ಸಿ.ಟಿ.ರವಿ ತಲೆಗೆ ಸಣ್ಣ ಗಾಯವಾಗಿದ್ದು, ಸರಳ ಬ್ಯಾಂಡೇಜ್ ಮಾಡಲಾಯಿತು: ವೈದ್ಯಕೀಯ ಸಿಬ್ಬಂದಿಯ ಪತ್ರ ವೈರಲ್!

Update: 2024-12-24 10:10 GMT

ಬೆಂಗಳೂರು: ಮಾಜಿ ಸಚಿವ, ಎಂಎಲ್ಸಿ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪ ರಾಜ್ಯಾದ್ಯಂತ ಸದ್ದು ಮಾಡಿದೆ. ಅಲ್ಲದೆ, ಈ ಪ್ರಕರಣ ಆಡಳಿತ ಮತ್ತು ವಿಪಕ್ಷ ನಾಯಕರ ನಡುವಿನ ಆರೋಪ ಪ್ರತ್ಯಾರೋಪಕ್ಕೂ ಕಾರಣವಾಗಿದೆ.

ಈ ಮಧ್ಯೆ ಸಿ.ಟಿ. ರವಿ ಬಂಧನದ ವೇಳೆ ಅವರ ತಲೆಗೆ ಆಗಿರುವ ಗಾಯದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಗಾಯದ ಕುರಿತಂತೆ ಸಿಟಿ ರವಿಗೆ ಚಿಕಿತ್ಸೆ ನೀಡಿದ ಸಿಬ್ಬಂದಿಯದ್ದು ಎನ್ನಲಾದ ಹಿಂಬರಹದ ಪತ್ರವೊಂದು ವೈರಲ್ ಆಗಿದೆ. ಪತ್ರದಲ್ಲಿ ಸಿ.ಟಿ. ರವಿ ತಲೆಗೆ ಸಣ್ಣಪುಟ್ಟ ಗಾಯವಾಗಿತ್ತು, ಹೀಗಾಗಿ ಸರಳ ಬ್ಯಾಂಡೇಜ್ ಮಾಡಲಾಯಿತು. ಪ್ರಾಥಮಿಕ ಚಿಕಿತ್ಸೆ ನೀಡುವಷ್ಟು ಮಾತ್ರ ಗಾಯವಾಗಿತ್ತು ಎಂದು ಉಲ್ಲೇಖಿಸಲಾಗಿತ್ತು. 

ಇದಲ್ಲದೆ, ಕೋರ್ಟ್‌ ಗೆ ಹಾಜರುಪಡಿಸುವ ಮುನ್ನವೂ ಸಿಟಿ ರವಿಗೆ ತಪಾಸಣೆ ಮಾಡಲಾಗಿದೆ ಎಂದು ಹೇಳುವ ಪ್ರಾಥಮಿಕ ಆರೋಗ್ಯ ಕೇಂದ್ರದ್ದು ಎನ್ನಲಾದ ಆರೋಗ್ಯ ತಪಾಸಣೆಯ ವರದಿ ಕೂಡ ಬಹಿರಂಗವಾಗಿದೆ. ಈ ವರದಿಯಲ್ಲಿ ಸಿಟಿ ರವಿ ಆರೋಗ್ಯವಾಗಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ.

ಬೆಳಗಾವಿ ಅಧಿವೇಶನದ ಕೊನೆಯ ದಿನ ಸಿ ಟಿ ರವಿ ಬಳಸಿದ್ದಾರೆ ಎನ್ನಲಾದ ಅಶ್ಲೀಲ ಪದ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ, ಇದೇ ವೇಳೆ ಸುವರ್ಣಸೌಧದ ಬಳಿ ಅವರ ಕಾರಿಗೆ ಮುತ್ತಿಗೆ ಹಾಕಿ ಹಲ್ಲೆ ಯತ್ನ ಕೂಡ ನಡೆದಿತ್ತು ಎಂದು ಆರೋಪಿಸಲಾಗಿತ್ತು. ಈ ವೇಳೆ ಸಿಟಿ ರವಿ ಅವರ ತಲೆಗೆ ಗಾಯವಾಗಿತ್ತು ಎನ್ನಲಾಗಿದ್ದು, ಬಳಿಕ ಅವರ ಬಂಧನವಾಗಿತ್ತು.

ಆಸ್ಪತ್ರೆಯಿಂದ ಬಿಡುಗಡೆಯ ಬಳಿಕವೂ ಅವರು ಮೂರು ನಾಲ್ಕು ದಿನ ಬ್ಯಾಂಡೇಜನ್ನು ಹಾಗೆಯೇ ಉಳಿಸಿಕೊಂಡಿದ್ದರು.

                                                              ವೈರಲ್‌ ಆದ ಪತ್ರ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News