ಬೆಂಗಳೂರಿನಲ್ಲಿ ಫೆಲೆಸ್ತೀನ್ ಬಿಕ್ಕಟ್ಟು ಕುರಿತ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ; ಪೊಲೀಸರ ನಡೆ ಖಂಡಿಸಿ ಮುಖ್ಯಮಂತ್ರಿಗೆ ಬಹಿರಂಗ ಪತ್ರ
ಬೆಂಗಳೂರು: ನಗರದ ರಂಗ ಶಂಕರದಲ್ಲಿ ಕೆಲವು ಕಲಾವಿದರು ಫೆಲೆಸ್ತೀನ್ ಸಂತ್ರಸ್ತರ ಪರವಾಗಿ ಕವನ ವಾಚನ, ಕಿರುನಾಟಕ ವಾಚನ ಮುಂತಾದ ಸಾಂಸ್ಕತಿಕ ಕಾರ್ಯಕ್ರಮ ಏರ್ಪಡಿಸಲು ಪೊಲೀಸರು ಬಿಡಲಿಲ್ಲ ಎಂಬ ಆಘಾತಕಾರಿ ಘಟನೆ ಬುಧವಾರದಂದು ನಡೆದಿದ್ದು, ಇದು ರಾಜ್ಯದ ಜನತೆಯ ಶಾಂತಿಯುತ ಪ್ರತಿಭಟನೆಯ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಜಾಗೃತ ನಾಗರಿಕರು ಕರ್ನಾಟಕ ಖಂಡಿಸಿದೆ.
ಗುರುವಾರ ಜಾಗೃತ ನಾಗರಿಕರು ಕರ್ನಾಟಕದ ಮುಖಂಡರಾದ ಡಾ. ಕೆ. ಮರುಳಸಿದ್ದಪ್ಪ, ಡಾ. ಜಿ. ರಾಮಕೃಷ್ಣ, ಡಾ. ವಿಜಯಾ, ಪ್ರೋ. ಎಸ್.ಜಿ. ಸಿದ್ದರಾಮಯ್ಯ, ಪ್ರೋ. ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್, ಡಾ. ವಸುಂಧರಾ ಭೂಪತಿ, ಡಾ. ಕೆ.ಷರೀಫಾ ಸೇರಿದಂತೆ ಮತ್ತಿತರ ಪ್ರಗತಿಪರ ಚಿಂತಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರವನ್ನು ಬರೆದಿದ್ದು, ಪ್ರತಿಭಟನಾಕಾರರನ್ನು ಹತ್ತಿಕ್ಕದಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿ ದೇಶದ ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಫೆಲೆಸ್ತೀನ್ ಜನರ ಪರವಾಗಿ ಸಾಮಾಜಿಕ ಕಾರ್ಯಕರ್ತರ ಶಾಂತಿಯುತ ಅಭಿವ್ಯಕ್ತಿಯನ್ನು ಕರ್ನಾಟಕದ ಪೊಲೀಸರು ಬಲವಂತವಾಗಿ ಹತ್ತಿಕ್ಕುತ್ತಿರುವ ರೀತಿಯು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸುತ್ತಿದೆ. ಫೆಲೆಸ್ತೀನ್ ಜನರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಜಗತ್ತಿನಾದ್ಯಂತ ಎಲ್ಲ ದೇಶಗಳಲ್ಲೂ ನಾಗರಿಕರು ತಮ್ಮ ಸಹಾನುಭೂತಿ ಹಾಗೂ ಅನುಕಂಪವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಫೆಲೆಸ್ತೀನ್‍ನಲ್ಲಿ ಅತ್ಯಂತ ಭೀಕರವಾಗಿ ಮಕ್ಕಳು ಮತ್ತು ಮಹಿಳೆಯರನ್ನು ಹತ್ಯೆ ಮಾಡುತ್ತಿರುವ ಕೃತ್ಯವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಅಮೆರಿಕಾ ಮತ್ತಿತರ ದೇಶಗಳಲ್ಲಿನ ಇಸ್ರೇಲ್ ನವರು ಮತ್ತು ಯೆಹೂದಿಗಳ ನೇತೃತ್ವದಲ್ಲಿ ಭಾರಿ ಸಂಖ್ಯೆಯ ಪ್ರತಿಭಟನೆಗಳು ನಡೆಯುತ್ತಿವೆ. ಈ ಕೂಡಲೇ ಆಕ್ರಮಣವನ್ನು ನಿಲ್ಲಿಸಲು ಒಕ್ಕೊರಳಿನ ಮನವಿ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭಾರತ ಸರಕಾರವೂ ಫೆಲೆಸ್ತೀನ್ ಜನರ ಪರವಾಗಿ ತನ್ನ ಬೆಂಬಲವನ್ನು ಪುನರುಚ್ಚರಿಸುತ್ತಿದೆ. ನಿಜಸ್ಥಿತಿ ಹೀಗಿರುವಾಗ ಫೆಲೆಸ್ತೀನ್ ಜನರ ಬೆಂಬಲಾರ್ಥ ನಡೆಯುತ್ತಿರುವ ಶಾಂತಿಯುತ ಸಭೆ ಸಮಾರಂಭಗಳನ್ನು ನಿರ್ದಯವಾಗಿ ಹತ್ತಿಕ್ಕುತ್ತಿರುವ ಕರ್ನಾಟಕದ ಪೊಲೀಸರ ವರ್ತನೆಯು ದಿಗ್ಭ್ರಮೆ ಹುಟ್ಟಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರ, ಸಾಗರ, ತುಮಕೂರು ಪಟ್ಟಣಗಳಲ್ಲಿ ಹಲವಾರು ಸಂಘ ಸಂಸ್ಥೆಗಳು ನಡೆಸಿದ ಶಾಂತಿಯುತ ಪ್ರದರ್ಶನಗಳನ್ನು ಕರ್ನಾಟಕ ಪೊಲೀಸರು ತಡೆದಿದ್ದಾರೆ ಮತ್ತು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಅಂದರೆ ಕರ್ನಾಟಕ ರಾಜ್ಯಕ್ಕೆ ಅದರದ್ದೇ ಆದ ವಿದೇಶಾಂಗ ನೀತಿ ಇದೆಯೇ ಎಂಬ ಅನುಮಾನ ಬರುತ್ತಿದೆ.
ಮತ್ತೊಂದು ವಿಷಾದಕರ ಸಂಗತಿಯೆಂದರೆ ಸಂಕುಚಿತ ಭಾವನೆಯ ಬಲಪಂಥೀಯ ಗುಂಪುಗಳ ಕುಕೃತ್ಯಗಳ ಬಗ್ಗೆ ಮೃದು ಧೋರಣೆ ತೋರುತ್ತಿರುವ ಮತ್ತು ನಾಗರಿಕರ ನೈಜ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುತ್ತಿರುವ ಪೊಲೀಸರ ನಡೆಯು ಆಘಾತಕಾರಿಯಾಗಿದೆ. ಹಿಂಸೆ, ಆಕ್ರಮಣ, ದೌರ್ಜನ್ಯಗಳ ವಿರುದ್ಧ ವ್ಯಕ್ತಪಡಿಸುವ ಸಾಂವಿಧಾನಿಕ ಅಭಿವ್ಯಕ್ತಿಯ ಸ್ವಾತಂತ್ರ್ಯ, ಹಕ್ಕುಗಳನ್ನು ರಕ್ಷಿಸುವ ಹೊಣೆಗಾರಿಕೆ ಸರಕಾರದ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.