ʼವಿನಯ್ ಆತ್ಮಹತ್ಯೆ ಪ್ರಕರಣʼ ಸಿಬಿಐ ತನಿಖೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

Update: 2025-04-04 18:05 IST
ʼವಿನಯ್ ಆತ್ಮಹತ್ಯೆ ಪ್ರಕರಣʼ ಸಿಬಿಐ ತನಿಖೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಛಲವಾದಿ ನಾರಾಯಣಸ್ವಾಮಿ/ವಿನಯ್ ಸೋಮಯ್ಯ

  • whatsapp icon

ಬೆಂಗಳೂರು : ಮಡಿಕೇರಿ ಮೂಲದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವಿನ ಪ್ರಕರಣದಲ್ಲಿ ಶಾಸಕರಾದ ಎ.ಎಸ್.ಪೊನ್ನಣ್ಣ, ಮಂಥರ್ ಗೌಡರ ಹೆಸರುಗಳು ಕೇಳಿಬರುತ್ತಿರುವುದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.

ಮೃತ ವಿನಯ್ ಸೋಮಯ್ಯ ಅವರಿಗೆ ಅಂತಿಮ ನಮನ ಸಲ್ಲಿಸಲು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಎಸ್ಪಿ ನೇರ ಹೊಣೆ ಎಂಬುದು ಗೊತ್ತಾಗಿದೆ. ಕೂಡಲೇ ಎಸ್ಪಿಯವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಈ ಪ್ರಕರಣದಲ್ಲಿ ಒಳಗೊಂಡ ಆರೋಪಿತರಾದ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಶಾಸಕ ಮಂಥರ್ ಗೌಡ ಹಾಗೂ ತನ್ನೀರ್ ಮೈನಾ ಅವರನ್ನು ಎಫ್‍ಐಆರ್‌ನಲ್ಲಿ ಸೇರಿಸಿ ತನಿಖೆ ನಡೆಸಬೇಕು. ಅವರನ್ನು ಬಂಧಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಆತ್ಮಹತ್ಯೆ ಹಿಂದೆ ಎ.ಎಸ್.ಪೊನ್ನಣ್ಣನವರು ಇದ್ದಾರೆ ಎಂದು ಮೃತ ವಿನಯ್ ಸೋಮಯ್ಯ ಡೆತ್‍ನೋಟಿನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ, ಶಾಸಕ ಮಂಥರ್ ಗೌಡ ಅವರ ಪಾತ್ರವೂ ಇದೆ ಎಂಬ ಅನುಮಾನ ಬಂದಿದೆ. ಕೂಡಲೇ ತಡಮಾಡದೇ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಗ್ರಹಿಸಿದರು.

ಈ ಪ್ರಕರಣದಲ್ಲಿ ಪೊಲೀಸರು ನೇರವಾಗಿ ಭಾಗವಹಿಸಿದ್ದಾರೆ. ಜಾಮೀನು ಪಡೆದರೂ ಯಾಕೆ ಅವರನ್ನು ಹುಡುಕುತ್ತಿದ್ದರು?, ಅವರೇನು ರೌಡಿಯೇ? ಎಂದ ಪ್ರಶ್ನಿಸಿದ ಅವರು, ಕಾಂಗ್ರೆಸ್ಸಿನ ಅಟ್ಟಹಾಸ ಮೆಟ್ಟಿ ನಿಲ್ಲುವ ಶಕ್ತಿ ನಮಗಿದೆ. ಈ ಸರಕಾರಕ್ಕೆ ಎಚ್ಚರಿಕೆ ನೀಡಲಾಗುವುದು. ಯಾವುದೇ ಕಾರಣಕ್ಕೆ ಜೀವತ್ಯಾಗ ಮಾಡಬಾರದು. ನಮ್ಮ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News