ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಹಿಂಪಡೆದ ಸರಕಾರ: ವಿಪಕ್ಷಗಳಿಂದ ನಿಲುವಳಿ ಸೂಚನೆಯಡಿ ಚರ್ಚೆಗೆ ಪಟ್ಟು

Update: 2023-12-15 11:34 GMT

ಬೆಳಗಾವಿ: ಆದಾಯಕ್ಕಿಂತ ಹೆಚ್ಚಿನ ಸಂಪತ್ತುಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಹಿಂಪಡೆದ ಸಂಪುಟದ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿಪಕ್ಷ ಬಿಜೆಪಿ, ಈ ಕುರಿತು ನಿಲುವಳಿ ಸೂಚನೆಯಡಿ ವಿಷಯ ಚರ್ಚಿಸಲು ಅವಕಾಶ ಕೊಡುವಂತೆ ಶುಕ್ರವಾರ ವಿಧಾನಸಭೆಯಲ್ಲಿ ಪಟ್ಟು ಹಿಡಿದರು.

ಆದರೆ, ಈ ಪ್ರಕರಣವು ವೈಯಕ್ತಿಕವಾದದ್ದು ನಿಯಮ 60ರಡಿ ಚರ್ಚೆಗೆ ಅವಕಾಶ ನೀಡುವುದು ಸರಿಯೇ? ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣವನ್ನು ಸದನದಲ್ಲಿ ಚರ್ಚೆಗೆ ಅವಕಾಶ ನೀಡಬಾರದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನವಿ ಮಾಡಿದರು.

ಈ ಸಂಬಂಧ ರೂಲಿಂಗ್ ನೀಡಿದ ಸ್ಪೀಕರ್ ಯು.ಟಿ.ಖಾದರ್, ‘ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣದ ಕುರಿತು ನಿಲುವಳಿ ಸೂಚನೆಯಡಿ ಚರ್ಚಿಸಲು ಅವಕಾಶವಿಲ್ಲ. ಆದುದರಿಂದ, ಪ್ರತಿಪಕ್ಷದ ನಾಯಕರು ಬೇರೆ ರೂಪದಲ್ಲಿ ಚರ್ಚೆಗೆ ಕೋರಿದರೆ ಪರಿಶೀಲಿಸಲಾಗುವುದು’ ಎಂದು ಚರ್ಚೆಗೆ ನಿರಾಕರಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಚಿವ ಸಂಪುಟಕ್ಕೆ ತನ್ನದೇ ಆದ ಗಾಂಭೀರ್ಯತೆ ಇದೆ. ಅಡ್ವೊಕೇಟ್ ಜನರಲ್ ಮೇಲೆ ಒತ್ತಡ ಹೇರಿ ಅವರಿಂದ ಅಭಿಪ್ರಾಯ ಪಡೆದು ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಯನ್ನು ಹಿಂಪಡೆದದ್ದು ಸರಿಯಲ್ಲ. 2019ರಲ್ಲಿ ಜಾರಿ ನಿರ್ದೇಶನಾಲಯದ ಅರ್ಜಿಯಂತೆ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ನಮ್ಮ ಸರಕಾರ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು ಎಂದರು.

ಇದರಲ್ಲಿ ಯಾವುದೆ ರಾಜಕೀಯ ಇರಲಿಲ್ಲ. ಕೇಂದ್ರ ಸರಕಾರವು ಯಡಿಯೂರಪ್ಪ, ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿರಲಿಲ್ಲವೇ?. ಸಚಿವ ಸಂಪುಟವೆ ಪ್ರಕರಣಗಳನ್ನು ಹಿಂಪಡೆಯುವುದಾದರೆ ನ್ಯಾಯಾಂಗದ ಕೆಲಸ ಏನು? ಎಲ್ಲರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದುಕೊಳ್ಳಿ ಎಂದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News