ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದ್ದ ವ್ಯಕ್ತಿಯಿಂದಲೇ ನಡೆದಿತ್ತು ಯೋಜಿತ ಕೊಲೆ!

Update: 2025-04-06 21:36 IST
ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದ್ದ ವ್ಯಕ್ತಿಯಿಂದಲೇ ನಡೆದಿತ್ತು ಯೋಜಿತ ಕೊಲೆ!

PC : indianexpress.com

  • whatsapp icon

ಬೆಂಗಳೂರು : ಹಾಸನ ಜಿಲ್ಲೆಯ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ʼಅಪಘಾತʼ ಪ್ರಕರಣವೊಂದರ ಅಸಲಿಯತ್ತು ಬಹಿರಂಗವಾಗಿದೆ. ರಜನೀಕಾಂತ್ ಚಲನಚಿತ್ರದಿಂದ ಪ್ರೇರಿತವಾಗಿ ವ್ಯಕ್ತಿಯೋರ್ವನನ್ನು ಯೋಜಿತವಾಗಿ ಕೊಲೆ ನಡೆಸಲಾಗಿತ್ತು. ಇಷ್ಟೇ ಅಲ್ಲದೆ ಪತಿ-ಪತ್ನಿ ಸೇರಿಕೊಂಡು ಪ್ರಹಸನವನ್ನೇ ಹೆಣೆದಿದ್ದರು.

ಈ ಪ್ರಹಸನದಲ್ಲಿ ಪತಿಯೇ ʼಸತ್ತ ವ್ಯಕ್ತಿʼ, ಪತ್ನಿಯೇ ದೂರುದಾರೆ. ಆದರೆ, ಕೊನೆಗೆ ತನಿಖೆ ನಡೆಸಿದ ಪೊಲೀಸರು ಈ ಇಬ್ಬರನ್ನು ಕೂಡ ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ಪತಿ ಅಪಘಾತದಲ್ಲಿ ಮೃತಪಟ್ಟಿದ್ದಾನೆಂದು ದೂರು ನೀಡಿದ್ದ ಪತ್ನಿ!

2024ರ ಆಗಸ್ಟ್ 13ರಂದು ಶಿಲ್ಪಾರಾಣಿ(39) ಎಂಬಾಕೆ ಗಂಡಸಿ ಪೊಲೀಸ್ ಠಾಣೆಗೆ ತೆರಳಿ ನನ್ನ ಪತಿ ಮುನಿಸ್ವಾಮಿ ಗೌಡ (49) ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಅರಸೀಕೆರೆ ಬಳಿ ವಾಹನದ ಟೈರ್ ಬದಲಾಯಿಸುತ್ತಿದ್ದಾಗ ಆತನಿಗೆ ಲಾರಿ ಡಿಕ್ಕಿ ಹೊಡೆದಿದೆ. ನನ್ನ ಪುತ್ರಿ ಮಂಗಳೂರಿನಲ್ಲಿ ವಿದ್ಯಾರ್ಥಿನಿಯಾಗಿದ್ದು, ಆಕೆಯನ್ನು ಭೇಟಿಯಾಗಿ ಹಿಂದಿರುಗುತ್ತಿದ್ದಾಗ ಮಾರ್ಗ ಮಧ್ಯೆ ಕಾರಿನ ಟೈರ್ ಪಂಕ್ಚರ್ ಆಯಿತು. ಚಾಲಕ ಸೋಮೇಶ್ ಜೊತೆ ಸೇರಿ ಮುನಿಸ್ವಾಮಿ ಕಾರಿನ ಟೈರ್ ಬದಲಾಯಿಸಲು ಯತ್ನಿಸುತ್ತಿದ್ದಾಗ ಲಾರಿ ಢಿಕ್ಕಿ ಹೊಡೆಯಿತು. ಘಟನೆಯಲ್ಲಿ ಮುನಿಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಶಿಲ್ಪಾರಾಣಿ ಹೇಳಿದ್ದಳು.

ಶಿಲ್ಪಾರಾಣಿ ದೂರು ನೀಡಿದ ನಂತರ ಪೊಲೀಸರು ಅಪಘಾತಕ್ಕೆ ಕಾರಣವಾದ ಲಾರಿಗಾಗಿ ಹುಡುಕಾಟ ಆರಂಭಿಸಿದರು.

