ಮಂಡ್ಯ | ಪತ್ನಿ, ಅತ್ತೆಯ ಮೇಲೆ ವ್ಯಕ್ತಿಯಿಂದ ಹಲ್ಲೆ; ಪ್ರಕರಣ ದಾಖಲು

ಮಂಡ್ಯ: ತನ್ನ ಪತ್ನಿ ಹಾಗೂ ಅತ್ತೆಯ ಮೇಲೆ ಪತಿ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಶ್ರೀರಂಗಪಟ್ಟಣ ತಾಲೂಕು ಪಾಲಹಳ್ಳಿ ಗ್ರಾಮದಲ್ಲಿ ರವಿವಾರ ನಡೆದಿರುವುದು ವರದಿಯಾಗಿದೆ.
ಶ್ರೀಕಾಂತ್ ಎಂಬಾತ ತನ್ನ ಪತ್ನಿ ಲಕ್ಷ್ಮೀ ಹಾಗೂ ಅತ್ತೆ ಶೃತಿ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಗೊಂಡವರನ್ನು ಶ್ರೀರಂಗಪಟ್ಟಣದ ಸಮುದಾಯ ಆಸ್ಪತ್ರೆಗೆ ಸೇರಿಸಲಾಗಿದೆ.
ಹಲ್ಲೆಗೈದ ಆರೋಪಿ ಶ್ರೀಕಾಂತ್ ಲಕ್ಷ್ಮೀ ಎಂಬಾಕೆಯನ್ನು 15 ವರ್ಷಗಳ ಹಿಂದೆ ಮದುವೆಯಾಗಿದ್ದು, ನಾಲ್ಕು ವರ್ಷದ ಹಿಂದೆ ಆತನ ಕುಟುಂಬ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು ಎನ್ನಲಾಗಿದೆ.
ಆದರೆ, ಶ್ರೀಕಾಂತ್ ಪತ್ನಿ ಲಕ್ಷ್ಮೀ ಮತಾಂತರಕ್ಕೆ ನಿರಾಕರಿಸಿದ್ದು, ಶ್ರೀಕಾಂತ್ ಕುಟುಂಬದವರು ಪದೇ ಪದೇ ಲಕ್ಷ್ಮೀ ಮತ್ತು ಆಕೆಯ ತಾಯಿ ಶೃತಿ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಲಾಗಿದೆ.
ತನ್ನ ಪತಿ ಶ್ರೀಕಾಂತ್ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ನೀನು, ಮಕ್ಕಳು, ನಿಮ್ಮ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿಕೊಳ್ಳಿ ಸಮಸ್ಯೆ ಸರಿಮಾಡುತ್ತೇವೆಂದು ಶ್ರೀಕಾಂತ್ ಮನೆಯವರು ಒತ್ತಡ ಹೇರುತ್ತಿದ್ದರು ಎಂದು ಲಕ್ಷ್ಮೀ ಆರೋಪಿಸಿದ್ದಾರೆ.
ಇದೇ ವಿಚಾರವಾಗಿ ನ್ಯಾಯ ಪಂಚಾಯತಿ ನಡೆಯುತ್ತಿದ್ದ ವೇಳೆ ಶ್ರೀಕಾಂತ್ ನನ್ನ ಮಗಳು ಲಕ್ಷ್ಮೀ ಮತ್ತು ಬಿಡಿಸಿಕೊಳ್ಳಲು ಹೋದ ನನ್ನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ. ಆತನ ಮನೆಯವರೂ ಹಲ್ಲೆ ನಡೆಸಿದರೆಂದು ಲಕ್ಷ್ಮೀ ತಾಯಿ ಶೃತಿ ಮಾಧ್ಯಮಗಳ ಎದುರು ಆರೋಪಿಸಿದರು.
ಶೃತಿ ಅವರ ಪುತ್ರ ರವಿಕಿರಣ್ ನೀಡಿದ ದೂರಿನ ಮೇರೆಗೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಶ್ರೀಕಾಂತ್ ಸೇರಿದಂತೆ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.