ಹಣದ ಹೊಳೆ ಹರಿಸಿ ಕಾಂಗ್ರೆಸ್ ಗೆಲುವು ಸಾಧಿಸಿದೆ : ಬಸವರಾಜ ಬೊಮ್ಮಾಯಿ

Update: 2024-11-23 12:38 GMT

 ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ : ಉಪ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದ ಜನರ ತೀರ್ಪನ್ನು ನಾನು ತಲೆಬಾಗಿ ಒಪ್ಪಿಕೊಳ್ಳುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್‍ಗೆ ಅಭಿನಂದನೆ ಸಲ್ಲಿಸುತ್ತೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಹಾಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ಉಪಚುನಾವಣೆ ಫಲಿತಾಂಶದ ಬಳಿಕ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಜನರ ಸ್ಪಂದನೆ ನೋಡಿದರೆ ನಮಗೆ ಗೆಲ್ಲುವ ಭರವಸೆ ಇತ್ತು. ಆದರೆ, ವಿಪರೀತ ಹಣದ ಹೊಳೆ ಹರಿಸಿ ಕಾಂಗ್ರೆಸ್‍ನವರು ಗೆಲುವು ಸಾಧಿಸಿದ್ದಾರೆ. ಸರಕಾರ ಅವರದ್ದೇ ಇದೆ, ಆಡಳಿತ ಪಕ್ಷದವರು ಎಂದು ಕಾಂಗ್ರೆಸ್ ಅಭ್ಯರ್ಥಿಯನ್ನು ಜನ ಆಯ್ಕೆ ಮಾಡಿದ್ದಾರೆ ಎಂದು ನುಡಿದರು.

ಕ್ಷೇತ್ರದ ಜನರಿಗೆ ಒಳ್ಳೆದಾಗಲಿ ಅಂತ ಬಯಸುತ್ತೇನೆ. ಚುನಾವಣೆಯಲ್ಲಿ 10 ಜನ ಸಚಿವರು, 40ಕ್ಕಿಂತ ಹೆಚ್ಚು ಶಾಸಕರು, ಮಾಜಿ ಶಾಸಕರು ಬಂದು ಇಲ್ಲಿಯೇ ಕುಳಿತು ಪ್ರಚಾರ ಮಾಡಿದರು. ಸರಕಾರ ವರ್ಸಸ್ ಬೊಮ್ಮಾಯಿ ಎಂದೇ ಬಿಂಬಿತವಾಯಿತು. ಅವರು ಸರಕಾರದ ಯಂತ್ರ, ಹಣದಿಂದ ಚುನಾವಣೆ ಗೆದ್ದಿದ್ದಾರೆ ಎಂದು ಅವರು ಆರೋಪಿಸಿದರು.

ಸಾಮಾನ್ಯವಾಗಿ ಉಪಚುನಾವಣೆಯಲ್ಲಿ ಸರಕಾರಕ್ಕೆ ಅನುಕೂಲ ಇರುತ್ತದೆ. ನಾವು ಒಂದು ಕಾಲದಲ್ಲಿ 17 ಉಪಚುನಾವಣೆಯಲ್ಲಿ 13 ಕ್ಷೇತ್ರ ಗೆದ್ದಿದ್ದೆವು. ಈ ಸರಕಾರದ ಕೆಲಸದ ಮೇಲೆ ಮತ ಬಂದಿದೆ ಅಂತೇನಿಲ್ಲ. ನಾವು ಉಪಚುನಾವಣೆಯಲ್ಲಿ ಅಷ್ಟು ಸ್ಥಾನ ಗೆದ್ದು ಅದಾದ ಮೇಲೆ ಸರಕಾರ ಕಳೆದುಕೊಂಡಿದ್ದೆವು. ಹೀಗಾಗಿ ಕಾಂಗ್ರೆಸ್ ಸರಕಾರ ಒಂದೂವರೆ ವರ್ಷದ ಆಡಳಿತಕ್ಕೆ ಸರ್ಟಿಫಿಕೇಟ್ ಎಂದು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಬಿಜೆಪಿ ಅಪಪ್ರಚಾರಕ್ಕೆ ಮುಖಭಂಗ: ಮೋದಿ ನೇತೃತ್ವದಲ್ಲಿ ಅಪಪ್ರಚಾರ ಮಾಡಿದ ಎನ್‍ಡಿಎ ಕೂಟಕ್ಕೆ ಮತದಾರರು ಕಾಂಗ್ರೆಸ್‍ಗೆ ಮತ ನೀಡುವ ಮೂಲಕ ಮುಖಭಂಗವನ್ನುಂಟುಮಾಡಿದ್ದಾರೆ. ಗ್ಯಾರಂಟಿಗಳ ಸಮರ್ಪಕ ಅನುಷ್ಠಾನದಿಂದ ಬಿಜೆಪಿ ತಳಮಳಗೊಂಡಿದೆ. ಬಿಜೆಪಿಯ ಆರೋಪಗಳನ್ನು ಮೀರಿ ಕೇವಲ ಅಭಿವೃದ್ದಿ ಹಾಗೂ ಜನಪರ ಕಾಳಜಿಯನ್ನು ಮುಂದಿಟ್ಟುಕೊಂಡು ಹೋದ ಕಾಂಗ್ರೆಸ್‍ಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ಸಂಘಟಿತ ಪ್ರಚಾರ ಹಾಗೂ ಕಾರ್ಯಕರ್ತರುಗಳ ಶ್ರಮದ ಫಲದಿಂದ ಮೂರು ಕ್ಷೇತ್ರಗಳನ್ನು ನಾವು ಗೆಲ್ಲುವಲ್ಲಿ ಸಫಲರಾಗಿದ್ದೇವೆ’

-ಎನ್.ಎಸ್.ಭೋಸರಾಜು ಸಣ್ಣ ನೀರಾವರಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News