ಅಮೇರಿಕದಲ್ಲಿ ಟ್ರಂಪ್ ಬೆಂಬಲಿಗ ಝುಕರ್ಬರ್ಗ್, ಬೆನ್ನ ಹಿಂದೆ ಚೀನಾದ ಸೇವಕ!

Update: 2025-04-16 23:51 IST
ಅಮೇರಿಕದಲ್ಲಿ ಟ್ರಂಪ್ ಬೆಂಬಲಿಗ ಝುಕರ್ಬರ್ಗ್, ಬೆನ್ನ ಹಿಂದೆ ಚೀನಾದ ಸೇವಕ!
  • whatsapp icon

ಸಾಮಾಜಿಕ ಜಾಲತಾಣ ದೈತ್ಯ ಕಂಪನಿ ಮೆಟಾ ಎಐ, ಸೆನ್ಸರ್‌ಶಿಪ್ ಮತ್ತಿತರ ವಿಷಯಗಳಲ್ಲಿ ಚೀನಾ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡಿದ್ದು, ನಂತರ ಅಮೆರಿಕ ಸಂಸತ್ ಗೆ ಸುಳ್ಳು ಹೇಳಿದೆ ಎಂದು ಫೇಸ್‌ಬುಕ್ ಮಾಜಿ ಉದ್ಯೋಗಿ ಸಾರಾ ವಿನ್-ವಿಲಿಯಮ್ಸ್ ಆರೋಪಿಸಿದ್ದಾರೆ.

ಸಾರಾ ವಿನ್-ವಿಲಿಯಮ್ಸ್ 2011 ರಲ್ಲಿ ಗ್ಲೋಬಲ್ ಪಬ್ಲಿಕ್ ಪಾಲಿಸಿ ನಿರ್ದೇಶಕಿಯಾಗಿ ಆಗ ಫೇಸ್‌ಬುಕ್ ಎಂದು ಕರೆಯಲಾಗುತ್ತಿದ್ದ ಮೆಟಾದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಅಲ್ಲಿ ಸುಮಾರು ಏಳು ವರ್ಷಗಳ ಕಾಲ ಕೆಲಸ ಮಾಡಿದ ಅವರು, ಕಂಪನಿ ಚೀನೀ ಕಮ್ಯುನಿಸ್ಟ್ ಪಕ್ಷಕ್ಕೆ ಕಸ್ಟಮ್ ಬಿಲ್ಟ್ ಸೆನ್ಸರ್‌ಶಿಪ್ ಪರಿಕರಗಳನ್ನು ಒದಗಿಸುವುದನ್ನು ತಾನು ನೋಡಿದ್ದೇನೆ ಎಂದು ಅಮೇರಿಕಾದ ಸೆನೆಟ್ ಸಮಿತಿಯ ಸದಸ್ಯರೆದುದು ಹೇಳಿದ್ದಾರೆ.

ಚೀನಾದ ಅಧಿಕಾರಿಗಳ ಒತ್ತಡದ ನಂತರ 2017 ರಲ್ಲಿ ಯುಎಸ್ ನಲ್ಲಿ ವಾಸಿಸುವ ಚೀನೀ ಭಿನ್ನಮತೀಯರನ್ನು ಫೇಸ್‌ಬುಕ್‌ ನಿಂದ ತೆಗೆದುಹಾಕಲಾಯಿತು ಎಂದು ಅವರು ಹೇಳಿದ್ಧಾರೆ. ಆ ಸಮಯದಲ್ಲಿ ಫೇಸ್‌ಬುಕ್ ಆಡಳಿತ ಬೇರೊಬ್ಬರ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ವಿಮರ್ಶಕ ಗುವೊ ವೆಂಗುಯಿ ವಿರುದ್ಧ ಕ್ರಮ ಕೈಗೊಂಡಿತ್ತು ಎಂದಿದ್ದಾರೆ.

ಉನ್ನತ ಫೇಸ್‌ಬುಕ್ ಕಾರ್ಯನಿರ್ವಾಹಕರು ಚೀನಾದ ಅಧಿಕಾರಿಗಳನ್ನು ನಿಯಮಿತವಾಗಿ ಭೇಟಿಯಾಗುತ್ತಿದ್ದರು ಎಂದು ಸಾರಾ ವಿನ್-ವಿಲಿಯಮ್ಸ್ ಹೇಳಿದ್ದಾರೆ. ಯುಎಸ್ ಕಂಪನಿಗಳೊಂದಿಗೆ ಸ್ಪರ್ಧಿಸಲು ತಂತ್ರಜ್ಞಾನದ ಬಗ್ಗೆ ಅವರಿಗೆ ಶಿಕ್ಷಣ ನೀಡುತ್ತಿದ್ದರು ಎಂಬ ವಿಷಯವನ್ನೂ ಅವರು ಬಹಿರಂಗಪಡಿಸಿದ್ಧಾರೆ.

ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝುಕರ್‌ಬರ್ಗ್ ಇದುವರೆಗೆ ಮಾಡಿದ ಅತ್ಯಂತ ದೊಡ್ಡ ತಂತ್ರವೆಂದರೆ ಅಮೆರಿಕದ ಧ್ವಜವನ್ನು ತನ್ನ ಸುತ್ತಲೂ ಸುತ್ತಿಕೊಂಡು ದೇಶಭಕ್ತ ಎಂದು ತೋರಿಸಿಕೊಂಡದ್ದು ಎಂದು ಅವರು ಆರೋಪಿಸಿದ್ದಾರೆ. ಕಳೆದ ದಶಕದಲ್ಲಿ ಚೀನಾದಲ್ಲಿ 18 ಬಿಲಿಯನ್ ಡಾಲರ್ ವ್ಯವಹಾರ ನಡೆಸಿದಾಗಲೂ, ಯಾವುದೇ ಸೇವೆಗಳನ್ನು ಅಲ್ಲಿ ನೀಡಿಲ್ಲ ಎಂದು ಸುಳ್ಳು ಹೇಳಿದರು ಎಂದು ಸಾರಾ ವಿನ್-ವಿಲಿಯಮ್ಸ್ ಹೇಳಿದ್ದಾರೆ.

ತೈವಾನ್ ಮತ್ತು ಹಾಂಗ್ ಕಾಂಗ್‌ನಲ್ಲಿನ ಬಳಕೆದಾರರ ಮೇಲೆ ಪರೀಕ್ಷಿಸಲಾದ ಸೆನ್ಸರ್‌ಶಿಪ್ ಪರಿಕರಗಳನ್ನು ನಿರ್ಮಿಸಲು ಮೆಟಾ ಚೀನೀ ಕಮ್ಯುನಿಸ್ಟ್ ಪಕ್ಷದೊಂದಿಗೆ ಕೈಜೋಡಿಸಿ ಕೆಲಸ ಮಾಡುವುದನ್ನು ತಾವು ಕಂಡಿದ್ದಾಗಿಯೂ ಅವರು ಹೇಳಿದ್ದಾರೆ.

ಮೆಟಾ ಕಾರ್ಯನಿರ್ವಾಹಕರು ಪದೇ ಪದೇ ಯುಎಸ್ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುವುದನ್ನು ಮತ್ತು ಅಮೇರಿಕನ್ ಮೌಲ್ಯಗಳಿಗೆ ದ್ರೋಹ ಮಾಡುವುದನ್ನು ನಾನು ನೋಡಿದ್ದೇನೆ ಎಂದು ಸಾರಾ ವಿನ್-ವಿಲಿಯಮ್ಸ್ ಹೇಳಿದ್ದಾರೆ.

ಅಮೆರಿಕದ ನೆಲದಲ್ಲಿ ವಾಸಿಸುವ ಪ್ರಮುಖ ಚೀನೀ ಭಿನ್ನಮತೀಯ ವ್ಯಕ್ತಿಯ ಖಾತೆಯನ್ನು ಫೇಸ್‌ಬುಕ್ ಅಳಿಸಬೇಕೆಂದು ಬೀಜಿಂಗ್ ಒತ್ತಾಯಿಸಿದಾಗ, ಝುಕರ್‌ಬರ್ಗ್ ಅದನ್ನು ಮಾಡಿದರು ಮತ್ತು ಸೆನೆಟ್ ವಿಚಾರಣೆಯಲ್ಲಿ ಘಟನೆಯ ಬಗ್ಗೆ ಕೇಳಿದಾಗ ಕಾಂಗ್ರೆಸ್‌ಗೆ ಸುಳ್ಳು ಹೇಳಿದರು ಎಂದು ಸಾರಾ ವಿನ್-ವಿಲಿಯಮ್ಸ್ ಆರೋಪಿಸಿದ್ದಾರೆ.

ಚೀನಾದ ಅಧಿಕಾರಿಗಳು ಅಮೇರಿಕನ್ ಬಳಕೆದಾರರ ಡೇಟಾವನ್ನು ಪ್ರವೇಶಿಸುವ ಸಾಧ್ಯತೆ ಬಗ್ಗೆಯೂ ಸಾರಾ ವಿನ್-ವಿಲಿಯಮ್ಸ್ ಹೇಳಿದ್ದಾರೆ.

