ಹಿಂದಿ ಹೇರಿಕೆ ಪ್ರತಿಭಟಿಸದಿದ್ದರೆ ನಮ್ಮ ಭಾಷೆಗಳಿಗೆ ಗಂಡಾಂತರ: ಸಿದ್ದರಾಮಯ್ಯ ಎಚ್ಚರಿಕೆ
ಮಂಡ್ಯ: ಸಕ್ಕರೆ ನಾಡು ಎಂದೇ ಹೆಸರಾಗಿರುವ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಶುಕ್ರವಾರ ವಿದ್ಯುಕ್ತ ಚಾಲನೆ ನೀಡಲಾಯಿತು.
ಈ ವೇಳೆಯಲ್ಲಿ ಸಮ್ಮೇಳನದ ಪ್ರಧಾನ ವೇದಿಕೆ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದಿ ಹೇರಿಕೆಯ ಮೂಲಕ ಕನ್ನಡ ಹಾಗೂ ಇತರೆ ಭಾಷೆಗಳನ್ನು ದಮನಿಸುವ ಪ್ರಯತ್ನಗಳಾಗುತ್ತಿದ್ದು, ಇದನ್ನು ಪ್ರತಿಭಟಿಸದಿದ್ದರೆ ನಮ್ಮ ಭಾಷೆಗಳು ಗಂಡಾಂತರಕ್ಕೆ ಸಿಲುಕಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಕನ್ನಡಕ್ಕೆ ಒದಗಿರುವ ಕಂಟಕಗಳ ಬಗ್ಗೆ ಚರ್ಚೆಯಾಗಬೇಕಿದೆ. ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಸಾಕಷ್ಟು ಅನ್ಯಾಯವಾಗಿದೆ. ಶ್ರೀಮಂತರ ಕಾರ್ಪೊರೇಟ್ ಕಂಪೆನಿಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದ್ದರಿಂದ ಜನರ ಕೈಯಲ್ಲಿ ಹಣ ಇಲ್ಲದೆ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಇದಕ್ಕಾಗಿ ನಮ್ಮ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಬೇಕಾಯಿತು ಎಂದು ಸಿದ್ದರಾಮಯ್ಯ ಹೇಳಿದರು.
ಸಂವಿಧಾನದ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಯುತ್ತಿದೆ. ಅದರ ವಿರುದ್ಧ ಹೋರಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದ ಅವರು, ಮಂಡ್ಯ ನೆಲದಲ್ಲಿ ಕೆಲವು ದ್ವೇಷವಾದಿ, ಹಿಂಸಾವಾದಿ ಶಕ್ತಿಗಳು ಜನರ ಮನಸ್ಸಿನಲ್ಲಿ ವಿಷ ಬಿತ್ತಲು ಪ್ರಯತ್ನಿಸುತ್ತಿವೆ. ಸಿಹಿ ಬೆಳೆಯುವ ಜನ ಅವರನ್ನು ಒಳಗೆ ಬಿಟ್ಟುಕೊಂಡಿಲ್ಲ. ಇದಕ್ಕಾಗಿ ಅಭಿನಂದನೆಗಳು ಎಂದು ಹೇಳಿದರು.
ಈ ಸಮ್ಮೇಳನ ನಾಡಿನ ಸಮಸ್ಯೆಗಳಿಗೆ ಉತ್ತರ ಹುಡುಕಬೇಕು. ನಾಡಿನ ಬೌದ್ಧಿಕ ದಾಸ್ಯಕ್ಕೆ ಕಾರಣಗಳೇನು?, ಅದನ್ನು ಮೀರುವ ಬಗೆ ಹೇಗೆ? ಎಂಬುದನ್ನು ಕುವೆಂಪು ವಿವರಿಸಿದ್ದಾರೆ. ಸಾವಿರಾರು ವರ್ಷಗಳಿಂದ ಪುರೋಹಿತಶಾಹಿ ನಮನ್ನು ದಾಸ್ಯದಲ್ಲಿ ಹೇಗೆ ಮುಳುಗಿಸಿದೆ ಎಂಬ ಸಮಗ್ರ ಮಾಹಿತಿಯನ್ನು ಅವರು ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು
