ಮಂಡ್ಯ | ‘ಜೈ ಶ್ರೀರಾಮ್ʼ ಕೂಗುವಂತೆ ಮುಸ್ಲಿಂ ಯುವಕರಿಗೆ ಬೆದರಿಕೆ ; ಸ್ವಯಂಪ್ರೇರಿತ ಪ್ರಕರಣ ದಾಖಲು
ಮಂಡ್ಯ : ರವಿವಾರ ಶ್ರೀರಂಗಪಟ್ಟಣದಲ್ಲಿ ಹನುಮ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಂಕೀರ್ತನಾ ಯಾತ್ರೆಗೆ ತೆರಳುತ್ತಿದ್ದ ಸಂಘಪರಿವಾರದ ಕೆಲವು ಕಾರ್ಯಕರ್ತರು, ಮಾರ್ಗಮಧ್ಯೆ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಯುವಕರನ್ನು ಅಡ್ಡಗಟ್ಟಿ ‘ಜೈ ಶ್ರೀರಾಮ್’ ಕೂಗುವಂತೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಮಂಡ್ಯ ತಾಲೂಕಿನ ಬೆಂಗಳೂರು ಮೈಸೂರು ಹೆದ್ದಾರಿಯ ಸುಂಡಹಳ್ಳಿ ಸಮೀಪ ಈ ಘಟನೆ ನಡೆದಿದೆ. ಹೆದ್ದಾರಿಯ ಅಂಡರ್ ಪಾಸ್ ಸರ್ವೀಸ್ ರಸ್ತೆಯ ಬಳಿ ಬೈಕ್‍ನಲ್ಲಿ ತೆರಳುತ್ತಿದ್ದ ಮೂವರು ಮುಸ್ಲಿಂ ಯುವಕರನ್ನು ಸಂಕೀರ್ತನಾ ಯಾತ್ರೆಗೆ ಹೋಗುತ್ತಿದ್ದ ಸಂಘಪರಿವಾರದ ಕಾರ್ಯಕರ್ತರು ಸುತ್ತುವರಿದು ‘ಜೈ ಶ್ರೀರಾಮ್’ ಕೂಗುವಂತೆ ಒತ್ತಾಯಿಸುತ್ತಿರುವುದು ವೈರಲ್ ವಿಡಿಯೋದಲ್ಲಿ ಇದೆ.
ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಬಿಎನ್‍ಎಸ್ ಅಡಿಯಲ್ಲಿ 189(2), 126(2), 196, 352, ರೆ.ವಿ. 190 ಪ್ರಕರಣ ದಾಖಲಾಗಿದೆ. 8-10 ಅಪರಿಚಿತರು ಕೃತ್ಯ ಎಸಗಿದ್ದಾಗಿ ಎಫ್‍ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.