ಜನರು ಕೊಟ್ಟಿರುವ ಕೆಲಸ ಸಾಕು, ಕುರ್ಚಿ ಬೇಡ: ಡಾ.ಶರಣಪ್ರಕಾಶ್ ಪಾಟೀಲ್

ಡಾ.ಶರಣಪ್ರಕಾಶ್ ಪಾಟೀಲ್
ರಾಜ್ಯ ರಾಜಕಾರಣ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಸಂಪುಟ ಸರ್ಜರಿ ಮತ್ತಿತರ ವಿಷಯಗಳ ಬಗ್ಗೆ ಹಾಗೂ ತಮ್ಮ ಎರಡೆರಡು ಇಲಾಖೆಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ‘ವಾರ್ತಾಭಾರತಿ’ ಜೊತೆ ಮಾತನಾಡಿದ್ದಾರೆ.
ವಾರ್ತಾಭಾರತಿ : ಈಗ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ನಿಮ್ಮ ಅಭಿಪ್ರಾಯ ಏನು?
ಶರಣಪ್ರಕಾಶ್ ಪಾಟೀಲ್ : ಮುಖ್ಯಮಂತ್ರಿ ಬದಲಾವಣೆ ಎಂಬುದು ಮಾಧ್ಯಮ ಸೃಷ್ಟಿ. ನಮ್ಮ ಪಕ್ಷದ ಯಾವುದೇ ಮಂತ್ರಿ ಅಥವಾ ಶಾಸಕ ಅಧಿಕೃತ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಮುಖ್ಯಮಂತ್ರಿ ಮಾಡುವುದು ಹೈಕಮಾಂಡ್ ಕೆಲಸ. ಮೇಲಾಗಿ ಇದು ನನ್ನ ಕಾರ್ಯವ್ಯಾಪ್ತಿಯಲ್ಲ. ಹಾಗಾಗಿ ಈ ಬಗ್ಗೆ ನನಗೆ ಅಭಿಪ್ರಾಯವೇ ಇಲ್ಲ.
ವಾ.ಭಾ. : ನೀವು ಮಂತ್ರಿ ಮಾತ್ರವಲ್ಲ, ರಾಜಕಾರಣಿ ಕೂಡ. ನಿಮಗೆ ನಿಮ್ಮದೇ ಅಭಿಪ್ರಾಯ ಇರುತ್ತದೆ ಅಲ್ಲವೇ?
ಶರಣಪ್ರಕಾಶ್ ಪಾಟೀಲ್ : ಹೌದು, ನಾನು ರಾಜಕಾರಣಿ. ಆದರೆ ಅದು ಸಾರ್ವಜನಿಕರ ಸೇವೆಗಾಗಿ. ಪಕ್ಷ ಕೊಟ್ಟ ಕೆಲಸ ಮಾಡುವುದಕ್ಕಾಗಿ. ನನಗೆ ಯಾವುದೇ ಮಹತ್ವಾಕಾಂಕ್ಷೆ ಇಲ್ಲ.
ವಾ.ಭಾ. : ರಾಜಕಾರಣಿಯಾಗಿರುವವರು ಮಹತ್ವಾಕಾಂಕ್ಷಿಯಾಗಿರಬೇಕಲ್ಲವೇ?
ಶರಣಪ್ರಕಾಶ್ ಪಾಟೀಲ್ : ಹೌದು, ಆದರೆ ನಾನು ಹಾಗಲ್ಲ. ನಾನಿರುವುದೇ ಹೀಗೆ. ನಾನು ಏನು ಮಾಡಬೇಕು ಎನ್ನುವುದನ್ನು ನಮ್ಮ ಕ್ಷೇತ್ರದ ಜನ ನಿರ್ಧಾರ ಮಾಡುತ್ತಾರೆ. ಹಾಗೆಯೇ ನಾನು ಯಾವ ಜವಾಬ್ದಾರಿಯನ್ನು ನಿಭಾಯಿಸಬೇಕು ಎನ್ನುವುದನ್ನು ನಮ್ಮ ಪಕ್ಷ ನಿರ್ಧರಿಸುತ್ತದೆ.