ಆಧುನಿಕತೆಯ ಕಾಲದಲ್ಲೂ ನಾವು ವೈಚಾರಿಕತೆ ಹಾಗೂ ವೈಜ್ಞಾನಿಕತೆಯನ್ನು ಮೈಗೂಡಿಸಿಕೊಂಡಿಲ್ಲ. ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ರಂಗಗಳನ್ನು ವೈಚಾರಿಕ ದೃಷ್ಟಿಯಿಂದ ನೋಡದೇ ಇದ್ದರೆ ಕೇಡು ತಪ್ಪುವುದಿಲ್ಲ. ಯಾವ ಸಂಪ್ರದಾಯವೂ ಸಂಕೋಚಕ್ಕೆ ಸಿಲುಕಬಾರದು. ಸರ್ವಧರ್ಮಗಳ ಸಾರ, ಉದಾರದರ್ಶನವನ್ನು ಕಂಡು ಬಾಳನ್ನು ಕಟ್ಟಿಕೊಳ್ಳಬೇಕು. ಜಾತಿ, ಮತ, ದೇಶ, ಕಾಲಗಳ ಭೇದವಿಲ್ಲದೆ ಎಲ್ಲಾ ಮಹಾಪುರುಷರ ಜ್ಞಾನಗಂಗೆಗಳನ್ನು ಸಂಪೂರ್ಣವಾಗಿ ಅನುಭವಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಇಂಗ್ಲೀಷ್ ಸೇರಿದಂತೆ ಪ್ರಮುಖ ಭಾಷೆಗಳ ಕೃತಿಗಳು ಡಿಜಿಟಲೀಕರಣದಿಂದ ಜಗತ್ತಿನ ಎಲ್ಲೆಡೆ ಎಲ್ಲರಿಗೂ ಮುಕ್ತವಾಗಿ ದೊರೆಯುತ್ತದೆ. ಕನ್ನಡದ ಸಮಗ್ರ ಸಾರಸ್ವತ ಲೋಕದ ಡಿಜಿಟಲೀಕರಣ ಕಾರ್ಯವನ್ನು ಆರಂಭಿಸಲಾಗಿದೆ. ಜಗತ್ತಿನಲ್ಲಿರುವ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಜ್ಞಾನವನ್ನು ವೃದ್ಧಿಸುವ ಕೆಲಸವಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದಲ್ಲಿ ಕನ್ನಡ ಸಮಗ್ರ ನಾಗರಿಕತೆಯ ವಿಕಾಸ, ಸಂಸ್ಕೃತಿಯ ಇತಿಹಾಸಗಳನ್ನು ಬಿಂಬಿಸುವ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ನಾಡಿಗೆ ಗೋವಿನ ಹಾಡು ಎಂಬ ಶ್ರೇಷ್ಠ ಸಾಹಿತ್ಯ ಕೊಟ್ಟ ನೆಲವಿದು. ಪೊಲೀಸರ ಲಾಠಿ ಏಟನ್ನೂ ಲೆಕ್ಕಿಸದೆ ಟಿ. ಸಿದ್ಧಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ಕೆ.ಟಿ. ಭಾಷ್ಯಂ ಸೇರಿದಂತೆ ಸಾವಿರಾರು ಜನರು ತ್ರಿವರ್ಣ ಧ್ವಜವನ್ನು ಹಾರಿಸಿದ 1938ರ ಶಿವಪುರ ಧ್ವಜ ಸತ್ಯಾಗ್ರಹ ಜಿಲ್ಲೆಯ ಜನರ ಧೈರ್ಯ, ಸಾಹಸಕ್ಕೆ ಪ್ರತಿಬಿಂಬ. ಸ್ವಾತಂತ್ರ್ಯ, ಭಾವೈಕ್ಯ, ಉದಾರತೆ, ಜಾತ್ಯತೀತ ಗುಣಗಳನ್ನು ಈ ನೆಲದ ಹಿರಿಯರು ಬಿತ್ತಿದ್ದು, ಹೊಸ ತಲೆಮಾರು ಅದನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಕುವೆಂಪು ಅವರಂತಹ ಪ್ರತಿಭಾವಂತ ರಾಷ್ಟ್ರಕವಿಯನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಕನ್ನಡದ ಕಣ್ವ ಬೆಳ್ಳೂರಿನ ಬಿ.ಎಂ. ಶ್ರೀಕಂಠಯ್ಯನವರು, ಎಂ.ಎನ್.ಶ್ರೀಕಂಠೇಗೌಡರು, ಎ.ಎನ್.ಮೂರ್ತಿರಾಯರು, ಪು.ತಿ.ನರಸಿಂಹಾಚಾರ್ಯ, ಕೆ.ಎಸ್.ನರಸಿಂಹಸ್ವಾಮಿ ಸೇರಿದಂತೆ ಅನೇಕರು ಈ ಜಿಲ್ಲೆಯವರಾಗಿದ್ದು, ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಜಾತ್ಯತೀತ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕೃಷ್ಣರಾಜ ಮಹಾಸಾಗರ ಅಣೆಕಟ್ಟು ನಿರ್ಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರಿನ ಅರಸರು. ಶ್ರೀರಂಗಪಟ್ಟಣದ ಹೈದರ್ ಮತ್ತು ಟಿಪ್ಪು ಮುಂತಾದವರನ್ನು ಮರೆಯುವಂತಿಲ್ಲ. ಎಚ್.ಕೆ.ವೀರಣ್ಣಗೌಡರು, ಕೆ.ವಿ.ಶಂಕರೇಗೌಡರು, ಎಸ್.ಸಿ.ಮಲ್ಲಯ್ಯ, ಜಿ.ಮಾದೇಗೌಡರು, ಎಂ.ಸಿ.ಬಂದೀಗೌಡರು, ಅಂಬರೀಶ್, ಎಸ್.ಎಂ.ಕೃಷ್ಣ ಮತ್ತಿತರರ ಕೊಡುಗೆಗಳು ಸ್ಮರಣೀಯ ಎಂದು ಸಿದ್ದರಾಮಯ್ಯ ಹೇಳಿದರು.
