ಮಂಡ್ಯ | ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈದ ಪತಿ
ಸಾಂದರ್ಭಿಕ ಚಿತ್ರ
ಮಂಡ್ಯ : ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆಯನ್ನು ಒರಳು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ನಡೆದಿರುವುದಾಗಿ ವರದಿಯಾಗಿದೆ.
ಗ್ರಾಮದ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ, ಇದೇ ತಾಲೂಕಿನ ಪಿ.ಹೊಸಹಳ್ಳಿಯ ಚಂದ್ರ ಎಂಬಾತ ತನ್ನ ಪತ್ನಿ ಸೌಮ್ಯ(27) ಅವರನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಮದ್ಯವ್ಯಸನಿಯಾಗಿದ್ದ ಚಂದ್ರ, ಹಲವು ದಿನಗಳಿಂದ ಹಣ ಕೊಡುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದು, ಇದೇ ವಿಚಾರಕ್ಕೆ ಗಲಾಟೆ ಆಗಿ ಪತ್ನಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ದಂಪತಿಗೆ 7 ವರ್ಷ ಮತ್ತು 5 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಚಂದ್ರ, ಪತ್ನಿ ಮತ್ತು ಮಕ್ಕಳ ಜತೆ ಮೂರು ವರ್ಷಗಳಿಂದ ಬಾಬುರಾಯನಕೊಪ್ಪಲಿನಲ್ಲಿ ವಾಸವಾಗಿದ್ದ. ಕೃತ್ಯ ನಡೆದಾಗ ಮಕ್ಕಳು ಸಂಬಂಧಿಕರ ಊರಿನಲ್ಲಿದ್ದರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ಶಾಂತಮಲ್ಲಪ್ಪ, ಸಿಪಿಐ ವಿ.ಎಸ್. ಪ್ರಕಾಶ್, ಭೇಟಿ ನೀಡಿ ಪರಿಶೀಲಿಸಿದರು.
ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.