ ತಾಲಿಬಾನ್ ಗೆ 200 ಕೋಟಿ ರೂ. ಕೊಟ್ಟಿದೆ. ತಾಲಿಬಾನ್ ಇದನ್ನು ಸ್ವಾಗತಿಸಿದೆ. ಶೇ.100ರಷ್ಟು ಮುಸ್ಲೀಮರೇ ಇರುವ ದೇಶಕ್ಕೆ ಏಕೆ ಹಣ ಕೊಟ್ಟರು? ಅವರನ್ನು ಬಿಡಿ. ನಮ್ಮದು ಸರ್ವರಿಗೂ ಸಲ್ಲುವ ಬಜೆಟ್.