ಮಂಡ್ಯದ ಸಾಹಿತ್ಯ ಸಮ್ಮೇಳನದಲ್ಲಿ ಸಿ ಟಿ ರವಿಗೆ ಅವಕಾಶ ಕಲ್ಪಿಸಿದ್ದಕ್ಕೆ ಖಂಡನೆ: ಮಹಿಳಾ ಸಂಘಟನೆಗಳಿಂದ ಗೋ-ಬ್ಯಾಕ್ ಘೋಷಣೆ

Update: 2024-12-21 08:23 GMT

ಮಂಡ್ಯ, ಡಿ.21: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಅಶ್ಲೀಲ ನಿಂದನೆ ಆರೋಪ ಎದುರಿಸುತ್ತಿರುವ ಬಿಜೆಪಿ ಎಂಎಲ್ಸಿ ಸಿ.ಟಿ.ರವಿಗೆ ಮಂಡ್ಯದ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಬಾರದು ಎಂದು ವಿರೋಧಿಸಿ ಮಹಿಳಾ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.

ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯ ಮುಂಭಾಗ ಇರುವ ಬಸವಣ್ಣನ ಪ್ರತಿಮೆ ಎದುರು ವಿವಿಧ ಮಹಿಳಾ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ʼಗೋ ಬ್ಯಾಕ್ ಸಿ.ಟಿ.ರವಿ' ಘೋಷಣೆ ಕೂಗಿ, ಮಹಿಳಾ ಪೀಡಕರಿಗೆ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿದರು.

ಮಂಡ್ಯದ ಸಾಹಿತ್ಯ ಸಮ್ಮೇಳನದಲ್ಲಿ ಎರಡನೇ ದಿನವಾದ ಶನಿವಾರದಂದು 'ಸಾಹಿತ್ಯದಲ್ಲಿ ರಾಜಕೀಯ; ರಾಜಕೀಯದಲ್ಲಿ ಸಾಹಿತ್ಯ' ಎಂಬ ವಿಚಾರಗೋಷ್ಠಿಯಲ್ಲಿ 'ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ-ರಾಜಕೀಯ ನಿಲುವು' ವಿಷಯದ ಬಗ್ಗೆ ಸಿ.ಟಿ.ರವಿ ಪ್ರಬಂಧ ಮಂಡಿಸಲು ಅವಕಾಶ ಕಲ್ಪಿಸಲಾಗಿತ್ತು. ಇದನ್ನು ಖಂಡಿಸಿ ಸಮ್ಮೇಳನದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.

ಈ ವೇಳೆಯಲ್ಲಿ ಜನವಾದಿ ಸಂಘಟನೆಯ ದೇವಿ ಅವರು  ಮಾತನಾಡಿ, ಮಹಿಳೆಯನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಸಿ.ಟಿ. ರವಿ ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನದ ಅತಿಥಿಯಾಗಿ ಭಾಷಣ ಮಾಡುವುದನ್ನು ಕೇಳಿಸಿಕೊಳ್ಳಲು ಮಂಡ್ಯದ ಜನ ಕಾದು ಕೂತಿಲ್ಲ. ಅವರ ಭಾಷಣ ಸಾಹಿತ್ಯಾಸಕ್ತರಿಗೆ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಟಿ.ಎಲ್. ಕೃಷ್ಣಗೌಡ ಮಾತನಾಡಿ, ಮಂಡ್ಯ ಹಲವು ದಾರ್ಶನಿಕರು ಮಹನೀಯರನ್ನು ಕಂಡ ಜಿಲ್ಲೆ. ಕುವೆಂಪು ಅವರ ವೈಚಾರಿಕತೆ, ಸಾಮರಸ್ಯವನ್ನು ಮೈಗೂಡಿಸಿಕೊಂಡು ಸಮಸಮಾಜವನ್ನು ಕಟ್ಟಬೇಕೆಂಬ ಕನಸು ಹೊತ್ತು ಪ್ರೀತಿ ಮಾನವತೆಗಳನ್ನು ಹಂಚುತ್ತಾ ಹೆಸರಾಗಿರುವ ಜಿಲ್ಲೆ, ಅಂಬೇಡ್ಕರ್ ಎಂದರೆ ಈ ನೆಲದ ಉಸಿರು, ಅಸ್ತಿತ್ವ ಎಂದು ಧ್ವನಿ ಎತ್ತರಿಸುವ ಜಿಲ್ಲೆ ಇಂತಹ ಜಾಗಕ್ಕೆ ಕೋಮುಕ್ರಿಮಿ, ಸಂವಿಧಾನ ವಿರೋಧಿ, ಅದರಲ್ಲೂ ಮಹಿಳಾ ವಿರೋಧಿ ಮಾತುಗಳನ್ನಾಡುತ್ತಿರುವ ರವಿಗೆ ಮಂಡ್ಯದ ಸಾಹಿತ್ಯ ಸಮ್ಮೇಳನಕ್ಕೆ ಬರಲು ಅವಕಾಶ ಕೊಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಭರತ್ ರಾಜ್, ಕರ್ನಾಟಕ ಜನಶಕ್ತಿಯ ಕೃಷ್ಣಪ್ರಕಾಶ್, ಸಿದ್ದರಾಜು, ವಕೀಲರಾದ ಲಕ್ಷಣ್, ರಾಮಯ್ಯ, ದಸಂಸ ಕೃಷ್ಣ ಎಂ.ವಿ., ಸ್ವಾಭಿಮಾನಿ ಸಮ ಸಮಾಜದ ನರಸಿಂಹ ಮೂರ್ತಿ, ಸಮಾನ ಮನಸ್ಕರ ಸಂಘಟನೆಯ ಟಿಡಿ ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News