20 ಹಳ್ಳಿಗಳ ಸಾವಿರಾರು ಗರ್ಭಿಣಿಯರ ಪಾಲಿನ ಆಸರೆ ಸೂಲಗಿತ್ತಿ ಹನುಮಕ್ಕ

ರಾಯಚೂರು : ಹೆರಿಗೆ ಮಾಡಿಸುವುದೆಂದರೆ ಎರಡು ಜೀವ ಉಳಿಸುವ ಕಾಯಕ. ಇಂದಿನ ಆಧುನಿಕ ಯುಗದಲ್ಲಿ ಹೆರಿಗೆ ಮಾಡಲು ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ವ್ಯಯಿಸಬೇಕಿದೆ. ಆದರೆ ಇಲ್ಲೊಬ್ಬರು ಸೂಲಗಿತ್ತಿ ಯಾವುದೇ ಫಲಾಪೇಕ್ಷೆಯಿಲ್ಲದೇ ಸಾವಿರಾರು ಹೆರಿಗೆ ಮಾಡಿಸಿ ಸೈ ಎನಿಸಿಕೊಂಡಿದ್ದಾರೆ.
ರಾಯಚೂರು ತಾಲೂಕಿನ ಮಟಮಾರಿ ಗ್ರಾಮದ ಸೂಲಗಿತ್ತಿ ಹನುಮಕ್ಕ ಅನೇಕ ವರ್ಷಗಳಿಂದ ತನ್ನ ಗ್ರಾಮವಲ್ಲದೇ ಸುತ್ತಮುತ್ತಲಿನ ಗ್ರಾಮಕ್ಕೆ ಸಂಚಾರಿ ವೈದ್ಯೆಯಂತೆ ಹೆರಿಗೆ ಮಾಡಿಸುತ್ತಿದ್ದಾರೆ.
ಸೂಲಗಿತ್ತಿ ಹನುಮಕ್ಕನವರು ಅವರ ವೃತ್ತಿಗೆ ನ್ಯಾಯೋಚಿತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಶಿಶುಜನನದ ಸಾಮಾನ್ಯ ಪ್ರಗತಿಯ ಬದಲಾವಣೆಗಳನ್ನು ಗುರುತಿಸಲು ಮತ್ತು ಸಾಮಾನ್ಯದಿಂದ ಆಗುವ ಭಿನ್ನತೆಯನ್ನು ಹೇಗೆ ನಿಭಾಯಿಸಬೇಕು ಎಂದು ತರಬೇತಿ ಪಡೆದಿದ್ದಾರೆ.
ಬಡತನದಲ್ಲಿ ಬೆಂದು ಅರಳಿದ ಹನುಮಕ್ಕ :
ಚಿಕ್ಕವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡು ಪತಿಯ ಮನೆಯಿಂದ ತವರು ಮನೆಗೆ ಸೇರಿದ ಹನುಮಕ್ಕನವರ ಜೀವನಕ್ಕೆ ಸಿಂಚನವಾಗಿದ್ದು ಸೂಲಗಿತ್ತಿಯ ವೃತ್ತಿ.
ಆಕೆ ಕಗ್ಗತ್ತಲು ಆವರಿಸಿರಲಿ, ಮಳೆ ಸುರಿಯುತ್ತಿರಲಿ, ಗರ್ಭಿಣಿಯ ನರಳಾಟ ಸುದ್ದಿ ಕೇಳಿದರೆ ಸಾಕು ಅಲ್ಲಿ ಹಾಜರಿ ರುತ್ತಾರೆ. ಕತ್ತಲಾಗಿದ್ದರೂ ಕೈಯಲ್ಲಿ ಬುಡ್ಡಿ ದೀಪದ ಲಾಟೀನು ಹಿಡಿದು ಪ್ರಸವ ಮಾಡಿಸುವ ಹನುಮಕ್ಕ ಸಾಂತ್ವನದ ಮೂಲಕ ಸುಲಭವಾಗಿ ಹೆರಿಗೆ ಮಾಡಿಸಬಲ್ಲ ಮಹಾತಾಯಿ ಎನಿಸಿಕೊಂಡಿದ್ದಾರೆ. ಹನುಮಕ್ಕನವರು 50 ವರ್ಷಗಳಿಂದ ಸೂಲಗಿತ್ತಿಯಾಗಿ ಸೇವೆ ಸಲ್ಲಿಸುತಿದ್ದು, 20 ಹಳ್ಳಿಗಳ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದಾರೆ.
ಪ್ರಾರಂಭದಲ್ಲಿ ಗ್ರಾಮದಲ್ಲಿ ತನ್ನ ಮನೆಯಲ್ಲಿಯೇ ಈ ವೃತ್ತಿಯನ್ನು ಕೈಗೊಳ್ಳುತ್ತಿದ್ದ ಈಕೆ ನಂತರದಲ್ಲಿ ತಮ್ಮ ಗ್ರಾಮವಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದಿಷ್ಟು ಕಾರ್ಯಗಳನ್ನು ಮಾಡುತ್ತಾ ಅಲ್ಲಿಗೆ ಬರುವ ಎಲ್ಲ ಗರ್ಭಿಣಿಯರಿಗೆ ಅಚ್ಚುಮೆಚ್ಚಿನ ಸೂಲಗಿತ್ತಿಯಾಗಿದ್ದಾರೆ.
