ಸೋಮನಹಳ್ಳಿಯಲ್ಲಿ ಎಸ್.ಎಂ.ಕೃಷ್ಣ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ; ಡಿ.ಕೆ.ಶಿವಕುಮಾರ್, ಚಲುವರಾಯಸ್ವಾಮಿ ಸ್ಥಳ ಪರಿಶೀಲನೆ

Update: 2024-12-10 15:59 GMT

ಮಂಡ್ಯ: ಅಗಲಿದ ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರ ಅಂತ್ಯಸಂಸ್ಕಾರ ಡಿ.11(ಬುಧವಾರ) ಮಧ್ಯಾಹ್ನ 3 ಗಂಟೆಗೆ ಅವರ ಹುಟ್ಟೂರು ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ನಡೆಯಲಿದೆ.

ಸೋಮನಹಳ್ಳಿಯ ‘ಕಾಫಿ ಡೇ’ ಆವರಣದ ಎಸ್.ಎಂ.ಕೃಷ್ಣ ಅವರಿಗೆ ಸೇರಿದ ಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಜಿಲ್ಲಾಡಳಿತ ಸಿದ್ದತೆ ಕೈಗೊಂಡಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸ್ಥಳೀಯ ಶಾಸಕ ಕೆ.ಎಂ.ಉದಯ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿ.ಕೆ.ಶಿವಕುಮಾರ್, ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಕೃಷ್ಣ ಅವರ ಪಾರ್ಥೀವ ಶರೀರ ಸೋಮನಹಳ್ಳಿಗೆ ಆಗಮಿಸಲಿದೆ. ಮಧ್ಯಾಹ್ನ 3 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ನಂತರ ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದರು.

ಬೆಂಗಳೂರಿನಿಂದ ಸೋಮನಹಳ್ಳಿ ಮಾರ್ಗಮಧ್ಯೆ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣದಲ್ಲಿ ಸ್ವಲ್ಪ ಸಮಯ ವಾಹನ ನಿಲ್ಲಿಸಿ ಸ್ಥಳೀಯ ಜನರಿಗೆ ಪಾರ್ಥೀವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯವನ್ನು ವಿವಿಧ ಆಯಾಮದಲ್ಲಿ ಅಭಿವೃದ್ಧಿಗೊಳಿಸಿದ ಎಸ್.ಎಂ.ಕೃಷ್ಣ ಅವರು ಆಧುನಿಕ ಕರ್ನಾಟಕದ ಮಹಾಶಿಲ್ಪಿಯಾಗಿದ್ದು, ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಧೀಮಂತ ಹಿರಿಯ ನಾಯಕನನ್ನು ಇಂದು ನಾವು ಕಳೆದುಕೊಂಡಿದ್ದೇವೆ ಎಂದು ಅವರು ಕಂಬನಿ ಮಿಡಿದರು.

ರಾಜ್ಯದ ಮಕ್ಕಳ ಬಿಸಿಯೂಟದ ಕಾರ್ಯಕ್ರಮದಿಂದ ಹಿಡಿದು ಮಹಿಳೆಯರ ಸಬಲೀಕರಣಕ್ಕಾಗಿ ಸ್ತ್ರೀಶಕ್ತಿ ಸಂಘ ತಂದವರು. ರೈತರ ಜೀವನದಲ್ಲಿ ಬದಲಾವಣೆ ತರಲು ಅಂದಿನ ಕಾಲದಲ್ಲಿ ರೈತರಿಗೆ ಕೇವಲ 5 ರೂ.ಗೆ ಭೂಮಿ ಪಹಣಿ ಯೋಜನೆಯ ಬಾಂಡ್ ನೀಡಿದರು. ರೈತರು ಶ್ರೀಗಂಧ ಬೆಳೆಯಲು ಅವಕಾಶ ನೀಡಿದರು. ಕಾವೇರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಕಾವೇರಿ ಜಲಾನಯನ ಪ್ರದೇಶಕ್ಕೆ ಹೊಸ ರೂಪ ತಂದವರು ಎಂದು ಅವರು ಸ್ಮರಿಸಿದರು.

ಉದ್ಯೋಗ ಸೌಧ, ವಿಕಾಸಸೌಧ ನಿರ್ಮಾಣ, ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ (ಏರ್ಫೋರ್ಟ್) ನಿರ್ಮಾಣ, ಮೆಟ್ರೋ ಪ್ರಾರಂಭ, ಐಟಿ ಬಿಟಿಗೆ ಸಂಸ್ಥೆಗೆ ಹೊಸ ರೂಪ ಕೊಟ್ಟು ಬೆಂಗಳೂರನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವುದರ ಜೊತೆಗೆ ವಿಶ್ವ ದರ್ಜೆಗೆ ತೆಗೆದುಕೊಂಡು ಹೋಗಲು ಸಹಕರಿಸಿದವರು. ಎಲ್ಲ ಜನಾಂಗಕ್ಕೆ ಒಂದು ಬದುಕನ್ನು ಕಟ್ಟಿಕೊಟ್ಟಂತಹವರು ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಎಸ್.ಎಂ.ಕೃಷ್ಣ ಅವರ ಅಗಲಿಕೆ ನಮಗೆ ಬಹಳ ನೋವು ತಂದಿದ್ದು, ನಾಡಿಗೆ ತುಂಬಲಾಗದ ನಷ್ಟವಾಗಿದೆ. ಯಾವುದೇ ಒಂದು ಸೀಮಿತ ಕ್ಷೇತ್ರದ ಬಗ್ಗೆ ಯೋಚಿಸದೆ ಇಡೀ ನಾಡಿನ ಜನರಿಗೆ ಒಳಿತು ಮಾಡುವ ದೃಷ್ಟಿಕೋನವನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸಿದವರು ಎಂದರು.

ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News