‘ಅಮಿತ್ ಶಾ ಹೇಳಿಕೆ’ ಯೋಚಿಸಿ ನಿಜ ತಿಳಿಯಿರಿ : ಹೋರಾಟಗಾರರಿಗೆ ಛಲವಾದಿ ನಾರಾಯಣಸ್ವಾಮಿ ಸಲಹೆ
ಬೆಂಗಳೂರು : ‘ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವಾಗಿ ಕಾಂಗ್ರೆಸ್ ಬೆಂಬಲಿತ ಕೆಲವು ಸಂಘಟನೆಗಳು, ಬೀದಿಗಿಳಿದು ಅವರ ಹೇಳಿಕೆ ವಿರೋಧಿಸುತ್ತಿವೆ. ಆದರೆ, ‘ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು’ ಎಂಬಂತೆ ಇದನ್ನು ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು’ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಸಲಹೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ನೀಡಿದ್ದು ಇಂದಿರಾಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಎಂದು ಅನಿಲ್ ಲಾಡ್ ಅವರು ಈ ಹಿಂದೆ ಹೇಳಿದ್ದರು. ಅದು ವೈರಲ್ ಆಗಿತ್ತು. ಆಗ ಒಬ್ಬ ಕಾಂಗ್ರೆಸ್ಸಿಗರೂ ಮಾತನಾಡಿಲ್ಲ. ಮದ್ಯ ಸೇವಿಸಿಯೇ ಸಂವಿಧಾನ ಬರೆದಿದ್ದಾರೆ ಎಂಬುದಾಗಿ ಇಂಡಿಯಾ ಒಕ್ಕೂಟದ ಕೇಜ್ರಿವಾಲ್ ಹೇಳಿದ್ದಾರೆ. ಇದು ವಿಡಿಯೋವಾಗಿ ಇದೆ. ಇದಕ್ಕೆ ಕಾಂಗ್ರೆಸ್ಸಿನ ಉತ್ತರ ಏನು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡರು ತಮ್ಮ ಅವಮಾನ ಸಹಿಸಿಕೊಳ್ಳಲಾಗದೆ, ಅಮಿತ್ ಶಾಗೆ ಅಪಮಾನ ಮಾಡುವ ಉದ್ದೇಶದಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ. ಅಂಬೇಡ್ಕರ್ ಅವರು ತೀರಿಕೊಂಡಾಗ ದಿಲ್ಲಿಯಲ್ಲಿ ಅಂತ್ಯಕ್ರಿಯೆಗೆ ಜಾಗ ಕೊಟ್ಟಿಲ್ಲ, ಈ ದೊಡ್ಡ ಅಪರಾಧ ಕಾಂಗ್ರೆಸ್ಸಿನ ಮೇಲೆ ಇದೆ ಎಂದು ಸದನದಲ್ಲಿ ರಮೇಶ್‍ಕುಮಾರ್ ಅವರೇ ಒಪ್ಪಿಕೊಂಡಿದ್ದರು. ಕಾಂಗ್ರೆಸ್ಸಿನ ಬೇರೆಯವರು ಇದು ಸುಳ್ಳು ಎಂದಿಲ್ಲ, ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದರು.
ಸಂವಿಧಾನ ಬದಲಿಸಲೇಬೇಕೆಂದು ರಾಜ್ಯದಲ್ಲಿ ಅಮರೇಗೌಡ ಬಯ್ಯಾಪುರ ಹೇಳಿದ ವಿಡಿಯೋ ನನ್ನ ಬಳಿ ಇದೆ. ಕಾಂಗ್ರೆಸ್ಸಿನ ಯಾರಾದರೂ ಇದನ್ನು ವಿರೋಧಿಸಿದ್ದೀರಾ?. ಅಂಬೇಡ್ಕರರ ಬಗ್ಗೆ ವಿಧವಿಧವಾಗಿ ಮಾತನಾಡುವ ಸಿಎಂ ಸಿದ್ದರಾಮಯ್ಯರೂ ತುಟಿ ಬಿಚ್ಚಿಲ್ಲ. ಅಮಿತ್ ಶಾ ಮಾತಿನಿಂದ ಕೆಲವರಿಗೆ ಅಪಮಾನವಾಗಿದೆ. ಕಾಂಗ್ರೆಸ್ ಪಕ್ಷವು ಅಂಬೇಡ್ಕರರ ಜೀವಿತಾವಧಿಯಿಂದ ಇಲ್ಲಿನವರೆಗೆ ಅವರ ವಿರುದ್ಧವಾಗಿ ನಡೆದುಕೊಂಡ ವಿಷಯವನ್ನು ಸಂಪೂರ್ಣ ವಿವರಿಸಿದ್ದರಿಂದ ಕಾಂಗ್ರೆಸ್ಸಿಗೆ ಮುಜುಗರವಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.