ವಾ.ಭಾ. : ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಿಯಾಂಕ್ ಖರ್ಗೆ ಅವರಿಗಿಂತಲೂ ನಿಮ್ಮ ಮೇಲೆ ಪ್ರೀತಿ-ನಂಬಿಕೆ ಜಾಸ್ತಿ ಅಂತಾ ಹೇಳುತ್ತಾರೆ?
ಶರಣಪ್ರಕಾಶ್ ಪಾಟೀಲ್ : ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯರು. ಅವರು ಎಲ್ಲರನ್ನೂ ಪ್ರೀತಿಸುತ್ತಾರೆ, ನಂಬುತ್ತಾರೆ. ನನ್ನನ್ನೂ ನಂಬುತ್ತಾರೆ.
ವಾ.ಭಾ.: ಮಲ್ಲಿಕಾರ್ಜುನ ಖರ್ಗೆ ಅವರ ಕೃಪೆ ಇರುವುದರಿಂದ ನೀವು ಡಿಸಿಎಂ ಆಗುತ್ತೀರಿ, ಕೆಪಿಸಿಸಿ ಅಧ್ಯಕ್ಷರಾಗುತ್ತೀರಿ ಎನ್ನುವ ಮಾತುಗಳಿವೆಯಲ್ಲ?
ಶರಣಪ್ರಕಾಶ್ ಪಾಟೀಲ್ : ಡಿಸಿಎಂ ಸ್ಥಾನ ಇರಲಿ, ಕೆಪಿಸಿಸಿ ಅಧ್ಯಕ್ಷ ಹುದ್ದೆ ಇರಲಿ, ನಾನು ಮಹತ್ವಾಕಾಂಕ್ಷಿಯಲ್ಲ. ನಾನು ಆಗಲೇ ಹೇಳಿದೆನಲ್ಲಾ.
ವಾ.ಭಾ. : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಶರಣಪ್ರಕಾಶ್ ಪಾಟೀಲ್ : ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಅದರದ್ದೆಯಾದ ಪ್ರಕ್ರಿಯೆಗಳಿರುತ್ತವೆ. ಹಲವರ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ಮಾಡಲಾಗುತ್ತದೆ. ನಾನು ಆಕಾಂಕ್ಷಿಯಲ್ಲ, ಅಧ್ಯಕ್ಷರಾಗಲು ಅನೇಕ ಹಿರಿಯರಿದ್ದಾರೆ. ಅವರು ಆಗಲಿ.
ವಾ.ಭಾ. : ನೀವು ಯುವಕರು (ರಾಜಕಾರಣದಲ್ಲಿ), ಲಿಂಗಾಯತ ಸಮುದಾಯದವರು, ಉತ್ತರ ಕರ್ನಾಟಕದವರು, ವಿವಾದ ಇಲ್ಲದವರು ಹಾಗಾಗಿ ನಿಮಗೆ ಜವಾಬ್ದಾರಿ ಕೊಟ್ಟರೆ?
ಶರಣಪ್ರಕಾಶ್ ಪಾಟೀಲ್ : ನನಗಂತೂ ಯಾವ ಹುದ್ದೆ ಬೇಕಾಗಿಲ್ಲ. ಮಂತ್ರಿಯಾಗಿ ಬಹಳ ಖುಷಿಯಾಗಿದ್ದೇನೆ.
ವಾ.ಭಾ. : ಒಬ್ಬ ಡಾಕ್ಟರ್ ಆಗಿ ಸಂಪುಟ ಸರ್ಜರಿ ಬಗ್ಗೆ ಏನು ಹೇಳುತ್ತೀರಿ?
ಶರಣಪ್ರಕಾಶ್ ಪಾಟೀಲ್ : ಇದು ಮುಖ್ಯಮಂತ್ರಿಯವರ ಪರಮಾಧಿಕಾರ. ಅವರು ಎಲ್ಲರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಇದರಲ್ಲಿ ನನ್ನ ಪಾತ್ರ ಏನಿಲ್ಲ.
