ಯಾದಗಿರಿ | ಅರಣ್ಯ ಭೂಮಿ ಒತ್ತುವರಿ ಆರೋಪ: ಐವರ ವಿರುದ್ಧ ಪ್ರಕರಣ ದಾಖಲು
ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮಕ್ಕೆ ಹತ್ತಿರವಿರುವ ಸುಮಾರು 14 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ಆರೋಪದಲ್ಲಿ ಐವರ ವಿರುದ್ಧ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.
ಮದ್ದರಕಿ ಗ್ರಾಮದ ಹತ್ತಿರವಿರುವ ಸರ್ವೆ ನಂ 442ರಲ್ಲಿ ಬರುವ ಅರಣ್ಯ ಭೂಮಿಯನ್ನು ರವಿ ಮಲ್ಲಪ್ಪ ದೊರಿ, ನಾಗಪ್ಪ ಭೀಮರಾಯ ದೊರಿ ಸುಮಾರು 4 ಎಕರೆ ಮತ್ತು ಚಂದ್ರಪ್ಪ ಸಣ್ಣ ಸಿದ್ದಪ್ಪ, ಶ್ರೀಮಂತ ತಂದೆ ಸಿದ್ದಪ್ಪ, ಭೀಮಯ್ಯ ತಂದೆ ಹುಸನಯ್ಯ ಗುತ್ತೆದಾರ ಸುಮಾರು 10 ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದು ಮೀಸಲು ಅರಣ್ಯದ ಜಮೀನು ಆಗಿವೆ. ಅನಧಿಕೃತವಾಗಿ ಭೂಮಿಯನ್ನು ಒತ್ತುವರಿ ಮಾಡಿರುವುದು ದೃಢಪಟ್ಟಿರು ಹಿನ್ನೆಲೆಯಲ್ಲಿ ಐವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಕರ್ನಾಟಕ ಅರಣ್ಯ ಕಾಯ್ದೆ 1963 ಸೆಕ್ಷನ್ 33(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಆರೋಪಿತರು ತಲೆಮರೆಸಿಕೊಂಡಿದ್ದಾರೆ ಎಂದು ವಲಯ ಅರಣ್ಯ ಅಧಿಕಾರಿ ಬುರಾನದ್ದೀನ್ ತಿಳಿಸಿದ್ದಾರೆ.