ಚುನಾವಣೆಗಾಗಿ ಎಚ್.ಡಿ. ಕುಮಾರಸ್ವಾಮಿ ಕೋಟ್ಯಂತರ ಹಣ ಸಂಗ್ರಹಣೆ ಮಾಡಿದ್ದಾರೆ: ಸಚಿವ ಚಲುವರಾಯಸ್ವಾಮಿ ಆರೋಪ
ಮಂಡ್ಯ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ಮಹಾರಾಷ್ಟ್ರದ ಚುನಾವಣೆಗಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಲವಾರು ಕಂಪನಿಗಳಿಂದ ಕೋಟಿಗಟ್ಟಲೆ ಹಣ ಸಂಗ್ರಹಣೆ ಮಾಡಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ನಾವು ಅವರ ಜತೆ ಸ್ಪರ್ಧೆ ಮಾಡಲು ಆಗಲಿಲ್ಲ. ಆದರೆ, ಹಣದಿಂದಲೇ ಗೆಲ್ಲಲು ಸಾಧ್ಯವಿಲ್ಲ. ನಮ್ಮ ಜನಪರ ಕಾರ್ಯಕ್ರಮಗಳಿಗೆ ಜನ ಆಶೀರ್ವಾದ ಮಾಡಲಿದ್ದಾರೆ ಎಂದರು.
ಬಿಜೆಪಿಗೆ ಆಪರೇಷನ್ ಕಮಲ ಹೊಸದೇನು ಅಲ್ಲ. ಪ್ರಸ್ತುತ ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಆ ಯತ್ನ ನಡೆಸಲಾಗುತ್ತಿದೆ. ಸರಕಾರ ಬಿದ್ದುಹೋಗುತ್ತದೆ ಎಂಬುದಾಗಿ ಕುಮಾರಸ್ವಾಮಿ, ಬಿಜೆಪಿ ನಾಯಕರು ದಿನಾ ಹೇಳುತ್ತಲೇ ಇದ್ದಾರೆ. ಆಪರೇಷನ್ ಕಮಲ ಯತ್ನ ನಡೆಸಲಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಎಂದು ಅವರು ತಿರುಗೇಟು ನೀಡಿದರು.
ಹಣವಿಲ್ಲದೆ ಆಪರೇಷನ್ ಕಮಲ ನಡೆಯುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ನಮ್ಮ ಶಾಸಕರಿಗೆ ಹಣದ ಆಮಿಷ ತೋರಿದ್ದಾರೆ. ಆದರೆ, ನಮ್ಮ ಶಾಸಕರು ಅದಕ್ಕೆ ಸೊಪ್ಪು ಹಾಕಿಲ್ಲ. ಎಷ್ಟು ಹಣ? ಯಾವ ಶಾಸಕರಿಗೆ ಆಮಿಷ ಒಡ್ಡಿದ್ದಾರೆ ಎಂಬುದನ್ನು ಕಾಲಬಂದಾಗ ಸಾಬೀತುಪಡಿಸುತ್ತೇವೆ. ಮೊದಲು ನಮ್ಮ ಮೇಲೆ ಅವರು ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲಿ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಮ್ಮ ಸರಕಾರದಲ್ಲಿ ಯಾವುದೇ ಹಗರಣ ನಡೆದಿಲ್ಲ. ಎಲ್ಲವೂ ಆಧಾರ ಇಲ್ಲದ ಆರೋಪಗಳು. ಆ ಬಗ್ಗೆ ತನಿಖೆ ಆಗುತ್ತಿದೆ. ಅವರ ಆರೋಪಗಳನ್ನು ಮೊದಲು ಸಾಬೀತುಪಡಿಸಲು ಹೇಳಿ. ಹಗರಣದಿಂದ ಸರಕಾರದಿಂದ ಬಿದ್ದುಹೋಗುತ್ತದೆ ಎಂಬುದು ಬರೀ ಭ್ರಮೆ ಎಂದು ಅವರು ಹೇಳಿದರು.