ಅಮಿತ್‌ ಶಾ ಹೇಳಿಕೆ ಖಂಡಿಸಿ ಕರೆ ನೀಡಿದ್ದ ಕಲಬುರಗಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

Update: 2024-12-24 14:20 GMT

ಕಲಬುರಗಿ : ಡಿ17ರಂದು ಸದನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಸಚಿವ ಅಮಿತ್ ಶಾ ಅವರು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದನ್ನು ಖಂಡಿಸಿ, ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ, ಸಂವಿಧಾನ ರಕ್ಷಣಾ ಹೋರಾಟ ಸಮಿತಿ, ದಲಿತ ಪರ, ಮತ್ತಿತರ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಕಲಬುರಗಿ ಬಂದ್ ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಅಮಿತ್ ಶಾ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿ ನಗರದ ಗಂಜ್ ಪ್ರದೇಶದಲ್ಲಿರುವ ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆಯಿತು. ಪ್ರತಿಭಟನಾನಿರತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಿ ನೋಡಿದರೂ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ :

ಪ್ರತಿಭಟನೆಯಲ್ಲಿ ಎಲ್ಲಿ ನೋಡಿದರೂ ಅಂಬೇಡ್ಕರ್ ಅಂಬೇಡ್ಕರ್ ಎಂಬ ಘೋಷಣೆಗಳು ಗಗನಕ್ಕೆ ಮುಟ್ಟಿದವು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಹೋರಾಟಗಾರರು, ಪ್ರಗತಿಪರ, ದಲಿತಪರ ಸಂಘಟನೆಯ ಮುಖಂಡರು, ಅಧಿಕಾರದ ಮದ ಏರಿದ ಅಮಿತ್ ಶಾ ಮತ್ತು ಸಂಘ ಪರಿವಾರದ ಮುಖವಾಡಗಳು ದೇಶದಲ್ಲಿ ಮನುಸ್ಮೃತಿ ಜಾರಿ ತರಲು ಷಡ್ಯಂತ್ರ ನಡೆಸುತ್ತಿದ್ದಾರೆ. ಅದಕ್ಕೆ ಮೇಲಿಂದ ಮೇಲೆ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಅಮಿತ್ ಶಾ ರಾಜೀನಾಮೆ ಕೊಡೋವರೆಗೂ ವಿಶ್ರಮಿಸುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಮನುಸ್ಮೃತಿ ಜಾರಿಗೆ ತರಲು ಬಿಜೆಪಿ ಸರಕಾರ ಪ್ರಯತ್ನಿಸುತ್ತಿದೆ, ದೇಶದಲ್ಲಿ ದಲಿತರು, ಅಲ್ಪಸಂಖ್ಯಾತ ಜನರನ್ನು ಗುಲಾಮರಂತೆ ಮಾಡಲು ಯತ್ನಿಸುತ್ತಿದೆ, ನೀವೇನೇ ಮಾಡಿದರೂ ನಾವು ಜಗ್ಗುವುದಿಲ್ಲ. ನಮಗೆ ಡಾ.ಅಂಬೇಡ್ಕರ್ ಅವರು ಹೊರಾಡುವ ಶಕ್ತಿ ಸಂವಿಧಾನದಲ್ಲಿ ಕೊಟ್ಟಿದ್ದಾರೆ, ಆ ಹಕ್ಕು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಇಂದು ಕಲಬುರಗಿಯಲ್ಲಿ ಹೋರಾಟ ಮಾಡಿದ್ದೇವೆ, ಒಂದು ವೇಳೆ ಅಮಿತ್ ಶಾ ಅವರ ರಾಜೀನಾಮೆ ಪಡೆಯದಿದ್ದರೆ ನಾಳೆ ದಿಲ್ಲಿಗೆ ಬರುತ್ತೇವೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗಿನಿಂದಲೇ ಬಂದ್‌ಗೆ ಉತ್ತಮ ಪ್ರತಿಕ್ರಿಯೆ :

ನಗರದಲ್ಲಿ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆ ಮಂಗಳವಾರ ಬೆಳಗ್ಗೆ ಪ್ರತಿಭಟನೆ ಕಾವು ಶುರುವಾಯಿತು, ಪ್ರತಿನಿತ್ಯ ಮುಂಜಾನೆ ತೆರೆಯುವ ಅಂಗಡಿ ಮುಂಗಟ್ಟುಗಳು ಎಲ್ಲಾ ಕಡೆಯೂ ಮುಚ್ಚಿರುವುದು ಕಂಡು ಬಂತು. ಇಲ್ಲಿಂದ ಬೇರೆ ಕಡೆ ಮತ್ತು ಬೇರೆ ಕಡೆಯಿಂದ ನಗರಕ್ಕೆ ಮಧ್ಯರಾತ್ರಿಯಲ್ಲಿ ಬಂದಿಳಿದಿದ್ದ ಪ್ರಯಾಣಿಕರು ಕೇಂದ್ರ ಬಸ್ ನಿಲ್ದಾಣದಲ್ಲಿ ಅಲೆದಾಡಿದ ಪ್ರಸಂಗವೂ ನಡೆಯಿತು. ಇಲ್ಲಿನ ಬಿದ್ದಾಪುರ ಕ್ರಾಸ್, ಜಾಫರಬಾದ್ ಕ್ರಾಸ್, ಆಳಂದ ಚೆಕ್ ಪೋಸ್ಟ್, ರಾಮಮಂದಿರ, ಖರ್ಗೆ ಪೆಟ್ರೋಲ್ ಬಂಕ್ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಅಮಿತ್ ಶಾ ಪ್ರತಿಕೃತಿ ದಹನ ಮಾಡಿ, ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅಂಗಡಿ ಮುಂಗಟ್ಟುಗಳ ಮಾಲಕರ ಸ್ವಯಂಪ್ರೇರಿತ ಬಂದ್ :

