ಪುತ್ತೂರು | ಪೊಲೀಸರೇ ಮುಕ್ತಾಯ ವರದಿ ಸಲ್ಲಿಸಿದ್ದ ಅವಳಿ ಕೊಲೆ ಪ್ರಕರಣದ ಆರೋಪಿಯ ಬಂಧನವಾಗಿದ್ದೇಗೆ?

Update: 2025-04-08 21:44 IST
ಪುತ್ತೂರು | ಪೊಲೀಸರೇ ಮುಕ್ತಾಯ ವರದಿ ಸಲ್ಲಿಸಿದ್ದ ಅವಳಿ ಕೊಲೆ ಪ್ರಕರಣದ ಆರೋಪಿಯ ಬಂಧನವಾಗಿದ್ದೇಗೆ?

Photo | indianexpress

  • whatsapp icon

ಮಂಗಳೂರು : 2008ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮವಾದ ಸಿರಿಬಾಗಿಲು ಎಂಬಲ್ಲಿ ಅವಳಿ ಕೊಲೆ ಪ್ರಕರಣ ನಡೆದಿತ್ತು. ನಾಲ್ಕು ವರ್ಷಗಳ ಕಾಲ ಕೊಲೆ ಆರೋಪಿಯ ಬಗ್ಗೆ ಯಾವುದೇ ಸುಳಿವು ಸಿಗದೆ ಪ್ರಕರಣವು ನೆನೆಗುದಿಗೆ ಬಿದ್ದಿತ್ತು. ಆದರೆ, ಕೇರಳದಲ್ಲಿ ನಡೆದ ಅಪರೂಪದ ಒಂದು ಸಣ್ಣ ಘಟನೆ ಆರೋಪಿಯ ಬಂಧನಕ್ಕೆ ಹಾದಿ ಮಾಡಿಕೊಟ್ಟಿತ್ತು.

ಅಂದು, 2008ರ ಆಗಸ್ಟ್ 2, ಮಂಗಳೂರಿನಿಂದ 51ಕಿಮೀ ದೂರದಲ್ಲಿರುವ ಪಶ್ಚಿಮ ಘಟ್ಟದ ಕುಗ್ರಾಮವಾದ ಸಿರಿಬಾಗಿಲು ಎಂಬಲ್ಲಿ ಮನೆಯೊಂದರಲ್ಲಿ ಸೌಮ್ಯ(23) ಮತ್ತು ಆಕೆಯ ಮೂರು ವರ್ಷದ ಪುಟ್ಟ ಮಗುವಿನ ಕೊಲೆ ನಡೆದಿತ್ತು.

ಸೌಮ್ಯ ಮತ್ತು ಮಗುವಿನ ಕೊಲೆ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ತನಿಖೆಯ ವೇಳೆ ಪೊಲೀಸರು ಸೌಮ್ಯಳ ಚಿನ್ನದ ಸರ ನಾಪತ್ತೆಯಾಗಿರುವುದನ್ನು ಪತ್ತೆ ಹಚ್ಚಿದರು. ಪ್ರಕರಣವನ್ನು ಮತ್ತಷ್ಟು ಕೆದಕುತ್ತಾ ಹೋದ ಪೊಲೀಸರಿಗೆ ಸೌಮ್ಯಾಳ ಮೈದುನ ಜಯೇಶ್ ಕೃತ್ಯ ನಡೆದ ದಿನ ಆಕೆಯ ಮನೆಗೆ ಬಂದಿರುವುದು ತಿಳಿಯಿತು. ಜಯೇಶ್ ಸೌಮ್ಯಳ ಮನೆಯಿಂದ ಹೋಗಿರುವುದನ್ನು ನೋಡಿದ ಸ್ಥಳೀಯರೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದರು.

ಇದರಿಂದಾಗಿ ಪೊಲೀಸರು ಜಯೇಶ್‌ ಪತ್ತೆಗೆ ಹುಡುಕಾಟ ಪ್ರಾರಂಭಿಸಿದರು. ಜಯೇಶ್ ತೆರಳುತ್ತಿದ್ದ ಎಲ್ಲಾ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದರೂ ಪೊಲೀಸರಿಗೆ ಜಯೇಶ್‌ನನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಆದರೆ, ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಮೀರ್ ಮತ್ತು ಜಯೇಶ್‌ಗೆ ಉತ್ತಮ ಬಾಂಧವ್ಯ ಇತ್ತು ಎಂದು ಪೊಲೀಸರಿಗೆ ತಿಳಿಯಿತು.