ವಾ.ಭಾ. : ಇತ್ತೀಚೆಗೆ ನಡೆಯುತ್ತಿರುವ ಹನಿಟ್ರ್ಯಾಪ್ ರಾಜಕಾರಣದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಶರಣಪ್ರಕಾಶ್ ಪಾಟೀಲ್ : ಕರ್ನಾಟಕದ ರಾಜಕಾರಣ ಹೀಗಿರಲಿಲ್ಲ. ಕರ್ನಾಟಕದ ರಾಜಕಾರಣಿಗಳ ಬಗ್ಗೆ ದೇಶದಲ್ಲಿ ಗೌರವ ಇತ್ತು. ಇತ್ತೀಚೆಗಿನ ವರ್ಷಗಳಲ್ಲಿ ಹೀಗೆ ಆಗುತ್ತಿರುವುದು ಬಹಳ ಬೇಸರದ ವಿಷಯ. ಅತಿಯಾದ ಮಹತ್ವಾಕಾಂಕ್ಷೆ ಇರುವ ರಾಜಕಾರಣದಿಂದ ಬಂದವರಿಂದ ಹೀಗಾಗುತ್ತಿದೆ.
ವಾ.ಭಾ. : ವೈದ್ಯಕೀಯ ಶಿಕ್ಷಣ ಸಚಿವನಾಗಿ ಹೇಳಿಕೊಳ್ಳುವಂತಹ ಏನು ಕೆಲಸ ಮಾಡಿದ್ದೀರಿ?
ಶರಣಪ್ರಕಾಶ್ ಪಾಟೀಲ್ : ಪ್ರತೀ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು. ಮೊದಲ ಬಾರಿ ಸಚಿವನಾಗಿದ್ದಾಗಲೇ ಇದನ್ನು ಶುರು ಮಾಡಿದೆ. ಇದರಿಂದ ಎರಡು ರೀತಿಯ ಲಾಭ ಇದೆ. ಮೊದಲನೆಯದು ಸರಕಾರಿ ಕಾಲೇಜಿನಲ್ಲಿ ಮೆರಿಟ್ ಮೇಲೆ ಅವಕಾಶ ಸಿಗುವುದರಿಂದ ಬಡವರ ಮಕ್ಕಳು ಕೂಡ ವೈದ್ಯಕೀಯ ಶಿಕ್ಷಣ ಪಡೆಯಬಹುದು, ಡಾಕ್ಟರ್ ಆಗಬಹುದು. ಎರಡನೆಯದು ಮೆಡಿಕಲ್ ಕಾಲೇಜನ್ನು ಆರಂಭಿಸಿದರೆ ಅದರ ಜೊತೆಯಲ್ಲಿ ಆಸ್ಪತ್ರೆ ಇರಬೇಕಾಗುತ್ತದೆ. ಜೊತೆಗೆ ಎಲ್ಲ ವಿಷಯಕ್ಕೂ ಉಪನ್ಯಾಸಕರು ಇರಬೇಕಾಗುತ್ತದೆ. ಇದರಿಂದ ಜನರಿಗೆ ಒಳ್ಳೆಯ ಆರೋಗ್ಯ ಸೇವೆಯನ್ನೂ ನೀಡಿದಂತಾಗುತ್ತದೆ.
ವಾ.ಭಾ. : ನೀವು ಇಷ್ಟೆಲ್ಲಾ ಮಾಡಿಯೂ ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯರ ಕೊರತೆ ಇದೆಯಲ್ಲಾ?
ಶರಣಪ್ರಕಾಶ್ ಪಾಟೀಲ್ : ಹಿಂದೆ ಆ ಸಮಸ್ಯೆ ಇತ್ತು. ಅದಕ್ಕಾಗಿ ವೈದ್ಯಕೀಯ ಶಿಕ್ಷಣ ಮಾಡಿದವರೆಲ್ಲರೂ ಒಂದು ವರ್ಷ ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ಮಾಡಬೇಕು ಎನ್ನುವ ಕಾನೂನು ತಂದಿದ್ದೆವು. ಈಗ ಪರಿಸ್ಥಿತಿ ಬದಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ವೈದ್ಯರ ಕೊರತೆ ಇಲ್ಲ.
