ಮಂಡ್ಯ | ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ : ಲಕ್ಷಾಂತರ ರೂ. ಮೌಲ್ಯದ ಯಂತ್ರ, ಮದ್ಯ ವಶ

Update: 2024-12-16 13:39 GMT

ಮಂಡ್ಯ : ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಲಕ್ಷಾಂತರ ರೂ. ಮೌಲ್ಯದ ನಕಲಿ ಮದ್ಯ ತಯಾರಿಕಾ ಯಂತ್ರಗಳು ಹಾಗೂ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮಂಡ್ಯ ಉಪ ವಿಭಾಗದ ಅಬಕಾರಿ ಇಲಾಖೆಯ ಅಬಕಾರಿ ಉಪನಿರೀಕ್ಷಕಿ ವನಿತಾ ಅವರ ನೇತೃತ್ವದ ತಂಡ ಈ ದಾಳಿ ನಡೆಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ, ಪ್ರಮುಖ ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ.

ನಗರದ ಬೆಂಗಳೂರು ಮೈಸೂರು ಹೆದ್ದಾರಿಯ ರೈಲ್ವೆ ನಿಲ್ದಾಣದ ಎದುರಿನ ಕಾಮಧೇನು ಬಾರ್ ಅಂಡ್ ರೆಸ್ಟೋರೆಂಟ್(ಸಿಎಲ್7)ಗೆ ಹೊಂದಿಕೊಂಡಿರುವ ಕಾಮಧೇನು ಕಂಫರ್ಟ್ಸ್ ನ ಕೊಠಡಿಯೊಂದರಲ್ಲಿ ಈ ನಕಲಿ ಮದ್ಯ ತಯಾರಿಕಾ ಕೇಂದ್ರ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಸುಮಾರು 10ರಿಂದ 15 ಲಕ್ಷ ರೂ. ಬೆಲೆ ಬಾಳುವ ಸಾಚೆಟ್ ಮಿಷನ್, ಸಿಲ್ವರ್ ಕಪ್ ಮದ್ಯ ತಯಾರಿಕೆಯ 40 ಸಾವಿರ ರೂ. ಮೌಲ್ಯದ ಸ್ಪಿರಿಟ್ ತುಂಬಿದ ಕ್ಯಾನ್‌ಗಳು(ಇದರಿಂದ ಲಕ್ಷಾಂತರ ರೂ. ಮೌಲ್ಯದ ನಕಲಿ ಮದ್ಯ ತಯಾರಿಸಬಹುದು), ಕಾರ್ಕ್ ಮಿಷನ್ ಸೇರಿದಂತೆ ನಕಲಿ ಮದ್ಯ ತಯಾರಿಕೆಯ ಎಲ್ಲ ಪರಿಕರಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ವಿಚಕ್ಷಣ ದಳದ ಅಬಕಾರಿ ಇನ್ಸ್ಪೆಕ್ಟರ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.

ನಕಲಿ ಮದ್ಯವನ್ನು ಯಾವ ಕಡೆಯಲೆಲ್ಲಾ ಸರಬರಾಜು ಮಾಡಲಾಗಿದೆ ಮತ್ತು ನಕಲಿ ಮದ್ಯ ತಯಾರಿಸುವ ಯಂತ್ರಗಳು ಎಲ್ಲಿಂದ ದೊರೆತಿವೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಸನ್ನದುದಾರ ನಾಗರಾಜುವನ್ನು ಬಂಧಿಸಿದ್ದು, ಪರಾರಿಯಾಗಿರುವ ಪ್ರಮುಖ ಆರೋಪಿ ರಮೇಶ್ ಬಂಧನಕ್ಕೆ ಕ್ರಮವಹಿಸಲಾಗಿದೆ ಎಂದು ಅವರು ಹೇಳಿದರು.

ಮಂಡ್ಯ ಉಪ ವಿಭಾಗದ ಅಬಕಾರಿ ಇಲಾಖೆ ಉಪ ಅಧೀಕ್ಷಕರು ಹಾಗೂ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ವಿಚಕ್ಷಣ ದಳದ ಅಬಕಾರಿ ಇನ್ಸ್ಪೆಕ್ಟರ್ ಕುಮಾರ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಜತೆ ಈ ದಾಳಿ ನಡೆಸಲಾಯಿತು ಎಂದು ಮಂಡ್ಯ ಉಪ ವಿಭಾಗದ ಅಬಕಾರಿ ಇಲಾಖೆ ಉಪನಿರೀಕ್ಷಕಿ ವನಿತಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News