ಸಮೀರ್ ಜಯೇಶ್‌ನ ಬಾಲ್ಯದ ಗೆಳೆಯ. ಜಯೇಶ್ 17ನೇ ವಯಸ್ಸಿನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. ಪೊಲೀಸರ ತಂಡ ಸಮೀರ್ ಮನೆಗೆ ತೆರಳಿ ವಿಚಾರಣೆ ನಡೆಸಿತು. ಈ ವೇಳೆ ಸಮೀರ್ ತಾಯಿ ರುಕಿಯಾ ಬಾನು ಮೂಲಕ ಜಯೇಶ್ ಚಿನ್ನದ ಸರ ಮಾರಾಟ ಮಾಡಿರುವುದು ಬಯಲಾಯಿತು. ಚಿನ್ನದ ಅಂಗಡಿಗೆ ತೆರಳಿ ಸರವನ್ನು ವಶಪಡಿಸಿಕೊಂಡರು. ಆದರೆ, ಸೌಮ್ಯ ಮತ್ತು ಆಕೆಯ ಮಗುವನ್ನು ಕೊಲೆ ಮಾಡಿ ಜಯೇಶ್ ಚಿನ್ನಾಭರಣ ತಂದಿದ್ದ ಎನ್ನುವುದು ಸಮೀರ್ ಮತ್ತು ತಾಯಿ ರುಕಿಯಾಗೆ ತಿಳಿದಿರಲಿಲ್ಲ ಎಂದು ತನಿಖೆಯ ವೇಳೆ ಪೊಲೀಸರಿಗೆ ಮನವರಿಕೆಯಾಯಿತು.

ಸೌಮ್ಯ ಕೊಲೆ ನಡೆದಾಗ ಜಯೇಶ್‌ಗೆ 20 ವರ್ಷ ವಯಸ್ಸಿತ್ತು. ಜಯೇಶ್ ತಂದೆ ಶಶಿಕಾಂತ್. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಜಯೇಶ್ ತನ್ನ ಹೆಸರನ್ನು ಶಾಕೀರ್ ಅಲಿಯಾಸ್ ಶಾಹಿರ್ ಎಂದು ಮರುನಾಮಕರಣ ಮಾಡಿದ. ಸೌಮ್ಯಳ ಕೊಲೆಗೂ ಮುನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಜಯೇಶ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಪೋಲೀಸರ ಬಳಿ ಆತನ ನಾಲ್ಕು ವರ್ಷದ ಹಿಂದಿನ ಪೋಟೋ ಕೂಡ ಇತ್ತು.

ʼಜಯೇಶ್ ಸಮೀರ್‌ನನ್ನು ಫೋನ್ ಮೂಲಕ ಅಥವಾ ವೈಯಕ್ತಿಕವಾಗಿ ಸಂಪರ್ಕಿಸುತ್ತಾನೆ ಎಂದು ನಾವು ಭಾವಿಸಿದ್ದೆವು. ಸಮೀರ್ ಮೇಲೆ ನಾವು ನಿಗಾ ವಹಿಸಿದ್ದೆವು . ಆದರೆ ಆತ ಸಮೀರ್‌ಗೆ ಸಂಪರ್ಕಿಸಿಲ್ಲʼ ಎಂದು ಪೊಲೀಸರು ಹೇಳಿದರು.

ಜಯೇಶ್‌ನನ್ನು ಪತ್ತೆ ಹಚ್ಚುವಲ್ಲಿ ವಿಫಲವಾದ ಪೊಲೀಸರು ಪ್ರಕರಣದಲ್ಲಿ ಮುಕ್ತಾಯದ ವರದಿಯನ್ನು ಸಲ್ಲಿಸಿದರು. ಪ್ರಕರಣದ ಬಗ್ಗೆ ಜನರಿಗಿದ್ದ ಆತಂಕ ಕೂಡ ಕಾಲ ಕ್ರಮೇಣ ಮರೆಯಾಯಿತು.

ಅಷ್ಟರ ವೇಳೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಸುರೇಶ್ ಕುಮಾರ್ ಪಿ. ವರ್ಗಾವಣೆಗೊಂಡರು. ʼಜಯೇಶ್ ಎಲ್ಲಿದ್ದಾನೆಂದು ನಮಗೆ ತಿಳಿದಿಲ್ಲ ಮತ್ತು ಪ್ರಾಮಾಣಿಕವಾಗಿ, ಅವನನ್ನು ಪತ್ತೆಹಚ್ಚಲು ಯಾವುದೇ ಪ್ರಯತ್ನಗಳು ನಡೆದಿಲ್ಲ. ನಮ್ಮ ಬಳಿ ಇರುವ ಏಕೈಕ ಸುಳಿವು ಎಂದರೆ ಕೊಲೆಗಿಂತ ನಾಲ್ಕು ವರ್ಷಗಳ ಮೊದಲು ತೆಗೆದ ಆತನ ಫೋಟೊ ಎಂದು ಸುರೇಶ್ ಕುಮಾರ್ ಹೇಳಿದರು.

