ಹಣ ಜನರ ಜೇಬಿಗೆ ಹಾಕಿದರೆ ಬಿಜೆಪಿಗೇಕೆ ಹೊಟ್ಟೆಉರಿ: ಸಿಎಂ ಸಿದ್ದರಾಮಯ್ಯ ಪ್ರಶ್ನೆ

Update: 2023-11-24 13:43 GMT

ಬೆಂಗಳೂರು:ಜನರು ಪಾವತಿಸುವ ತೆರಿಗೆ ಹಣ ಮತ್ತೆ ಜನರ ಜೇಬಿಗೆ ಹಾಕಿದರೆ ಬಿಜೆಪಿ ಪಕ್ಷದವರಿಗೆ ಏಕೆ ಹೊಟ್ಟೆಉರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ “ಶಕ್ತಿಯ ಶತಕೋಟಿ ಸಂಭ್ರಮ" ಸಮಾರಂಭ ಉದ್ಘಾಟಿಸಿ  ಸಿದ್ದರಾಮಯ್ಯ ಮಾತನಾಡಿದರು.

ಕೋಟಿ ಕೋಟಿ ಮನೆಗೆ ಉಚಿತ ವಿದ್ಯುತ್ ಮತ್ತು ಅಕ್ಕಿ ಹಾಗೂ ಅಕ್ಕಿಯ ಹಣವನ್ನು ಜನರ ನೀಡುತ್ತಿದ್ದೇವೆ. ಜನರ ದುಡ್ಡು ಜನರ ಜೇಬಿಗೆ ಹಾಕಿದರೆ ಬಿಜೆಪಿಯವರಿಗೆ ಯಾಕೆ ಹೊಟ್ಟೆಉರಿ, ಬಡವರ ಕೈಯಲ್ಲಿ ದುಡ್ಡು ಇರಬೇಕು ಎನ್ನುವುದು ನಮ್ಮ ಗುರಿ. ಹಣ ಇದ್ದರೆ ಆರ್ಥಿಕತೆಗೆ ಚೈತನ್ಯ ಬರುತ್ತದೆ. ಈ ಚೈತನ್ಯ ತುಂಬುವ ಕಾರ್ಯಕ್ರಮವನ್ನು ನಾವು ಘೋಷಿಸಿ, ಸಾಧಿಸಿ ತೋರಿಸಿದ್ದೀವಿ ಎಂದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಆಗುವುದಿಲ್ಲ. ಜಾರಿ ಆದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿ ನಾಯಕರು ಆಡಿಕೊಂಡಿದ್ದರು. ಈಗ ನಾಡು ಶತಕೋಟಿ ಸಂಭ್ರಮ ಆಚರಿಸುತ್ತಿದೆ. ಅಲ್ಲದೆ, ದೇಶದ ಯಾವ ಸರಕಾರಗಳೂ ಹಿಂದೆಂದೂ ಮಾಡದ ಸಾಧನೆಯನ್ನು ನಮ್ಮ ಸರಕಾರ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಸಾಧಿಸಿ ತೋರಿಸಿದೆ. ಈಗಲಾದರೂ ಬಿಜೆಪಿಯವರು ನಿರ್ಲಜ್ಜವಾಗಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಟೀಕಿಸಿದರು.

ಜೂನ್ 11 ಕ್ಕೆ ಶಕ್ತಿ ಯೋಜನೆ ಜಾರಿಗೊಳಿಸಲಾಯಿತು. ಅಂದಿನಿಂದ ನ.23ಕ್ಕೆ 100 ಕೋಟಿ 47 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ದಾಖಲೆಗಳು ಕಣ್ಣ ಮುಂದಿದೆ. ಆದರೂ ಈ ಬಿಜೆಪಿ ನಾಯಕರು ಯಾಕಿಷ್ಟು ಸುಳ್ಳು ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು, ಬಸ್ ಪ್ರಯಾಣಿಕರಲ್ಲಿ ಶೇ.55 ರಷ್ಟು ಉಚಿತ ಬಸ್ ಪ್ರಯಾಣ ಮಾಡಿದ ಮಹಿಳೆಯರೇ ಸೇರಿದ್ದಾರೆ. ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುವುದು ನಮ್ಮ ಗುರಿ. ವಿರೋಧ ಪಕ್ಷದವರ ಹೊಟ್ಟೆಕಿಚ್ಚಿನ ಟೀಕೆಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

1 ಕೋಟಿ 17 ಲಕ್ಷ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಂಡು ಇವರಲ್ಲಿ 1 ಕೋಟಿ 10 ಲಕ್ಷ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ತಲುಪುತ್ತಿದೆ. ಎಲ್ಲಾ ಜಾತಿ-ಧರ್ಮದ ಬಡವರು ಮಧ್ಯಮ ವರ್ಗದವರ ಮಹಿಳೆಯರಿಗೆ ಈ ಸೌಲಭ್ಯ ತಲುಪುತ್ತಿದೆ. ಇದು ಬಿಜೆಪಿಯವರ ಹೊಟ್ಟಿಕಿಚ್ಚಿಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News