ತನಿಖಾಧಿಕಾರಿ ಹೇಳಿದ್ದೇನು?

ಪ್ರಕರಣದ ತನಿಖಾಧಿಕಾರಿ ರಾಘವೇಂದ್ರ ಪ್ರಕಾಶ್ ಘಟನೆ ಬಗ್ಗೆ ನೆನಪಿಸುತ್ತಾ, ʼ ಶಿಲ್ಪಾರಾಣಿ ಪತಿಯನ್ನು ಕಳೆದುಕೊಂಡಿದ್ದಾಳೆ ಮತ್ತು ನಾವು ಅನುಕಂಪದಿಂದ ಕೆಲವು ದಿನ ಆಕೆಗೆ ಯಾವುದೇ ಪ್ರಶ್ನೆಯನ್ನು ಕೇಳಿಲ್ಲ. ಲಾರಿ ಚಾಲಕ ದೇವೇಂದ್ರ ನಾಯ್ಕನನ್ನು ಪತ್ತೆಹಚ್ಚಿ ಬಂಧಿಸಿದೆವು. ಆದರೆ ಕೆಲವೊಂದು ಪ್ರಶ್ನೆಗಳಿಗೆ ನಮಗೆ ಶಿಲ್ಪಾರಾಣಿಯಿಂದಲೇ ಉತ್ತರ ಬೇಕಿತ್ತು", ಎಂದು ತನಿಖೆಯ ಹಾದಿಯನ್ನು ನೆನಪಿಸಿಕೊಂಡರು.

ಮೃತದೇಹದ ಮುಖವನ್ನು ಬ್ಯಾಂಡೇಜ್‌ನಿಂದ ಸಾಧ್ಯವಾದಷ್ಟು ಮುಚ್ಚುವಂತೆ ಶಿಲ್ಪಾರಾಣಿ ವೈದ್ಯರಿಗೆ ಮನವಿ ಮಾಡಿದ್ದಳು. ಪತಿ ಮೃತಪಟ್ಟಿದ್ದಾನೆಂದು 3 ರಿಂದ 4 ಕೋಟಿ ರೂ. ವಿಮೆ ಕ್ಲೇಮ್ ಮಾಡುವಂತೆ ಅರ್ಜಿ ಸಲ್ಲಿಸಿದಳು. ಆದರೆ ಮೃತದೇಹದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅಪಘಾತದ ಮೊದಲು ʼಮುನಿಸ್ವಾಮಿʼಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಬಯಲಾಗಿತ್ತು.

ಈ ಮಧ್ಯೆ ಗಂಡಸಿಯಿಂದ ಸುಮಾರು 232 ಕಿಮೀ ದೂರದಲ್ಲಿರುವ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್‌ ಆಗಿರುವ ಶ್ರೀನಿವಾಸ್ ಎದುರು ಮೃತ ಮುನಿಸ್ವಾಮಿ ಗೌಡ ದಿಢೀರ್ ಪ್ರತ್ಯಕ್ಷನಾಗುತ್ತಾನೆ. ಪೊಲೀಸ್ ಇನ್ಸ್‌ ಪೆಕ್ಟರ್‌ ಶ್ರೀನಿವಾಸ್ ಮತ್ತು ಮುನಿಸ್ವಾಮಿ ಗೌಡ ದೂರದ ಸಂಬಂಧಿಗಳು. ಅಪರಾಧವನ್ನು ಮುಚ್ಚಿಹಾಕಲು ಸಹಾಯ ಮಾಡುತ್ತಾರೆ ಎಂದು ಮುನಿಸ್ವಾಮಿ ಪೊಲೀಸ್ ಇನ್ಸ್‌ ಪೆಕ್ಟರ್‌ ಅವರನ್ನು ಭೇಟಿಯಾಗಿದ್ದನು. ಆದರೆ ಇನ್ಸ್‌ ಪೆಕ್ಟರ್‌ ಶ್ರೀನಿವಾಸ್, ಮುನಿಸ್ವಾಮಿ ಬದುಕಿರುವ ಬಗ್ಗೆ ನನಗೆ ಮಾಹಿತಿ ನೀಡಿದರು. ನಮ್ಮ ತಂಡ ಮುನಿಸ್ವಾಮಿಯನ್ನು ಬಂಧಿಸಿತು. ಆತನನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಆತ ಕೊಲೆ ಕೃತ್ಯವೊಂದನ್ನು ನಡೆಸಿರುವುದನ್ನು ಬಾಯ್ಬಿಟ್ಟಿದ್ದಾನೆ. ಶ್ರೀನಿವಾಸ್ ಸಹಾಯ ಮಾಡುತ್ತಾರೆ ಎಂದು ಮುನಿಸ್ವಾಮಿ ಗೌಡ ನಿರೀಕ್ಷಿಸಿದ್ದ, ಆದರೆ ಅವರು ಸಹಾಯ ಮಾಡಿರಲಿಲ್ಲ ಎಂದು ತನಿಖಾಧಿಕಾರಿ ರಾಘವೇಂದ್ರ ಪ್ರಕಾಶ್ ಹೇಳಿದರು.

