ಹೆಚ್ಚಿನ ಸಾರ್ವಜನಿಕರ ಆಗಮನದಿಂದ ವಿಚಾರಗೋಷ್ಠಿಗಳು ಸಂಪನ್ನ
ಮಂಡ್ಯ : ನಿರೀಕ್ಷೆಗೂ ಮೀರಿ ಜನರ ಭಾಗವಹಿಸುವಿಕೆಯೊಂದಿಗೆ ಶುಕ್ರವಾರ ಆರಂಭವಾದ ಮೂರುದಿನಗಳ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎರಡನೇ ದಿನವಾದ ಶನಿವಾರವೂ ಉತ್ತಮ ಸ್ಪಂದನೆ ದೊರೆಯಿತು. ಸಾವಿರಾರು ಮಂದಿ ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಸಾರ್ವಜನಿಕರು ಭಾಗವಹಿಸಿದ್ದರು.
ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಿಗೆ ಜನರು ಬರುವುದಿಲ್ಲ ಎಂಬ ಅಪವಾದ ಇದೆ. ಅದು ನಿಜವೂ ಹೌದು. ಆದರೆ, ಮಂಡ್ಯದ ಸಮ್ಮೇಳನ ಅದಕ್ಕೆ ಅಪವಾದವಾಯಿತು. ಸಮ್ಮೇಳನದ ಎರಡನೇ ದಿನದಲ್ಲಿ ನಡೆದ ಹಲವು ಗೋಷ್ಠಿಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗೋಷ್ಠಿಯನ್ನು ಸಂಪನ್ನಗೊಳಿಸಿದರು.
ಸಮ್ಮೇಳನದ ಮುಖ್ಯ ವೇದಿಕೆ ಸೇರಿದಂತೆ ಎರಡು ಸಮನಾಂತರ ವೇದಿಕೆಗಳಲ್ಲಿ ಹಲವು ವಿಷಯಗಳನ್ನೊಳಗೊಂಡ ಹತ್ತಾರು ಗೋಷ್ಠಿಗಳು ಶನಿವಾರ ಜರುಗಿದವು. ಈ ಎಲ್ಲ ಗೋಷ್ಠಿಗಳಲ್ಲಿ ಜನರು ಭಾಗವಹಿಸಿದ್ದು, ಸಮ್ಮೇಳನ ಆಯೋಕರನ್ನು ಸಾರ್ಥಕಗೊಳಿಸಿತು. ಬಹುತೇಕ ಎಲ್ಲ ಖುರ್ಚಿಗಳು ಪ್ರೇಕ್ಷಕರಿಂದ ಭರ್ತಿಯಾಗಿದ್ದವು.
ಪ್ರಧಾನ ವೇದಿಕೆಯಲ್ಲಿ ನೆಲ-ಜಲ-ಸಾಕ್ಷರತೆ :
ಅವಲೋಕನ, ಸಾಹಿತ್ಯದಲ್ಲಿ ರಾಜಕೀಯ : ರಾಜಕೀಯದಲ್ಲಿ ಸಾಹಿತ್ಯ, ಕನ್ನಡವೆಂದರೆ ಬರೀ ನುಡಿಯಲ್ಲ, ಮಂಡ್ಯ ನೆಲಮೂಲದ ಮೊದಲುಗಳು ಹಾಗೂ ಕರ್ನಾಟಕ ಮೌಖಿಕ ಪರಂಪರೆಗಳ ಪ್ರದರ್ಶನ ಮತ್ತು ವಿವರಣೆ ಕುರಿತಂತೆ ಐದು ಗೋಷ್ಠಿಗಳು ಆಯೋಜನೆಗೊಂಡಿದ್ದವು. ಈ ಐದೂ ಗೋಷ್ಠಿಗಳಿಗೆ ಉತ್ತಮ ಸ್ಪಂದನೆ ದೊರೆಯಿತು.
ಇನ್ನು ಎರಡು ಸಮಾನಾಂತರ ವೇದಿಕೆಗಳಲ್ಲಿ ಶತಮಾನೋತ್ಸವ ವರ್ಷದ ಕನ್ನಡ ಲೇಖಕರು, ಕರ್ನಾಟಕ- ಪ್ರಕೃತಿ ವಿಕೋಪದ ಆತಂಕಗಳು, ಕನ್ನಡ ದಲಿತ ಸಾಹಿತ್ಯದ ನೆಲೆಗಳು, ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಸಾಹಿತ್ಯದ ಪಾತ್ರ ವಿಷಯ ಕುರಿತು ನಡೆದ ಗೋಷ್ಠಿಗಳಲ್ಲೂ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡರು.