ಮಂಡ್ಯ: ಸಕ್ಕರೆ ನಾಡಿನ ಕನ್ನಡ ನುಡಿ ಜಾತ್ರೆಗೆ ಹರಿದು ಬಂದ ಜನಸಾಗರ

ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಶುಕ್ರವಾರ ಆರಂಭಗೊಂಡ ಮೂರು ದಿನಗಳ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜನಸಾಗರವೇ ಹರಿದುಬಂದಿತು. ಪ್ರತಿ ಹಳ್ಳಿಗಳಿಗೆ ಉಚಿತವಾಗಿ ಬಸ್ ಸೌಲಭ್ಯ ಒದಗಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಾಹಿತ್ಯ ಜಾತ್ರೆಗೆ ಆಗಮಿಸಿದ್ದರು.
ನೋಂದಣಿ ಮಾಡಿಕೊಂಡಿದ್ದ ಆರು ಸಾವಿರ ಪ್ರತಿನಿಧಿಗಳ ಜತೆಗೆ, ರಾಜ್ಯದ ಮೂಲೆ ಮೂಲೆಯಿಂದ ರೈಲು, ಬಸ್ಸು, ಕಾರುಗಳಲ್ಲಿ ಸಹಸ್ರಾರು ಸಾಹಿತ್ಯಾಸಕ್ತರು ನುಡಿ ಹಬ್ಬಕ್ಕೆ ಆಗಮಿಸಿ ಸಂಭ್ರಮಿಸಿದರು. ಜಿಲ್ಲೆಯ ನಗರ, ಪಟ್ಟಣ, ಹಳ್ಳಿಗಳಿಂದ ದ್ವಿಚಕ್ರವಾಹನಗಳಲ್ಲಿ ಮಕ್ಕಳ ಸಮೇತ ನೂರಾರು ದಂಪತಿಗಳು ಆಗಮಿಸಿದ್ದು ಕಂಡು ಬಂತು. ವಿಕಲಚೇತನರು ತಮ್ಮ ಮೂರು ಚಕ್ರದ ಸ್ಕೂಟರ್‍ನಲ್ಲಿ ಮಕ್ಕಳು ಹೆಂಡತಿ ಸಮೇತ ಆಗಮಿಸಿ ಸಮ್ಮೇಳನದ ಸೊಬಗು ಸವಿದರು.
ಸೂಕ್ತ ಮುನ್ನೆಚ್ಚರಿಕೆ ಕ್ರಮವಹಿಸಿದ್ದರೂ ಸಮ್ಮೇಳನದ ವೇದಿಕೆ ಎದುರಿನ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಜನರನ್ನು ನಿಯಂತ್ರಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಲ್ಲಿ ಪೊಲೀಸರು ಹರಸಾಹಸಪಟ್ಟರು. ಮುನ್ನೂರಕ್ಕೂ ಹೆಚ್ಚು ಕೌಂಟರ್‍ಗಳ ಮೂಲಕ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಶುದ್ದ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು.
ಸಮ್ಮೇಳನದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಪುಸ್ತಕ ಪ್ರದರ್ಶನ ಮಾರಾಟಕ್ಕೆ ಮೊದಲ ದಿನವೇ ಉತ್ತಮ ಸ್ಪಂದನೆ ದೊರೆಯಿತು. ವ್ಯವಸ್ಥಿತವಾಗಿ ನಿರ್ಮಿಸಿರುವ 450 ಪುಸ್ತಕ ಮಳಿಗೆಗಳಲ್ಲಿ ಹಂಪಿ ವಿವಿ, ಕನ್ನಡ ಪುಸ್ತಕ ಪ್ರಾಧಿಕಾರಿ, ಕೇಂದ್ರ ಸಾಹಿತ್ಯ ಪರಿಷತ್ತು ಸೇರಿದಂತೆ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಪುಸ್ತಕ ಪ್ರದರ್ಶನದಲ್ಲಿ ಭಾಗವಹಿಸಿವೆ. ಇದಲ್ಲದೆ, 350 ವಾಣಿಜ್ಯ ಮಳಿಗೆಗಳಲ್ಲಿ ನಾನಾ ಬಗೆಯ ವಸ್ತುಗಳು, ಆಹಾರ ಪದಾರ್ಥಗಳು ಸಾರ್ವಜನಿಕರ ಆಕರ್ಷಿಸುತ್ತಿವೆ.
ಸಮ್ಮೇಳನದ ಪ್ರವೇಶದ್ವಾರವನ್ನು ಆಕರ್ಷಕವಾಗಿ ನಿರ್ಮಿಸಿಲಾಗಿದೆ. ಆಹಾರ ಮಳಿಗೆ, ಪುಸ್ತಕ ಮಳಿಗೆ ಮತ್ತು ಕೃಷಿ, ಪಶುಸಂಗೋಪನಾ ಇಲಾಖೆ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳ ವಸ್ತುಪ್ರದರ್ಶನ ಮಳಿಗೆಗಳ ಸುತ್ತಲೂ ಪರದೆಯ ಮೇಲೆ ಚಿತ್ರಿಸಿರುವ ಮಂಡ್ಯ ಜಿಲ್ಲೆಯ ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ ಸೇರಿದಂತೆ ರಾಜ್ಯದ ಪ್ರಮುಖ ಸಾಂಸ್ಕೃತಿಕ ವಿಷಯಗಳ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿವೆ.



