ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ: ವರದಿ

Update: 2025-01-28 17:47 GMT
ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ: ವರದಿ

PC | DECCANHERALD

  • whatsapp icon

ಬೆಂಗಳೂರು: ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಸ್ಥಿರವಾಗಿ ಏರಿಕೆಯಾಗುತ್ತಿದ್ದು, ಒಂದು ಕಾಲದಲ್ಲಿ ಅಸಹಜವೆಂಬಂತಿದ್ದದ್ದು ಇದೀಗ ಸಹಜವಾಗಿ ಮಾರ್ಪಟ್ಟಿದೆ.

ಮಾನವ-ವನ್ಯಜೀವಿ ಸಂಘರ್ಷದ ದತ್ತಾಂಶಗಳ ವಿಶ್ಲೇಷಣೆಯೊಂದರ ಪ್ರಕಾರ, 20010-11ರಿಂದ 2023-24ರ ನಡುವಿನ 14 ವರ್ಷಗಳ ನಡುವೆ ನಡೆದಿರುವ ಮಾನವರಿಂದ ಜಾನುವಾರುಗಳವರೆಗಿನ ಸಾವು ಹಾಗೂ ಆಸ್ತಿಪಾಸ್ತಿ ಹಾನಿಯು ಮುಂದಿನ ದಿನಗಳಲ್ಲಿ ಪ್ರಮುಖ ಬಿಕ್ಕಟ್ಟಾಗಿ ರೂಪಾಂತರಗೊಳ್ಳುವುದನ್ನು ತೋರಿಸುತ್ತಿವೆ.

ಸಿಬ್ಬಂದಿಗಳು ಹಾಗೂ ಸಂಪನ್ಮೂಲ ಕೊರತೆ ಎದುರಿಸುತ್ತಿರುವ ಅರಣ್ಯ ಇಲಾಖೆಯು, ಈ ಸವಾಲುಗಳನ್ನು ಎದುರಿಸಲು ದುರ್ಬಲವಾಗಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಸಂಘರ್ಷದ ಸ್ವರೂಪಗಳಲ್ಲಿ ನೈಸರ್ಗಿಕ ಕಾಡುಗಳ ನಷ್ಟ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಸಂಘರ್ಷದಲ್ಲಿನ ಏರಿಕೆಯು ವಾಸ್ತವ್ಯ ನಾಶ ಹಾಗೂ ವಿಘಟನೆಯನ್ನು ಸೂಚಿಸುತ್ತಿದೆ. ಕಳೆದ 14 ವರ್ಷಗಳಲ್ಲಿ 11,500 ಎಕರೆಯಷ್ಟು ಅರಣ್ಯ ನಾಶವಾಗಿದ್ದು, ಈ ಪೈಕಿ ಗಣಿಗಾರಿಕೆಗಾಗಿ ನಾಶವಾಗಿರುವ 4,228 ಎಕರೆ ಅರಣ್ಯ ಪ್ರದೇಶವೂ ಸೇರಿದೆ. ಇದರೊಂದಿಗೆ ಅತಿಕ್ರಮಣಕಾರಿ ಸಸ್ಯ ಪ್ರಭೇದಗಳು ವನ್ಯಜೀವಿಗಳ ವಾಸ್ತವ್ಯವನ್ನು ಕುಂಠಿತಗೊಳಿಸುತ್ತಿವೆ.

ಜಾನುವಾರುಗಳ ಹತ್ಯೆ ಹಾಗೂ ಬೆಳೆ ಹಾನಿ ದತ್ತಾಂಶಗಳಲ್ಲಿನ ಪ್ರಾತಿನಿಧಿಕ ಅಂಕಿ-ಸಂಖ್ಯೆಗಳಾಗಿದ್ದು, ವನ್ಯಜೀವಿಗಳ ನಿರ್ವಹಣೆಯಲ್ಲಿರುವ ಸವಾಲಿನ ಬಗ್ಗೆ ಸುಳಿವನ್ನು ನೀಡುತ್ತಿವೆ. ಕಳೆದ 5 ವರ್ಷಗಳವರೆಗೆ ಹತ್ಯೆಗೀಡಾಗಿರುವ ಜಾನುವಾರುಗಳ ಸಂಖ್ಯೆ ಸುಮಾರು 2,000ದಷ್ಟಿದೆ. ಈ ಸಂಖ್ಯೆಯು 2020-21ರ ವೇಳೆಗೆ 3,000 ತಲುಪಿದ್ದು, 2021-22ನೇ ಸಾಲಿನಲ್ಲಿ 4,052ಕ್ಕೆ ಏರಿಕೆಯಾಗುವ ಮೂಲಕ ನಿರಂತರವಾಗಿ ಏರಿಕೆಯಾಗುತ್ತಲೇ ಸಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಸಂಖ್ಯೆ 5,000 ದಾಟಿದೆ.