ಜನಪದ ವೈದ್ಯಕೀಯ ಪದ್ದತಿಯ ರಾಯಭಾರಿ ಹನುಮಕ್ಕ:
86ರ ಇಳಿ ವಯಸ್ಸಿನಲ್ಲಿಯೂ ಹನುಮಕ್ಕ ವೃತ್ತಿ ನಿಭಾಯಿಸುತ್ತಿದ್ದಾರೆ. ರಾತ್ರಿ ವೇಳೆ ಹೆರಿಗೆ ನೋವೆಂದು ಆಸ್ಪತ್ರೆಗೆ ಬರುವವರಿಗಾಗಿ ಆಸ್ಪತ್ರೆಯಲ್ಲಿ ಉಳಿದುಕೊಂಡು ಹನುಮಕ್ಕ ಕಾದು ಕುಳಿತು, ವೈದ್ಯರಿಗೆ ನೆರವಾಗುತ್ತಾರೆ ಎನ್ನುತ್ತಾರೆ ಗ್ರಾಮಸ್ಥರು.
ಹನುಮಕ್ಕನವರು ಗರ್ಭಿಣಿಯರಿಗೆ ಸಲಭ ವಾಗಿ ಹೆರಿಗೆ ಮಾಡಿ ಬಾಣಂತಿಯರ ಹಾಗೂ ಶಿಶುಗಳ ಆರೈಕೆ ಮಾಡುತ್ತಾ ಬಂದಿದ್ದಾರೆ. ಮಟಮಾರಿ ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹನುಮಕ್ಕ ಎಲ್ಲರಿಗೂ ಚಿರಪರಿಚಿತ.
- ಬಸವರಾಜ ಗೌಡ, ಮಟಮಾರಿ ಗ್ರಾಮಸ್ಥ
9 ಸಾವಿರಕ್ಕೂ ಹೆಚ್ಚು ಹೆರಿಗೆ :
ಹನುಮಕ್ಕ ಸುಮಾರು 9,000ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸರಾಗವಾಗಿ ಹೆರಿಗೆ ಮಾಡಿಸಿದ್ದಾರೆ. ಹನುಮಕ್ಕ ಸೂಲಗಿತ್ತಿ ಕಾರ್ಯದಲ್ಲಿ ವೈಫಲ್ಯವನ್ನೇ ನೋಡಿಲ್ಲವಂತೆ. ಮಟಮಾರಿ, ಹೀರಾಪೂರು, ಪೂರತಿಪ್ಲಿ, ತುರಕುಂದೋಣಿ, ರಾಜೋಳ್ಳಿ ಸೇರಿದಂತೆ ಹಲವು 20ಕ್ಕೂ ಹೆಚ್ಚು ಹಳ್ಳಿಯ ಜನರ ಪಾಲಿಗೆ ಇವರೇ ನರ್ಸ್. ಎಂತಹ ಕಷ್ಟದ ಹೆರಿಗೆ ಬಂದರೂ ಗರ್ಭಿಣಿಯರಿಗೆ ಧೈರ್ಯ ತುಂಬಿ ಸುಲಭವಾಗಿ ಹೆರಿಗೆ ಮಾಡಿಸುವುದರಲ್ಲಿ ಹನುಮಕ್ಕ ಪರಿಣತಿ ಹೊಂದಿದ್ದಾರೆ. ಹೆರಿಗೆ ನಂತರ ಮಕ್ಕಳನ್ನು ಯಾವ ರೀತಿಯಾಗಿ ನೋಡಿಕೊಳ್ಳಬೇಕು, ಯಾವ ರೀತಿಯಾಗಿ ಆರೈಕೆ ಮಾಡಬೇಕೆಂದು ತಿಳಿ ಹೇಳುವ ಮೂಲಕ, ಮಾದರಿಯಾಗಿದ್ದಾರೆ.
50 ವರ್ಷಗಳಿಂದ ಹೆರಿಗೆ ಮಾಡುತ್ತಿದ್ದೇನೆ. ನಾನು ಮೊದಲು ಹೆರಿಗೆ ಮಾಡಿದಾಗ ಹುಟ್ಟಿದ ಕೂಸು ಈಗ ಮೊಮ್ಮಕ್ಕಳನ್ನು ನೋಡಿದ್ದಾನೆ. ಬಡತನದಲ್ಲಿಯೇ ಹುಟ್ಟಿ ಬೆಳೆದ ನಾನು ಅನೇಕ ಕಷ್ಟಗಳನ್ನು ಅನುಭವಿಸಿದ್ದೇನೆ. ಮೊದಲು ನಾನು ಹೆರಿಗೆ ಮಾಡಿದಾಗ 2-3 ಸೇರು ಜೋಳ, ಅಕ್ಕಿ ಕೊಡುತ್ತಿದ್ದರು. ಗಂಡು ಮಗು ಹುಟ್ಟಿದಾಗ ಖುಷಿಯಿಂದ 25 ರೂ. ಕೊಡುತ್ತಿದ್ದರು. ಅನೇಕ ವರ್ಷಗಳ ಕಾಲ ಹೆರಿಗೆ ಮಾಡಿದ್ದು, ಈಗ ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದೇನೆ. ತಿಂಗಳಿಗೆ 1,200 ರೂ. ಕೊಡುತ್ತಾರೆ. ಸೂಲಗಿತ್ತಿ ವೃತ್ತಿ ಮಾಡುತ್ತಾ ಇಬ್ಬರು ಹೆಣ್ಣು ಮಕ್ಕಳಿಗೆ ಹಾಗೂ ಒಬ್ಬ ಪುತ್ರನಿಗೆ ಮದುವೆ ಮಾಡಿದ್ದೇನೆ.
-ಹನುಮಕ್ಕ, ಸೂಲಗಿತ್ತಿ