ಕನ್ನಡ ಸಮ್ಮೇಳನಕ್ಕೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೆ ಚಲುವರಾಯಸ್ವಾಮಿ ಸೂಚನೆ

Update: 2024-12-16 17:25 GMT

ಮಂಡ್ಯ : 30 ವರ್ಷಗಳ ನಂತರ ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ಜನರು ಭಾಗವಹಿಸಲಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಚಲುವರಾಯಸ್ವಾಮಿ ಸೂಚಿಸಿದ್ದಾರೆ.

ಜಿಪಂ ಸಭಾಂಗಣದಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಪೊಲೀಸ್ ಬಂದೋಬಸ್ತ್ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಆಗಮಿಸುವವರಿಗೆ ಸಂಚಾರ ಮಾರ್ಗದ ಫಲಕಗಳು ಹಾಗೂ ಆಗಮನ, ನಿರ್ಗಮನದ ಸ್ಥಳಗಳ ಕುರಿತ ಸೂಚನಾ ಫಲಕಗಳನ್ನು ಹೆದ್ದಾರಿಗಳಲ್ಲಿ ಹಾಕಬೇಕು. ಜನದಟ್ಟಣೆ ಹೆಚ್ಚಾಗಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, 6 ಎಎಸ್‍ಪಿ, 21 ಡಿವೈಎಸ್‍ಪಿ, 63 ಸಿಪಿಐ, 170 ಪಿಎಸ್‍ಐ, 262 ಎಎಸ್‍ಐ, 1,500 ಪೇದೆಗಳು, 1,000 ಹೋಂ ಗಾರ್ಡ್, 165 ಮಹಿಳಾ ಕಾನ್‍ಸ್ಟೇಬಲ್ ಒಳಗೊಂಡಂತೆ 14 ಜಿಲ್ಲೆಗಳಿಂದ 3,200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಆಗಮಿಸಲಿದ್ದಾರೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಪಾಳಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಎಂದು ಮಾಹಿತಿ ನೀಡಿದರು.

ಸಂಚಾರ ನಿರ್ವಹಣೆ, ಪಾರ್ಕಿಂಗ್, ಊಟದ ಕೌಂಟರ್, ವೇದಿಕೆ ಹೀಗೆ ಎಲ್ಲಾ ಕಡೆ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು ಹಗಲು ಮತ್ತು ರಾತ್ರಿ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿ ನಿರತರಾಗಿರಲಿದ್ದಾರೆ. ಸಿಸಿಟಿವಿ ನಿಗಾ ವ್ಯವಸ್ಥೆ ಮಾಡಲಾಗಿದೆ. ಅಪರಾಧ ಹಾಗೂ ಕಳ್ಳತನ ತಡೆಯಲು ಅಪರಾಧಿ ಪತ್ತೆದಳ ಹಾಗೂ ಮಫ್ತಿಯಲ್ಲಿ ಪೊಲೀಸರು ಗಸ್ತು ತಿರುಗಲಿದ್ದಾರೆ. 10ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪ್ರತಿ ಅರ್ಧ ಗಂಟೆಗೆ ಒಂದರಂತೆ ವಿಶೇಷ ‘ಸಾಹಿತ್ಯ ಸಾರಿಗೆ ಬಸ್’ಗಳು ಸಂಚರಿಸಲಿವೆ. ಪ್ರತಿ ತಾಲೂಕಿಗೆ 15 ಬಸ್‍ಗಳಂತೆ 105 ಬಸ್‍ಗಳು ಸಂಚರಿಸಲಿವೆ. ನಗರದಿಂದ 15 ಬಸ್‍ಗಳು ಉಚಿತವಾಗಿ ಸಂಚರಿಸಲಿವೆ. ನೋಂದಣಿ ಕೇಂದ್ರದ ಸಮೀಪ ಆರೋಗ್ಯ ಕೇಂದ್ರ ತೆರೆಯಲಾಗುತ್ತಿದ್ದು, ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕರಾದ ರವಿಕುಮಾರ್ ಗಣಿಗ, ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಡಿಐಜಿಪಿ ಡಾ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News