ಆರೋಪಿ ಬಗ್ಗೆ ಸುಳಿವು ಸಿಕ್ಕಿದ್ದೇಗೆ?

ಅಕ್ಟೋಬರ್ 2012ರಲ್ಲಿ ಕೇರಳದಲ್ಲಿ ಘಟನೆಯೊಂದು ನಡೆಯಿತು. ಅಕ್ಟೋಬರ್ 7ರಂದು ಅಲಪ್ಪುಝದಲ್ಲಿ ಮದ್ಯದ ಅಮಲಿನಲ್ಲಿ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಜಯೇಶ್ ಮತ್ತು ಆತನ ಸ್ನೇಹಿತ ಅನಸ್‌ನನ್ನು ಬಂಧಿಸಲಾಗಿತ್ತು. ಆದರೆ, ಜಯೇಶ್ ಪೊಲೀಸರಿಂದ ತಪ್ಪಿಸಿಕೊಂಡು ತೆಂಗಿನ ಮರ ಹತ್ತಿ ಕುಳಿತಿದ್ದಾನೆ. ಘಟನೆಯ ವರದಿಯು ಎಲ್ಲರ ಗಮನ ಸೆಳೆಯಿತು. ಪೊಲೀಸರು ಹಲವು ಬಾರಿ ಮನವಿ ಮಾಡಿದರೂ ಆತನ ಮರದಿಂದ ಕೆಳಗಿಳಿಯಲು ನಿರಾಕರಿಸಿದ್ದಾನೆ. ಜಯೇಶ್ ಪೊಲೀಸರು ಕಣ್ಣು ತಪ್ಪಿಸಿ ತೆಂಗಿನ ಮರ ಹತ್ತಿ ಕುಳಿತಿರುವ ವೀಡಿಯೊ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಯ್ತು. ಕೊನೆಗೆ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿ ಆತನನ್ನು ಕೆಳಗಿಳಿಸಿದರು.

ʼಕೇರಳದಲ್ಲಿ ಜಯೇಶ್‌ನನ್ನು ವಿಚಾರಣೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಯೋರ್ವರು ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಹಲ್ಲೆ ಪ್ರಕರಣದಲ್ಲಿ ಬಂಧಿಸಿರುವುದಾಗಿ ತಿಳಿಸಲು ನನಗೆ ಕರೆ ಮಾಡಿದರು. ನಾಲ್ಕು ವರ್ಷಗಳಿಂದ ಇತ್ಯರ್ಥವಾಗದೇ ಉಳಿದಿದ್ದ ಜೋಡಿ ಕೊಲೆ ಪ್ರಕರಣ ನನ್ನ ಮನದಲ್ಲಿ ಮೂಡಿತು. ನಾವು ಕೇರಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಅದು ಜಯೇಶ್ ಎನ್ನುವುದು ತಿಳಿಯಿತುʼ ಎಂದು ಸುರೇಶ್ ಕುಮಾರ್ ಹೇಳಿದರು.

ಕೇರಳದಲ್ಲಿ ಮದುವೆಯಾಗಿದ್ದ ಆರೋಪಿ!

ಸೌಮ್ಯ ಮತ್ತು ಆಕೆಯ ಮಗುವನ್ನು ಕೊಲೆ ಮಾಡಿದ ಬಳಿಕ ಜಯೇಶ್ ಅಲಿಯಾಸ್ ಶಾಕೀರ್ ಕೇರಳಕ್ಕೆ ಪರಾರಿಯಾದನು. ಅಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಆತ, ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾದನು. ಆ ದಂಪತಿಗೆ ಒಂದು ಮಗು ಕೂಡ ಇದೆ.

