ಜನರಿಗೆ ಮನರಂಜನೆ ನೀಡುತ್ತಿರುವ ವಿಪಕ್ಷ ನಾಯಕರು : ರಮೇಶ್‍ಬಾಬು ಲೇವಡಿ
ಬೆಂಗಳೂರು : ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಎಂದೂ ಗೌರವ ಸಲ್ಲಿಸದ, ಅವರ ಸಿದ್ಧಾಂತವನ್ನು ಒಪ್ಪದ ಬಿಜೆಪಿ, ಅಂಬೇಡ್ಕರ್ ಮನುಸ್ಮೃತಿಯನ್ನು ಏಕೆ ಸುಟ್ಟರೆಂಬುದನ್ನು ಬಹಿರಂಗಗೊಳಿಸಲಿ. ಅದನ್ನು ಬಿಟ್ಟು ಅಪ್ರಬುದ್ಧ ಹೇಳಿಕೆಗಳನ್ನು ನೀಡಿ ಸಾರ್ವಜನಿಕವಾಗಿ ನಗೆ ಪಾಟಲಿಗೀಡಾಗುವುದನ್ನು ಬಿಜೆಪಿ ನಾಯಕರು ನಿಲ್ಲಿಸಲಿ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.
ಮಂಗಳವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ರಾಜ್ಯದಲ್ಲಿ ವಿಪಕ್ಷದ ನಾಯಕರಾಗಿ ವೈಫಲ್ಯಗಳನ್ನು ಕಂಡಿರುವ ಜೋಡೆತ್ತುಗಳು ಆರ್.ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ರಾಜ್ಯದ ಜನರಿಗೆ ತಮ್ಮ ಹೇಳಿಕೆಗಳ ಮೂಲಕ ಮನರಂಜನೆ ನೀಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
ಇಬ್ಬರು ವಿಪಕ್ಷ ನಾಯಕರು ಯಾವುದೇ ಜನಪರ ವಿಷಯಗಳ ಮೇಲೆ ಸರಕಾರದ ವೈಫಲ್ಯಗಳನ್ನು ಎತ್ತಿಹಿಡಿಯಲು ವಿಫಲರಾಗಿದ್ದು, ಇವತ್ತು ರಾಜ್ಯಪಾಲರನ್ನು ಭೇಟಿಯಾಗುವುದರ ಮೂಲಕ ಅವರ ನಿಜ ಬಣ್ಣವನ್ನು ಬಯಲು ಮಾಡಿಕೊಂಡಿದ್ದಾರೆ. ಬೌದ್ಧಿಕವಾಗಿ ದಿವಾಳಿಯಾಗಿರುವ ಇವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಇಂತಹ ದುರ್ಬಲ ವಿಪಕ್ಷ ನಾಯಕರನ್ನು ಕರ್ನಾಟಕ ಇತಿಹಾಸದಲ್ಲಿ ಎಂದೂ ಕಂಡಿರಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‍ನಲ್ಲಿ ಎಲ್ಲವನ್ನೂ ಉಂಡು ಬಿಜೆಪಿ ಹೊಕ್ಕಿರುವ ಛಲವಾದಿ ನಾರಾಯಣಸ್ವಾಮಿ, ಅವರ ನಾಯಕರ ಅಣತಿಯ ಪಾಲನೆಗಾಗಿ ಸ್ವಾಭಿಮಾನ ಬಿಟ್ಟು ತಲೆಯ ಮೇಲೆ ಚಡ್ಡಿ ಹೊತ್ತ ಘಟನೆ ಯಾರೂ ಮರೆಯಲು ಸಾಧ್ಯವಿಲ್ಲ. ಅಂಬೇಡ್ಕರ್ ರ ಸ್ವಾಭಿಮಾನದ ಗಂಧವೇ ತಿಳಿಯದ ಅವಕಾಶವಾದಿಗಳು ಅಂಬೇಡ್ಕರ್ ಬಗ್ಗೆ ಕೂಗು ಹಾಕುವುದು ಒಂದು ಅಪಹಾಸ್ಯ ಎಂದು ಟೀಕಿಸಿದ್ದಾರೆ.
ಅಂಬೇಡ್ಕರ್ ಅವರ ವಿಚಾರಗಳನ್ನು ಎಂದೂ ಒಪ್ಪದ ಬಿಜೆಪಿ ನಾಯಕರು, ಅವರ ಆದರ್ಶಗಳನ್ನು ಹತ್ತಿಕ್ಕಲು ಯತ್ನಿಸುತ್ತಿರುವ ಸಮಯ ಸಾಧಕರು. ಸಂವಿಧಾನವನ್ನು ಬುಡಮೇಲು ಮಾಡುವ ಹಿಡನ್ ಅಜೆಂಡಾ ಹೊಂದಿರುವ ಬಿಜೆಪಿ ನಾಯಕರು, ಇಂದು ಅವರ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳುವ ವ್ಯರ್ಥ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ರಮೇಶ್ ಬಾಬು ಲೇವಡಿ ಮಾಡಿದ್ದಾರೆ.