ವಾ.ಭಾ. : ನಿಮ್ಮ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಗೆ ಬರುವ ಆಸ್ಪತ್ರೆಗಳ ಗುಣಮಟ್ಟದ ಬಗ್ಗೆ ಆಕ್ಷೇಪಗಳಿವೆ. ಸ್ವಚ್ಛತೆ ಇಲ್ಲ. ಈ ಸಮಸ್ಯೆಯನ್ನು ಯಾವ ರೀತಿ ಎದುರಿಸುತ್ತೀರಿ?
ಶರಣಪ್ರಕಾಶ್ ಪಾಟೀಲ್ : ಸರಕಾರಿ ಆಸ್ಪತ್ರೆಗಳಿಗೆ ಜನ ಜಾಸ್ತಿ ಬರುತ್ತಿರುವುದರಿಂದಲೇ ಸ್ವಚ್ಛತೆಯ ಸಮಸ್ಯೆ ಆಗುತ್ತಿರುವುದು ನಿಜ. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಹಲವಾರು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತಿದೆ ಎನ್ನುವ ಕಾರಣಕ್ಕಾಗಿಯೇ ಜನರು ಹೆಚ್ಚೆಚ್ಚು ಬರುತ್ತಿದ್ದಾರೆ. ಮೊದಲೆಲ್ಲಾ ವೈದ್ಯರು ಸಿಗುತ್ತಿಲ್ಲ ಎನ್ನುವ ದೂರಿತ್ತು. ಈಗ ದಿನಕ್ಕೆ ನಾಲ್ಕು ಬಾರಿ ಬಯೋಮೆಟ್ರಿಕ್ ಸಿಸ್ಟಮ್ ಮಾಡಿದ್ದೇವೆ. ಬೆಳಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೆ ವೈದ್ಯರು ಇರಲೇಬೇಕು ಎಂಬ ನಿಯಮ ಮಾಡಿದ್ದೇವೆ. ಇದರಿಂದ ವೈದ್ಯರ ಸಮಸ್ಯೆ ಬಗೆಹರಿದಿದೆ. ಈಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಕ್ಯಾನ್ಸರ್ ಆಸ್ಪತ್ರೆಗಳು, ಹೃದ್ರೋಗದ ಆಸ್ಪತ್ರೆಗಳನ್ನು ಹೆಚ್ಚೆಚ್ಚು ಶುರು ಮಾಡುತ್ತಿದ್ದೇವೆ. ಇದರಿಂದ ನಮ್ಮ ಸೇವಾ ಸಾಮರ್ಥ್ಯ ಕೂಡ ಹೆಚ್ಚಾಗುತ್ತಿದೆ.
ವಾ.ಭಾ. : ಇತ್ತೀಚಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಕೇಂದ್ರ ಮಾಡಿದ್ದೀರಿ. ಅದು ಯಾವ ರೀತಿಯ ಕೆಲಸವನ್ನು ನಿರ್ವಹಿಸುತ್ತದೆ.
ಶರಣಪ್ರಕಾಶ್ ಪಾಟೀಲ್ : ನೀವು ನಂಬಲ್ಲ. ನಮ್ಮಲ್ಲಿ ೫ ಸಾವಿರ ಜನರಿಂದ ಕಿಡ್ನಿ ಅಳವಡಿಕೆಗೆ ಅರ್ಜಿ ಬಂದಿವೆ. ಇದೇ ರೀತಿ ಬೇರೆ ಬೇರೆ ಅಂಗಾಂಗಳ ಕಸಿ ಮಾಡುವುದಕ್ಕೂ ಹೆಚ್ಚು ಬೇಡಿಕೆ ಇದೆ. ಇದನ್ನು ಮನಗಂಡು ಮಾಡಿದ್ದೇವೆ.