ರಜನಿಕಾಂತ್ ಚಿತ್ರದಿಂದ ಪ್ರೇರಿತವಾಗಿ ಕೊಲೆ ಕೃತ್ಯ!

ಮುನಿಸ್ವಾಮಿ ಗೌಡ ಪತ್ತೆ ಬೆನ್ನಲ್ಲೇ ಶಿಲ್ಪಾರಾಣಿ ಯಾರ ಅಂತ್ಯ ಸಂಸ್ಕಾರ ನಡೆಸಿರುವುದು ಎಂಬ ಪ್ರಶ್ನೆ ಮೂಡಿತು. ಪೊಲೀಸರು ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಯತ್ನಿಸಿದರು. ತನಿಖೆ ಮುಂದುವರಿದಂತೆ ಇನ್ನಷ್ಟು ಆಘಾತಕಾರಿ ವಿವರಗಳು ಹೊರಬಿತ್ತು.

ಕೃಷಿಕನಾಗಿದ್ದ ಮುನಿಸ್ವಾಮಿ ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಟೈರ್ ಅಂಗಡಿ ನಡೆಸುತ್ತಿದ್ದ. ವ್ಯವಹಾರದಲ್ಲಿ ನಷ್ಟದಿಂದಾಗಿ ಸ್ನೇಹಿತರ ಬಳಿ ಸಾಲ ಮಾಡಿಕೊಂಡಿದ್ದ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಗೌಡ ಸಾಲವನ್ನು ತೀರಿಸಲು ಸಾಧ್ಯವಿರುವ ಎಲ್ಲಾ ದಾರಿಗಳ ಬಗ್ಗೆ ಯೋಚಿಸಿದ. ಈ ವೇಳೆ ಆತನಿಗೆ ಕಣ್ಮುಂದೆ ಬಂದಿರುವುದು ಸೂಪರ್‌ ಸ್ಟಾರ್‌ ರಜನಿಕಾಂತ್ ನಟಿಸಿದ ʼಶಿವಾಜಿ: ದಿ ಬಾಸ್ʼ ತಮಿಳು ಚಲನಚಿತ್ರ.

ಈ ಚಿತ್ರದಲ್ಲಿ ರಜನಿಕಾಂತ್ ನಿರ್ವಹಿಸಿದ ಪಾತ್ರದಾರಿ ನಾಪತ್ತೆಯಾದಾಗ ಮೃತಪಟ್ಟನೆಂದು ಭಾವಿಸಲಾಗುತ್ತದೆ. ಆತನ ಬದಲಿಗೆ ಆತನ ದೇಹವನ್ನು ಹೋಲುವ ಮತ್ತೊಂದು ದೇಹವನ್ನು ತಂದಿಡಲಾಗುತ್ತದೆ. ಮುನಿಸ್ವಾಮಿ ಗೌಡ ಈ ಚಿತ್ರದಿಂದ ಪ್ರಭಾವಿತನಾಗಿ ಇದೇ ರೀತಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿ ತಾನು ಸತ್ತಿದ್ದೇನೆಂದು ಕಥೆ ಹೆಣೆಯಲು ತೀರ್ಮಾನಿಸಿದ ಎಂದು ತನಿಖಾಧಿಕಾರಿ ಪ್ರಕಾಶ್ ವಿವರಿಸಿದರು.

