ಎಡ ಪಕ್ಷಗಳ ಸರಕಾರದಿಂದ ಮಾತ್ರ ಜನಾಭಿವೃದ್ಧಿ: ಶೈಲಜಾ ಟೀಚರ್

Update: 2024-11-30 17:01 GMT

ಮಂಡ್ಯ : ಎಡ ಪಕ್ಷಗಳು ಅಧಿಕಾರಕ್ಕೆ ಬಂದರೆ ಮಾತ್ರ ಜನಾಭಿವೃದ್ಧಿ ಸಾಧ್ಯ ಎಂದು ಕೇರಳ ರಾಜ್ಯದ ಮಾಜಿ ಆರೋಗ್ಯ ಸಚಿವೆ ಹಾಗೂ ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯೆ ಕೆ.ಕೆ.ಶೈಲಜಾ ಟೀಚರ್ ಅಭಿಪ್ರಾಯಪಟ್ಟಿದ್ದಾರೆ.

ಮದ್ದೂರು ತಾಲ್ಲೂಕು ಕೆ.ಎಂ.ದೊಡ್ಡಿಯಲ್ಲಿ ಶನಿವಾರ ನಡೆದ 10ನೇ ಸಿಪಿಐ(ಎಂ) ಜಿಲ್ಲಾ ಸಮ್ಮೇಳನದ ನಿಮಿತ್ತ ಏರ್ಪಡಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಪಿಎಂ ಆಡಳಿತದ ಕೇರಳ ರಾಜ್ಯ ದೇಶದಲ್ಲೇ ಅಭಿವೃದ್ದಿ ವಿಚಾರದಲ್ಲಿ ನಂಬರ್ ಒನ್ ರಾಜ್ಯವಾಗಿದೆ ಎಂದರು.

ಕೇರಳದ ಸಿಪಿಎಂ ಸರಕಾರದಲ್ಲಿ ರೈತರು, ಕಾರ್ಮಿಕರು, ಬಡವರು ಎಲ್ಲ ವರ್ಗದ ಜನರಿಗೆ ಆರ್ಥಿಕ ಅಭಿವೃದ್ದಿ ಸಿಕ್ಕಿದೆ. ಆರೋಗ್ಯ, ಶಿಕ್ಷಣವನ್ನು ಎಲ್ಲರಿಗೂ ತಲುಪಿಸಲು ಸಾಧ್ಯವಾಗಿದೆ. ಕುಟುಂಬ ಸ್ತ್ರೀ ಯೋಜನೆಯನ್ನು ಜಾರಿಗೆ ತಂದಿದ್ದು ಸರಕಾರದ ಯೋಜನೆಗಳೆಲ್ಲವನ್ನೂ ಸ್ತ್ರೀಯರೇ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಬಂಡವಾಳಶಾಯಿ ಪರ ಆರ್ಥಿಕ ನೀತಿಯನ್ನು ಜಾರಿ ಮಾಡಿದ್ದರಿಂದ ಇಂದು ಬಡ ಭಾರತವೇ ಕಣ್ಣಿಗೆ ರಾಚುತ್ತಿದೆ. ಬಡತನ, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯ, ರೈತರಿಗೆ ಅವೈಜ್ಞಾನಿಕ ಬೆಲೆ, ಜಾತಿ ವ್ಯವಸ್ಥೆ, ಕಂದಾಚಾರ, ಮೌಢ್ಯಗಳು ಮುಂದುವರೆಯುತ್ತಿದೆ. ಇದನ್ನೇ ಬಿಜೆಪಿ ಸರಕಾರ ತೀವ್ರವಾಗಿ ಮುಂದುವರೆಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಬಡತನಕ್ಕೆ ದೇವರು ಕಾರಣವಲ್ಲ. ಸಮಾಜದಲ್ಲಿನ ವರ್ಗ ವಿಭಜನೆಯೇ ಬಡತನಕ್ಕೆ ಮೂಲ ಕಾರಣ. ಶೋಷಣೆಗೆ ಒಳಗಾಗುವವರೆಲ್ಲ ಬಡವರಾಗಿಯೇ ಉಳಿಯುತ್ತಾರೆ ಎಂಬುದನ್ನು ಕಾರ್ಲ್ಮಾಕ್ರ್ಸ್ ಅರಿವು ಮಾಡಿಕೊಟ್ಟರು. ಇಂದಿಗೂ ಕೂಡ ಶೋಷಿಸುವವರು ಶ್ರೀಮಂತರಾಗಿದ್ದು, ಶೋಷಣೆಗೊಳಗಾದವರು, ದಮನಿತರು ಬಡವರಾಗಿಯೇ ಇದ್ದಾರೆ ಎಂದು ಅವರು ವಿಷಾದಿಸಿದರು.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಗಳಾದ ಸೈಯದ್ ಮುಜೀದ್, ಮೀನಾಕ್ಷಿ ಸುಂದರಂ, ಸಮಿತಿ ಸದಸ್ಯರಾದ ಎಂ.ಪುಟ್ಟಮಾದು, ದೇವಿ, ಕೆ.ಪುಟ್ಟಮಾದು, ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಸಿ.ಕುಮಾರಿ, ಟಿ.ಯಶವಂತ್, ಎನ್.ಎಲ್.ಭರತ್ರಾಜ್ ಟಿ.ಬಿ.ಶೋಭಾ, ಬಿ.ಹನುಮೇಶ್, ಅನಿತಾ, ಬಿ.ಎಂ.ಶಿವಮಲವಯ್ಯ, ಜಿ.ರಾಮಲಿಂಗಯ್ಯ, ಕೆ.ಬಸವರಾಜು, ಸುಶೀಲ, ತಿಮ್ಮೇಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಡೆದ ಬೃಹತ್ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News