ನಗರ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ನೀಡಿದ ವ್ಯಾಪಾರಿಗಳು, ವರ್ತಕರು, ಕೂಲಿ ಕಾರ್ಮಿಕರು ಸೇರಿದಂತೆ ಇತರ ವಾಣಿಜ್ಯ ಮಳಿಗೆಯ ಮಾಲಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರ ಪ್ರತಿಕೃತಿ ದಹಿಸಲಾಯಿತು, ರ್‍ಯಾಲಿಯ ವೇಳೆ ಅಮಿತ್ ಶಾ ಅವರ ಭಾವಚಿತ್ರವನ್ನು ಮುಂದಿಟ್ಟುಕೊಂಡು ಶವಯಾತ್ರೆ ಮಾಡಿರುವುದು ಕಂಡುಬಂತು.

ಪ್ರತಿಭಟನಾ ರ್‍ಯಾಲಿಯು ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ ಬಳಿಕ ಹಲವು ಹೋರಾಟಗಾರರು, ಮುಖಂಡರು ಅಮಿತ್ ಶಾ ಅವರನ್ನು ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡ ವಿಠ್ಠಲ ದೊಡ್ಡಮನಿ, ಸುಭಾಷ್ ರಾಠೋಡ, ವಹಾಜ್ ಬಾಬಾ ಜುನೈದಿ, ಕೆ.ನೀಲಾ, ಶರಣಕುಮಾರ ಮೋದಿ, ಲಚಪ್ಪ ಜಮಾದಾರ, ಮೀನಾಕ್ಷಿ ಬಾಳಿ, ಭೀಮರಾವ್ ಟಿ ಟಿ , ಗುರುನಾಥ ಪೂಜಾರಿ, ಮಜರ್ ಆಲಂ ಖಾನ್, ಲಿಂಗರಾಜ ತಾರಪೇಲ , ತಿಪ್ಪಣ್ಣ ಒಡೆಯರ್, ಕೃಷ್ಣಾ ರೆಡ್ಡಿ, ರಾಜೇಶ ಗುತ್ತೇದಾರ, ನಂದಕುಮಾರ ಮಾಲಿಪಾಟೀಲ, ಸೂರ್ಯಕಾಂತ ನಿಂಬಾಳ್ಕರ್, ಶರಣಬಸಪ್ಪ ಸೂರ್ಯವಂಶಿ, ಚಂದು ಜಾಧವ, ಸುರೇಶ್ ಹಾದಿಮನಿ, ರಾಜಕುಮಾರ ಕಪನೂರು, ಹಣಮಂತ ಯಳಸಂಗಿ, ವಿಶಾಲ ನವರಂಗ, ಸಚಿನ್ ಶಿರವಾಳ, ಮಲ್ಲಪ್ಪ ಹೊಸಮನಿ, ಅರ್ಜುನ ಭದ್ರೆ, ಪ್ರಕಾಶ್ ಮೂಲಭಾರತಿ, ರಘುವೀರ ತಾವಡೆ, ಆನಂದ ವಾರಿಕ್, ಸುನೀಲ ಮಾರುತಿ ಮಾನಪಡೆ, ಸೈಬಣ್ಣಾ ಹೇಳವಾರ, ಎ ಬಿ ಹೊಸಮನಿ, ಶಾಮ್ ನಾಟೇಕರ್, ದೇವಿಂದ್ರ ಸಿನ್ನೂರು, ಪವಿತ್ರ ವಸ್ತ್ರದ, ಸುನೀಲ ದೊಡ್ಡಮನಿ, ಸಂತೋಷ ಮೇಲಿನಮನಿ, ಮಹಾಂತಪ್ಪ ಸಂಗಾವಿ, ಅರವಿಂದ ಚವಾಣ, ಕುಮಾರ ಯಾದವ, ದಿನೇಶ ದೊಡ್ಡಮನಿ, ಲಾಲ್ ಅಹ್ಮದ್ ಶೆಟ್, ಹಣಮಂತ ಬೋದಕರ್, ಮರಿಯಪ್ಪ ಹಳ್ಳಿ, ಲಕ್ಷ್ಮೀಕಾಂತ್ ಹುಬ್ಬಳ್ಳಿ, ರಾಜು ಜಾನೇ, ಅಶ್ವಿನಿ ಸಂಕ್, ರೇಣುಕಾ ಸಿಂಗೆ, ಅಲ್ಲಮಪ್ರಭು ನಿಂಬರಗಿ ಸೇರಿದಂತೆ ಹಲವಾರು ಹೋರಾಟಗಾರರು ಪಾಲ್ಗೊಂಡಿದ್ದರು.

 

 

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News