ಮೆಟಾ ಎಂಜಿನಿಯರ್‌ಗಳು ಡೇಟಾ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ, ಝುಕರ್‌ಬರ್ಗ್ ಸೇರಿದಂತೆ ಮೆಟಾ ಆಡಳಿತ ಅಸಡ್ಡೆ ತೋರಿಸಿತ್ತು ಎಂದು ಅವರು ಸಾಕ್ಷ್ಯ ಹೇಳಿದ್ದಾರೆ. ಝುಕರ್‌ಬರ್ಗ್ ಚೀನಾದೊಂದಿಗಿನ ಮೆಟಾದ ವ್ಯವಹಾರ ಸಂಬಂಧದಲ್ಲಿ ವೈಯಕ್ತಿಕವಾಗಿ ಹೂಡಿಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸಾರಾ ಅವರ ಹೇಳಿಕೆಯನ್ನು ಆಲಿಸಿರುವ ಅಪರಾಧ ಹಾಗು ಭಯೋತ್ಪಾದನೆ ವಿರೋಧಿ ಸೆನೆಟ್ ನ್ಯಾಯಾಂಗ ಉಪಸಮಿತಿಯ ಅಧ್ಯಕ್ಷ ಜೋಶ್ ಹಾವ್ಲಿ ಮಿಸೊರಿ ಅವರು "ಮೆಟಾ ಸಿಇಒ ಮಾರ್ಕ್ ಝುಕರ್ಬರ್ಗ್ ಅವರು ಸೆನ್ಸರ್ ಶಿಪ್ ಅನ್ನೇ ತನ್ನ ಬಿಸಿನೆಸ್ ಮಾಡೆಲ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

"ನಮ್ಮೆದುರು ಇರುವ ಅತ್ಯಂತ ಸ್ಪಷ್ಟ ಸಾಕ್ಷ್ಯಗಳ ಆಧಾರದಲ್ಲಿ ಒಂದು ಕಂಪೆನಿ ಹಾಗು ಅದರ ನಾಯಕತ್ವ ಅಮೆರಿಕಾದ ಪ್ರಮುಖ ಪ್ರತಿಸ್ಪರ್ಧಿ ಹಾಗು ಎದುರಾಳಿಯ ಜೊತೆ ಸೇರಿಕೊಂಡು ಏನು ಬೇಕಾದರೂ ಮಾಡಲು ಸಿದ್ಧವಿದೆ ಎಂಬುದನ್ನು ಕಂಡಿದ್ದೇವೆ" ಎಂದು ಹಾವ್ಲಿ ಹೇಳಿದ್ದಾರೆ.

ಚೀನಾದ ಎಐ ತಂತ್ರಜ್ಞಾನ ಡೀಪ್‌ಸೀಕ್‌ಗೆ ಸಹಾಯ ಮಾಡಲು ʼಲಾಮಾʼ ಎಂಬ ಮೆಟಾದ ಎಐ ಮಾದರಿಯನ್ನು ಬಳಸಲಾಗಿದೆ ಎಂದು ಕೂಡ ಸಾರಾ ವಿನ್-ವಿಲಿಯಮ್ಸ್ ಆರೋಪಿಸಿದ್ದಾರೆ.

ಡೀಪ್ಸೀಕ್ ಒಂದು ಚೀನೀ AI ಕಂಪನಿಯಾಗಿದ್ದು, ಈ ವರ್ಷದ ಆರಂಭದಲ್ಲಿ ಅದರ ಕಡಿಮೆ ವೆಚ್ಚದ AI ಮಾದರಿ OpenAI ನ ChatGPT ಗೆ ಪೈಪೋಟಿ ಒಡ್ಡುವಂಥದ್ದಾಗಿದೆ ಎಂದು ಗೊತ್ತಾದಾಗ ಅಮೇರಿಕನ್ ತಂತ್ರಜ್ಞಾನ ವಲಯದಲ್ಲಿ ಆಘಾತ ಉಂಟಾಗಿತ್ತು. ಆದರೆ ಮೆಟಾ ಸಂವಹನ ನಿರ್ದೇಶಕ ಆಂಡಿ ಸ್ಟೋನ್ ಅವರು ಸಾರಾ ವಿನ್-ವಿಲಿಯಮ್ಸ್ ಅವರ ಆರೋಪಗಳನ್ನು ತಳ್ಳಿಹಾಕಿದ್ದು, ಅದು ಪೂರ್ತಿಯಾಗಿ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.

ಚೀನಾದಲ್ಲಿ ಸೇವೆಗಳನ್ನು ನೀಡುವ ವಿಚಾರವಾಗಿ ಆಸಕ್ತಿಯ ಬಗ್ಗೆ ಮಾರ್ಕ್ ಝುಕರ್‌ಬರ್ಗ್ ಸ್ವತಃ ಬಹಿರಂಗಪಡಿಸಿದ್ದರು ಮತ್ತು ವಿವರಗಳನ್ನು ದಶಕದ ಹಿಂದೆಯೇ ವ್ಯಾಪಕವಾಗಿ ವರದಿ ಮಾಡಲಾಗಿತ್ತು, ಆದರೆ ವಾಸ್ತವವಾಗಿ ನಾವು ಚೀನಾದಲ್ಲಿ ನಮ್ಮ ಸೇವೆಗಳನ್ನು ನೀಡುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News