ವಾ.ಭಾ. : ಇತ್ತೀಚೆಗೆ ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಖಾಸಗಿ ವೈದ್ಯರನ್ನು ವಿಸಿಯನ್ನಾಗಿ ನೇಮಕ ಮಾಡಲಾಗಿದೆ. ಇದು ಹೊಸ ಪದ್ಧತಿ ಶುರುವಾದಂತಾಗುತ್ತದೆ ಅಲ್ಲವೇ?
ಶರಣಪ್ರಕಾಶ್ ಪಾಟೀಲ್ : ಇದಕ್ಕೆ ಸರ್ಚ್ ಕಮಿಟಿ ಇದೆ. ಅದಕ್ಕೆ ಸರಕಾರ, ರಾಜ್ಯಪಾಲರು ಮತ್ತು ವಿವಿ ಕಡೆಯಿಂದ ಮೂರು ಜನರ ಹೆಸರನ್ನು ಶಿಫಾರಸು ಮಾಡಬಹುದು. ಬಳಿಕ ರಾಜ್ಯಪಾಲರು ಒಂದು ಹೆಸರನ್ನು ಅಂತಿಮಗೊಳಿಸುತ್ತಾರೆ. ಇದರಲ್ಲಿ ನನ್ನ ಪಾತ್ರ ಏನೇನೂ ಇಲ್ಲ.
ವಾ.ಭಾ. : ನಿಮ್ಮ ಕೌಶಲಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ಯುವನಿಧಿ ಗ್ಯಾರಂಟಿ ಯೋಜನೆ ಹೇಗೆ ಅನುಷ್ಠಾನಕ್ಕೆ ಬರುತ್ತಿದೆ?.
ಶರಣಪ್ರಕಾಶ್ ಪಾಟೀಲ್ : ಯುವನಿಧಿ ಯೋಜನೆಯಡಿ ಈಗಾಗಲೇ 2,80,000 ಮಂದಿ ಪದವೀಧರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆ ಪೈಕಿ 1,76,000 ಪದವೀಧರರಿಗೆ ಹಣ ಕೊಡುತ್ತಿದ್ದೇವೆ. ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ.
ವಾ.ಭಾ. : ಬೇರೆ ಗ್ಯಾರಂಟಿ ಯೋಜನೆಗಳಲ್ಲಿ ಅನರ್ಹ ಫಲಾನುಭವಿಗಳಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಯುವನಿಧಿಯಲ್ಲಿ ಆ ಸಮಸ್ಯೆ ಇಲ್ಲವೇ?
ಶರಣಪ್ರಕಾಶ್ ಪಾಟೀಲ್ : ನೂರಕ್ಕೆ ನೂರರಷ್ಟು ಅಕ್ರಮ ಆಗಲು ಅವಕಾಶವೇ ಇಲ್ಲ. ಏಕೆಂದರೆ ಎಲ್ಲವೂ ಆನ್ ಲೈನ್ ಸಿಸ್ಟಮ್ ಮಾಡಿದ್ದೇವೆ.
ಶಾಸಕ ಸುಬ್ಬಾರೆಡ್ಡಿ ಬಾಗೇಪಲ್ಲಿ ಕ್ಷೇತ್ರಕ್ಕೆ ನೀರಾವರಿ ಮತ್ತು ಕೈಗಾರಿಕೆ ಬೇಕೇ ಬೇಕು ಎಂದು ಚರ್ಚೆ ಮಾಡುತ್ತಲೇ ಇರುತ್ತಾರೆ. ಆದ್ದರಿಂದ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಹುತೇಕ ರೈತರ ಮನವೊಲಿಸಿದ ಹಿನ್ನೆಲೆಯಲ್ಲಿ ಈಗಾಗಲೇ 600 ಎಕರೆ ಜಮೀನು ಮಂಜೂರಾತಿ ಸಿಕ್ಕಿದ್ದು, ಇನ್ನು 400 ಎಕರೆ ಜಮೀನಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.
-ಡಾ.ಎಂ.ಸಿ.ಸುಧಾಕರ್, ಸಚಿವ