ಬೆಂಗಾವಲು ಸಿಬ್ಬಂದಿಯಿಂದ ಶೂ ಹಾಕಿಸಿಕೊಂಡಿದ್ದಕ್ಕೆ ಸ್ಪಷ್ಟನೆ ನೀಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ
ಮೈಸೂರು,ನ.8: ''ಧಾರವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಗಾವಲು ಸಿಬ್ಬಂದಿ ಶೂ ಹಾಕಿದ್ದಾರೆಂಬ ಸಂಗತಿಯು ವಿವಾದದ ಸ್ವರೂಪ ಪಡೆದಿರುವುದು ದುರದೃಷ್ಟಕರ ಬೆಳವಣಿಗೆ'' ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬುಧವಾರ ಮಾಧ್ಯಮ ಪ್ರಕಟನೆ ನೀಡಿರುವ ಅವರು, ವೈಯಕ್ತಿಕವಾಗಿ ವ್ಯಕ್ತಿ ಗೌರವ ಮತ್ತು ಘನತೆಯಲ್ಲಿ ನಂಬಿಕೆ ಇಟ್ಟಿರುವ ನನಗೆ ಒಬ್ಬರಿಂದ ಶೂ ಹಾಕಿಸಿಕೊಳ್ಳಬೇಕೆಂಬ ದರ್ಪದ ಇರಾದೆ ಇಲ್ಲ. ಆದರೆ ಹಿಂದೆ ಕಾಲು ನೋವಿನ ತೊಂದರೆಗೆ ಸಿಲುಕಿ ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಿಂದ ಬಾಗುವುದು ಕಷ್ಟವಾಗಿದ್ದ ಕಾರಣ ನಮ್ಮ ಆತ್ಮೀಯ ವಲಯದಿಂದ ಸಹಾಯ ಪಡೆದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಬಹು ವರ್ಷಗಳ ಕಾಲ ನನ್ನೊಡನೆಯೇ ಒಂದು ಕುಟುಂಬದಂತೆ ಇರುವ ನಮ್ಮ ಕೆಲ ಸಿಬ್ಬಂದಿಗಳ ಬಳಿ ಕಾಲಿನ ಸಮಸ್ಯೆಯ ಹಿನ್ನಲೆಯಲ್ಲಿ ಪಡೆದುಕೊಂಡಿರುವ ಈ ಸಹಾಯಕ್ಕೆ ಮಾನವೀಯ ನೆಲೆ ಇದ್ದು ಅನಗತ್ಯವಾಗಿ ಇದಕ್ಕೆ ಅಂಹಕಾರ, ಅಧಿಕಾರದ ಅಮಲು ಎಂಬ ಶಬ್ದಗಳನ್ನು ಬಳಸುವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
''ಇನ್ನು ನನ್ನನ್ನು ಬಲ್ಲ ಎಲ್ಲರಿಗೂ ವ್ಯಕ್ತಿ ಗೌರವಕ್ಕೆ ಸಂಬಂಧಿಸಿದ ನನ್ನ ನಿಲುವುಗಳ ಬಗ್ಗೆ ಚೆನ್ನಾಗಿಯೇ ತಿಳಿದಿರುವ ಕಾರಣ ಈ ಬಗ್ಗೆ ಸ್ವಯಂ ವಿವರಣೆ ಕೊಡುವುದಾಗಲೀ ಇಲ್ಲವೇ ಸ್ವ ಮರುಕ ಪಡುವುದಾಗಲೀ ನಾನು ಮಾಡುವುದಿಲ್ಲ. ಮೂಲತಃ ಸಂವಿಧಾನದ ಆಶಯಗಳ ಪ್ರಕಾರವೇ ಬದುಕುವ ನನಗೆ ಸಮಾನತೆ, ವ್ಯಕ್ತಿ ಗೌರವ, ಪ್ರೀತಿ ವಿಶ್ವಾಸ ಹೊರತು ಪಡಿಸಿ ಇತರೆ ಸಂಗತಿಗಳಲ್ಲಿ ಆಸಕ್ತಿ ಇಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ದೈಹಿಕ ತೊಂದರೆಗಾಗಿ ಪಡೆದ ಸಹಾಯವನ್ನು ಸಂಕುಚಿತ ಮನಸ್ಸಿನಿಂದ ನೋಡಬಾರದೆಂದು ನಮ್ಮ ಮಾಧ್ಯಮ ಮಿತ್ರರಲ್ಲಿ ನಾನು ಮನವಿ ಮಾಡುತ್ತೇನೆ. ಇನ್ನು ಅಗತ್ಯ ಸಹಾಯಕ್ಕಾಗಿ ನನ್ನ ಅಂಗರಕ್ಷಕನಿಗೆ ನನ್ನ ಧನ್ಯವಾದಗಳು ಎಂದು ಸಚಿವರು ತಿಳಿಸಿದ್ದಾರೆ.