ಮೂರು ದಶಕಗಳ ಬಳಿಕ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಡ್ಯದಲ್ಲಿ ಮೂರನೇ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಗೊ.ರು.ಚನ್ನಬಸಪ್ಪ ಅವರು ಸರಕಾರಿ ಶಾಲೆಯ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮೇಳನವನ್ನು ಮೊಟ್ಟಮೊದಲ ಬಾರಿಗೆ ನಡೆಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ವೇದಿಕೆಯಲ್ಲಿ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಹಿರಿಯ ಸಾಹಿತಿಗಳಾದ ಡಾ.ದೊಡ್ಡರಂಗೇಗೌಡ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ಕೃಷಿ ಸಚಿವ ಚಲುವರಾಯಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕರ್ನಾಟಕ ವಿಧಾನಸಭೆ ಸಭಾಪತಿ ಯು.ಟಿ.ಖಾದರ್, ಉಪ ಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಪಿ.ಎಂ.ನರೇಂದ್ರ ಸ್ವಾಮಿ, ಪಿ.ರವಿಕುಮಾರ್, ಎಂ.ಬಿ.ರಮೇಶ್ ಬಂಡಿ ಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಂಡ್ಯ ಅಪ್ಪಟ ಕನ್ನಡದ ನೆಲ..!
ಮಂಡ್ಯದಲ್ಲಿ ನಡೆಯುತ್ತಿರುವ ಸಮೇಳನಕ್ಕೆ ದೇಶ, ವಿದೇಶಗಳಿಂದಲೂ ಸಾಹಿತ್ಯಾಭಿಮಾನಿಗಳು ಬಂದಿದ್ದಾರೆ. ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಶಿಂಷಾ, ಲೋಕಪಾವನಿ ಮುಂತಾದ ಜೀವನದಿಗಳು ಹರಿಯುತ್ತವೆ. ಸದಾಕಾಲ ಕನ್ನಡ ಸಾಹಿತ್ಯ ಪರಂಪರೆಯನ್ನು ಮೆರೆಸಿರುವ ಮಂಡ್ಯ ಅಪ್ಪಟ ಕನ್ನಡದ ನೆಲ. ಭತ್ತದ ಕಣಜ. ಸಕ್ಕರೆನಾಡು. ಯಾವುದೇ ಭಾಷಿಗರು ಬಂದರೂ ಒಂದು ತಿಂಗಳಲ್ಲಿ ಕನ್ನಡ ಕಲಿಸುವ ದಿಟ್ಟತನ ಹಾಗೂ ಭಾಷಾಭಿಮಾನ ಮಂಡ್ಯದ ಜನರದು ಎಂದು ಸಿದ್ದರಾಮಯ್ಯ ಹೇಳಿದರು.
ಶಿಕ್ಷಣ ವ್ಯವಸ್ಥೆಯಲ್ಲಿ 3-ಎಚ್ ಸೂತ್ರ ಅಳವಡಿಕೆ ಅಗತ್ಯ..!
ಸಂಕಷ್ಟದ ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ಹೇಳಲಾಗುತ್ತಿದೆ. ಇದಕ್ಕೆ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲ ಸಮಸ್ಯೆಗಳಿವೆ. ಮಕ್ಕಳಿಗೆ ಹೆಡ್, ಹಾರ್ಟ್ ಮತ್ತು ಹ್ಯಾಂಡ್ ಎಂಬ 3-ಎಚ್ ಸೂತ್ರವನ್ನು ಅಳವಡಿಸಬೇಕು. ಮೆದುಳು, ಕರುಣೆ, ಕೌಶಲ್ಯ ಒಳಗೊಂಡ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಹರಿದು ಬಂದ ಜನಸಾಗರ:
ಸಕ್ಕರೆ ನಗರಿ ಮಂಡ್ಯದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬರುತ್ತಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದಲೇ ಸ್ಥಳೀಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳು ಸಾಹಿತ್ಯ ಸಮ್ಮೇಳನವನ್ನು ಕಣ್ತುಂಬಿಕೊಳ್ಳಲು ತಂಡೋಪತಂಡವಾಗಿ ಆಗಮಿಸಿದರು. ರಾಜ್ಯದ ನಾನಾ ಜಿಲ್ಲೆಗಳಿಂದ ಕನ್ನಡಾಭಿಮಾನಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಗುರುವಾರವೇ ನಗರಕ್ಕೆ ಆಗಮಿಸಿದ್ದರು.