ಗೆದ್ದಿದ್ದು ಉಪಚುನಾವಣೆ, ಆದರೆ ಮೂರು ಲೋಕವನ್ನೇ ಗೆದ್ದ ಭ್ರಮೆಯಲ್ಲಿದ್ದೀರಿ : ಆರ್.ಅಶೋಕ್
ಬೆಂಗಳೂರು : ಹಣದ ಹೊಳೆ ಹರಿಸಿ, ಓಲೈಕೆ ರಾಜಕಾರಣದ ಮೂಲಕ ಒಂದು ಸಮುದಾಯದ ಮತ ಗಳಿಸಿ ಉಪಚುನಾವಣೆ ಗೆದ್ದ ಮಾತ್ರಕ್ಕೆ ಮೂರು ಲೋಕವನ್ನೇ ಗೆದ್ದು ಬಿಟ್ಟೆವು ಎಂಬ ಭ್ರಮೆಯಲ್ಲಿದೆ ಕಾಂಗ್ರೆಸ್ ಪಕ್ಷ ಇದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ರವಿವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, "ಸಿಎಂ ಸಿದ್ದರಾಮಯ್ಯನವರೇ ನವರೇ, ಯಾವುದು ಸುಳ್ಳು, ಯಾವುದು ಅಪಪ್ರಚಾರ?. ವಾಲ್ಮೀಕಿ ನಿಗಮದಲ್ಲಿ ಕೋಟಿ ಕೋಟಿ ಹಣ ಅವ್ಯವಹಾರ ಆಗಿದೆ ಎಂದು ಸ್ವತಃ ತಾವೇ ಸದನದಲ್ಲಿ ಒಪ್ಪಿಕೊಂಡರಲ್ಲ, ಅದು ಸುಳ್ಳಾ?. ಮುಡಾ ಹಗರಣದಲ್ಲಿ ತಮ್ಮ ಪತ್ನಿಯವರ ಹೆಸರಿನಲ್ಲಿರುವ 14 ಸೈಟು ವಾಪಸ್ಸು ಕೊಡುವ ಮೂಲಕ ಪರೋಕ್ಷವಾಗಿ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದೀರಲ್ಲ ಅದು ಸುಳ್ಳಾ? ಮೂಡಾ ಹಗರಣದಲ್ಲಿ ತಮ್ಮ ವಿರುದ್ಧ ತನಿಖೆ ಅಗತ್ಯ ಇದೆ ಎಂದು ಹೈಕೋರ್ಟ್ ಘಂಟಾಘೋಷವಾಗಿ ಹೇಳಿದ್ದು ಸುಳ್ಳಾ?" ಎಂದು ಪ್ರಶ್ನಸಿದ್ದಾರೆ.
"ಮದ್ಯ ಮಾರಾಟಗಾರರ ಸಂಘ ತಮಗೆ ಬರೆದಿರುವ ಪತ್ರದಲ್ಲಿ ಅಬಕಾರಿ ಇಲಾಖೆಯಲ್ಲಿ 'ಮಂಥ್ಲಿ ಮನಿ' ಹೆಸರಿನಲ್ಲಿ, ವರ್ಗಾವಣೆ ದಂಧೆಯಲ್ಲಿ, ಲೈಸೆನ್ಸ್ ನವೀಕರಣದಲ್ಲಿ 700 ಕೋಟಿ ರೂಪಾಯಿ ಲಂಚದ ವ್ಯವಹಾರ ನಡೆದಿದೆ ಎಂದು ಹೇಳಿರುವುದು ಸುಳ್ಳಾ? ವಕ್ಫ್ ಮಂಡಳಿ ಹೆಸರಿನಲ್ಲಿ ಸರ್ಕಾರಿ ಆಸ್ತಿ ಪಾಸ್ತಿ, ಮಠ ಮಂದಿರಗಳ ಜಾಗ, ರೈತರ ಕೃಷಿ ಜಮೀನುಗಳಿಗೆ ಕಳಿಸಿ, ರಾತ್ರೋರಾತ್ರಿ ದಾಖಲೆಗಳನ್ನು ತಿದ್ದುತ್ತಿರುವುದು ಸುಳ್ಳಾ?" ಎಂದು ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
"ತಮ್ಮ ಸರಕಾರದ ಭ್ರಷ್ಟಾಚಾರಕ್ಕೆ, ಕಿರುಕುಳಕ್ಕೆ ಈವರೆಗೂ ನಾಲ್ಕು ಜನ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿರುವ ಘಟನೆಗಳು ಸುಳ್ಳಾ?. ನಿಮ್ಮ ಈ ಕುತಂತ್ರ, ಷಡ್ಯಂತ್ರ, ನಾಟಕ ಜಾಸ್ತಿ ದಿನ ನಡೆಯುವುದಿಲ್ಲ. ತಡವಾದರೂ ಸತ್ಯಕ್ಕೆ ಎಂದಿಗೂ ಜಯ ಸಿಗುತ್ತದೆ" ಎಂದು ಹೇಳಿದ್ದಾರೆ.