ʼಇದು ಕೇವಲ ಮಹಿಳೆಯ ಮೇಲಿನ ಹಲ್ಲೆ ಪ್ರಕರಣವಾಗಿದ್ದರೆ, ಮಾಧ್ಯಮಗಳು ಅದನ್ನು ಹೆಚ್ಚಾಗಿ ವರದಿ ಮಾಡುತ್ತಿರಲಿಲ್ಲ. ಅವನು ತೆಂಗಿನ ಮರ ಹತ್ತಿದ ಕಾರಣ ಅದು ಹೆಚ್ಚು ಸುದ್ದಿಯಾಯ್ತು. ಅವನು ತೆಂಗಿನ ಮರ ಹತ್ತದಿದ್ದರೆ, ನಾವು ಅವನನ್ನು ಬಂಧಿಸುತ್ತಲೇ ಇರಲಿಲ್ಲʼ ಎಂದು ಸುರೇಶ್ ಕುಮಾರ್ ನೆನಪಿಸಿಕೊಂಡರು.

ಹಣದ ಅವಶ್ಯಕತೆ ಇದ್ದ ಕಾರಣ ಚಿನ್ನವನ್ನು ಕಳ್ಳತನ ಮಾಡಲು ಸೌಮ್ಯಾಳನ್ನು ಕೊಲೆ ಮಾಡಿ ಬಳಿಕ ಸಾಕ್ಷಿ ನಾಶ ಮಾಡುವ ದೃಷ್ಟಿಯಿಂದ ಮಗುವನ್ನು ಕೊಲೆ ಮಾಡಿರುವುದಾಗಿ ವಿಚಾರಣೆಯ ವೇಳೆ ಜಯೇಶ್ ಬಾಯ್ಬಿಟ್ಟಿದ್ದಾನೆ.

ಆರೋಪ ಪಟ್ಟಿ ಸಲ್ಲಿಕೆ

ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸರು ಜಯೇಶ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದರು. 27 ವ್ಯಕ್ತಿಗಳ ಹೇಳಿಕೆಗಳು ಮತ್ತು 15 ಸಾಕ್ಷಿಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ

2016ರ ಆಗಸ್ಟ್ 9ರಂದು ದಕ್ಷಿಣ ಕನ್ನಡದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಯೇಶ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿತು.

ʼವಿಚಾರಣೆಯ ಅಂತ್ಯದ ವೇಳೆಗೆ ಜಯೇಶ್ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅರಿತುಕೊಂಡೆ, ಇಬ್ಬರನ್ನು ಕೊಲೆ ಮಾಡಿದ ಬಳಿಕ ಜಯೇಶ್ ನಡೆದುಕೊಂಡು ಹೋಗುತ್ತಿರುವುದನ್ನು ಪ್ರತ್ಯಕ್ಷದರ್ಶಿಗಳು ನೋಡಿದರು. ಆತ ಕೃತ್ಯ ನಡೆಸಿರುವ ಬಗ್ಗೆ ವೈಜ್ಞಾನಿಕ ಪುರಾವೆಗಳಿವೆ. ಆರೋಪಿಯಿಂದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ಮುಕ್ತಾಯಗೊಳ್ಳುತ್ತಿದ್ದಂತೆ ಜಯೇಶ್ ವಿವೇಚನಾರಹಿತವಾಗಿ ವರ್ತಿಸಲು ಪ್ರಾರಂಭಿಸಿದ. ಒಂದು ಬಾರಿ ವಿಚಾರಣೆಯ ವೇಳೆ ಆತ ನ್ಯಾಯಾಧೀಶರತ್ತ ಚಪ್ಪಲಿ ಎಸೆದನುʼ ಎಂದು ಸುರೇಶ್ ನೆನಪಿಸಿಕೊಂಡರು.

ಮರಣದಂಡನೆ ಶಿಕ್ಷೆ ಪ್ರಶ್ನಿಸಿ ಜಯೇಶ್ ಕರ್ನಾಟಕ ಹೈಕೋರ್ಟ್ ಮೊರೆ ಹೋದ. 2017ರ ಅಕ್ಟೋಬರ್ 13ರಂದು ಮರಣದಂಡನೆ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತು.

ಜೈಲಿನಲ್ಲಿದ್ದುಕೊಂಡೇ ಕೇಂದ್ರ ಸಚಿವರಿಗೆ ಬೆದರಿಕೆ ಕರೆ!

ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಜಯೇಶ್‌ನನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರಿಸಲಾಯಿತು. ಜಯೇಶ್ ಹಿಂಡಲಗಾ ಜೈಲಿನಿಂದಲೇ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡು 100 ಕೋಟಿ ರೂ. ಹಣ ನೀಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ ಮಾಡಿದ್ದ. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಅಂತಿಮವಾಗಿ ಮುಂಬೈ ನ್ಯಾಯಾಲಯದ ಮುಂದೆ ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಮುಕ್ತಾಯದ ವರದಿಯನ್ನು ಸಲ್ಲಿಸಿತು.

ಸೌಜನ್ಯ : indianexpress


Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News