ಅದೇ ರೀತಿ, ಬೆಳೆ ಹಾನಿಯು 2010-11ನೇ ಸಾಲಿನಲ್ಲಿ ಒಂದು ಬಾರಿ ಮಾತ್ರ 30,000 ದಾಟಿತ್ತು. ಅಂದಿನಿಂದ ಈ ಸಂಖ್ಯೆಯು ಹೊಸ ಮೈಲಿಗಲ್ಲನ್ನು ತಲುಪಿದ್ದು, 2023-24ನೇ ಸಾಲಿನಲ್ಲಿ 38,000ಕ್ಕೆ ತಲುಪಿವೆ. ಹಣಕಾಸಿನ ಲೆಕ್ಕಾಚಾರದ ಪ್ರಕಾರ, ಹಾನಿಯನ್ನು ಭರ್ತಿ ಮಾಡಿಕೊಳ್ಳಲು ಅರಣ್ಯ ಇಲಾಖೆಯು 31.61 ಕೋಟಿ ರೂ. ವೆಚ್ಚ ಮಾಡಿದೆ. ಆದರೆ, ಅರಣ್ಯ ಇಲಾಖೆ ವಿತರಿಸಿರುವ ಪರಿಹಾರವು ನಗಣ್ಯ ಎಂದು ರೈತರು ಆರೋಪಿಸುತ್ತಾರೆ. ವಿಶೇಷವಾಗಿ ಕಬ್ಬು ಹಾಗೂ ಬಾಳೆಹಣ್ಣಿನಂಥ ವಾಣಿಜ್ಯ ಬೆಳೆಗಳ ವಿಚಾರದಲ್ಲಿ ಎನ್ನುತ್ತಾರೆ.

2023-24ನೇ ಸಾಲಿನಲ್ಲಿ ಮಾನವರು ಗಾಯಗೊಳ್ಳುವ, ಮೃತ್ಯು ಹಾಗೂ ಆಸ್ತಿ ಹಾನಿ ಘಟನೆಗಳ ಸಂಖ್ಯೆ ಅಧಿಕಗೊಂಡಿದ್ದು, ಈ ವರ್ಷವು ಹುಲಿಗಳು ಹಾಗೂ ಆನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಅರಣ್ಯ ಇಲಾಖೆ ತನ್ನ ಬೆನ್ನು ತಾನೇ ತಟ್ಟಿಕೊಂಡಿರುವುದಕ್ಕೂ ಸಾಕ್ಷಿಯಾಗಿದೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಶ್ ಕೆ. ಮಾಲ್ ಖೇಡೆ, ಬಿರು ಬೇಸಿಗೆಯ ಹೊರತಾಗಿಯೂ, ಕಳೆದ ವರ್ಷ ಇಂತಹ ಘಟನೆಗಳ ಏರಿಕೆಗೆ ಬೇರಾವುದೇ ವಿವರಣೆಗಳಿಲ್ಲ ಎನ್ನುತ್ತಾರೆ.

ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆಯ ಮುಖ್ಯಸ್ಥರು) ಬಿ.ಕೆ. ಸಿಂಗ್ ಪ್ರಕಾರ, ರಾಜಕಾರಣಿಗಳ ಕೃತ್ಯದ ಕಾರಣಕ್ಕೆ ಸಂಘರ್ಷ ಘಟನೆಗಳ ಬೆಲೆ ತೆರುವಂತಾಗಿದೆ ಎಂದು ಬಣ್ಣಿಸುತ್ತಾರೆ.

“ಅರಣ್ಯ ನಾಶ ಹಾಗೂ ವಿಘಟನೆ ವಾಸ್ತವ್ಯವನ್ನು ಕಿರಿದಾಗಿಸುತ್ತಿದ್ದು, ವನ್ಯಜೀವಿ ನಿರ್ವಹಣೆಯಲ್ಲಿ ಹವಾಮಾನ ಬದಲಾವಣೆ ಸೇರಿದಂತೆ ಎಲ್ಲವೂ ಪ್ರಮುಖ ಸವಾಲನ್ನು ಒಡ್ಡುತ್ತಿವೆ. ಒತ್ತುವರಿ ಪರಿಶೀಲನೆಯಲ್ಲಿ ಸರಕಾರದ ವೈಫಲ್ಯ, ಅರಣ್ಯ ರಕ್ಷಣೆ ಕಾಯ್ದೆಯ ದುರ್ಬಳಕೆ ಹಾಗೂ ವೈಜ್ಞಾನಿಕ ಅಧ್ಯಯನಗಳಿಂದ ಕಲಿಯಲು ನಿರಾಕರಿಸುತ್ತಿರುವ ರಾಜಕಾರಣಿಗಳ ಕಾರಣಗಳೆಲ್ಲವೂ ಈಗಿನ ಸ್ಥಿತಿಗೆ ತಂದಿವೆ” ಎಂದು ಅವರು ಹೇಳುತ್ತಾರೆ.

ಹಾಲಿ ಸಂರಕ್ಷಣಾ ಧೋರಣೆಯನ್ನು ತಕ್ಷಣವೇ ಬದಲಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯ ಪಡುತ್ತಾರೆ. “ನಾವು ಪ್ರತಿಯೊಬ್ಬ ವ್ಯಕ್ತಿಯನ್ನೂ ರಕ್ಷಿಸಲು ಯತ್ನಿಸುತ್ತಿದ್ದೇವೆ. ಇದು ವನ್ಯಜೀವಿ ಲೋಕದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ನೈಸರ್ಗಿಕ ಆಯ್ಕೆಯ ಉಪಾಯವನ್ನೇ ಪರಾಭವಗೊಳಿಸುತ್ತಿದೆ”,

ಸೌಜನ್ಯ: deccanherald.com

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News