ಇದಕ್ಕಾಗಿ ಮುನಿಸ್ವಾಮಿ ತನ್ನನ್ನು ಹೋಲುವ ಮತ್ತೋರ್ವನನ್ನು ಹುಡುಕಾಟ ನಡೆಸಲು ಪ್ರಾರಂಭಿಸಿದ. ಕೊನೆಗೆ ಚಿಂದಿ ಆಯುವ ವ್ಯಕ್ತಿಯನ್ನು ಕಂಡು ಆತನಿಗೆ ದಿನನಿತ್ಯ ಆಹಾರ ಮತ್ತು ಹಣವನ್ನು ಒದಗಿಸುತ್ತಿದ್ದ. ಆತನ ಜೊತೆ ಆಪ್ತನಾದ. ಚಿಂದಿ ಆಯುವವನ ರಕ್ತದ ಗುಂಪನ್ನು ಕೂಡ ಪರೀಕ್ಷೆ ಮಾಡಿಟ್ಟಕೊಂಡಿದ್ದ! ಸುಮಾರು ಎರಡು ತಿಂಗಳ ಕಾಲ ಮೃತ ವ್ಯಕ್ತಿ ಮುನಿಸ್ವಾಮಿ ಗೌಡನ ಜೊತೆಯೇ ಇದ್ದ ಎಂದು ಪ್ರಕಾಶ್  ತನಿಖೆಯ ರೋಚಕತೆಯನ್ನು ಬಿಚ್ಚಿಟ್ಟರು.

ತನ್ನ ಕೃತ್ಯಕ್ಕೆ ಲಾರಿ ಡ್ರೈವರ್ ಆಗಿ ನಾಯ್ಕನನ್ನು ನೇಮಿಸಿಕೊಂಡ ಮುನಿಸ್ವಾಮಿ ಕೃತ್ಯಕ್ಕೆ ಸಹಕರಿಸಲು ಆತನಿಗೆ 5 ಲಕ್ಷ ರೂ. ಪಾವತಿಸಿದ. 2024ರ ಆಗಸ್ಟ್ 12ರಂದು ಚಿಂದಿ ಆಯುವವನನ್ನು ಕತ್ತು ಹಿಸುಕಿ ಕೊಲೆ ಮಾಡಲಾಯಿತು. ಬಳಿಕ ನಾಯ್ಕ ಆತನ ಮೈಮೇಲೆ ಲಾರಿ ಹರಿಸಿದ್ದನು.

ಮುನಿಸ್ವಾಮಿ ಮೃತಪಟ್ಟಿದ್ದಾನೆಂದು ಬಿಂಬಿಸಿ ವಿಮೆ ಹಣವನ್ನು ಪಡೆದು ಸಾಲವನ್ನು ಮರುಪಾವತಿಸಿ ಬಳಿಕ ಕುಟುಂಬ ಸಮೇತ ನೇಪಾಳ ಅಥವಾ ಉತ್ತರ ಭಾರತಕ್ಕೆ ಸ್ಥಳಾಂತರಗೊಳ್ಳುವುದಾಗಿ ತಂತ್ರವನ್ನು ರೂಪಿಸಲಾಗಿತ್ತು.


ಇದೀಗ, ಪೊಲೀಸರು ಶಿಲ್ಪಾರಾಣಿ ಮತ್ತು ಸೋಮೇಶ್ ನನ್ನು ಬಂಧಿಸಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆದರೆ ಕೊಲೆಯಾದ ಚಿಂದಿ ಆಯುವವನ ಗುರುತು ಪತ್ತೆಯಾಗಿಲ್ಲ. ʼನಾವು ಅವರ ಕುಟುಂಬದ ಸದಸ್ಯರನ್ನು ಹುಡುಕಲು ಪ್ರಯತ್ನಿಸಿದ್ದೇವೆ, ಆದರೆ ನಮಗೆ ಹೆಚ್ಚಿನ ಸುಳಿವು ಸಿಕ್ಕಿಲ್ಲʼ ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿದರು.

ಪ್ರಕರಣದ ವಿಚಾರಣೆ ನಡೆಯುತ್ತಿದೆ, ಆದರೆ, ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ.

ಸೌಜನ್ಯ : indianexpress

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News