ಹಾವೇರಿ | ಮೈಕ್ರೋ ಫೈನಾನ್ಸ್‌ಗಳ ಕಿರುಕುಳ : ಮಾಂಗಲ್ಯ ಸಮೇತ ಮುಖ್ಯಮಂತ್ರಿಗೆ ಪತ್ರ

ಹಾವೇರಿ : ಜಿಲ್ಲೆಯಲ್ಲಿ ಮಹಿಳೆಯರಿಗೆ ಮೈಕ್ರೋ ಫೈನಾನ್ಸ್‌ಗಳ ಕಾಟ ಹೆಚ್ಚಾಗಿದ್ದು, ಮೈಕ್ರೋ ಪೈನಾನ್ಸ್ ಹಾವಳಿ ತಪ್ಪಿಸಿ ಮಾಂಗಲ್ಯ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಹಾವೇರಿ ಜಿಲ್ಲೆಯ ನೊಂದ ಮಹಿಳೆಯರು ಹಾಗೂ ರೈತ ಮುಖಂಡರಿಂದ 'ಮಾಂಗಲ್ಯ ಉಳಿಸಿ' ಎಂಬ ಅಭಿಯಾನ ಆರಂಭವಾಗಿದ್ದು, ʼಕಿರುಕುಳ ತಪ್ಪಿಸಿ ಪತಿಯಂದಿರನ್ನು ರಕ್ಷಿಸಿ ನಮ್ಮ ಮಾಂಗಲ್ಯ ಉಳಿಸಬೇಕು’ ಎಂದು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯರು, ತಮ್ಮ ಮಾಂಗಲ್ಯ ಸರದ ಸಮೇತ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಕಳುಹಿಸಿದ್ದಾರೆ.
ರಾಣೆಬೆನ್ನೂರು ರೈತ ಸಂಘಟನೆ ನೇತೃತ್ವದಲ್ಲಿ ನಗರದ ಅಂಚೆ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹಿಳೆಯರು, ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
‘ರಾಣೆಬೆನ್ನೂರು ಮತ್ತು ಸುತ್ತಮುತ್ತಲ ತಾಲ್ಲೂಕಿನಲ್ಲಿ ಹಲವರಿಗೆ ಫೈನಾನ್ಸ್ ಕಂಪನಿಯವರು ಸಾಲ ನೀಡಿದ್ದಾರೆ. ದುಪ್ಪಟ್ಟು ಬಡ್ಡಿ ವಸೂಲಿ ಮಾಡಿದ್ದಾರೆ. ನಿಗದಿತ ಬಡ್ಡಿ ಸಮೇತ ಹಣ ಮರಳಿಸಿದರೆ, ಸಾಲ ಬಾಕಿ ಇರುವುದಾಗಿ ವಾದಿಸುತ್ತಾರೆ. ಮೀಟರ್ ಬಡ್ಡಿ ದಂಧೆ ಮೂಲಕ ನಮ್ಮನ್ನು ಸುಲಿಗೆ ಮಾಡುತ್ತಾರೆ’ ಎಂದು ಮಹಿಳೆಯರು ದೂರಿದರು.