ಒಂದು ಭಾಷೆ ಬೆಳೆಯಬೇಕಾದರೆ ಇನ್ನೊಂದು ಭಾಷೆಯನ್ನು ಪ್ರೀತಿಸಿ : ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯು.ಟಿ. ಖಾದರ್
ಮಂಡ್ಯ : ಒಂದು ಭಾಷೆ ಬೆಳೆಯಬೇಕಾದರೆ ಇನ್ನೊಂದು ಭಾಷೆಯನ್ನು ಪ್ರೀತಿಸಬೇಕು. ಇನ್ನೊಂದು ಭಾಷೆಯನ್ನು ದ್ವೇಷಿಸಿ, ಒಂದು ಭಾಷೆ ಬೆಳೆಯಲು ಸಾಧ್ಯವಿಲ್ಲ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಶುಕ್ರವಾರ ಮಂಡ್ಯ ನಗರದಲ್ಲಿ ಚಾಲನೆಗೊಂಡ ಮೂರು ದಿನಗಳ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆ, ನಮ್ಮ ಸಂಸ್ಕೃತಿ, ಊಟೋಪಚಾರ ಹೀಗೆ ಎಲ್ಲವನ್ನು ಕೂಡ ನಮ್ಮ ಮುಂದಿನ ಪೀಳಿಗೆಗೆ, ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಪ್ರೀತಿಯನ್ನು ನೀಡುವ ನಿಟ್ಟಿನಲ್ಲಿ ನಮಗೆ ಮುಖ್ಯವಾಗಿದೆ ಎಂದರು.
ಕನ್ನಡವನ್ನು ಉಳಿಸಿ ಬೆಳೆಸುವುದು ಸಾಹಿತಿಗಳ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕರ್ತವ್ಯವಲ್ಲ. ಅದು ಕನ್ನಡ ನಾಡಿನ ಪ್ರತಿಯೊಬ್ಬ ತಂದೆ ತಾಯಿಯ ಕರ್ತವ್ಯ. ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ಪ್ರತಿಯೊಬ್ಬ ಕಾರ್ಯಕ್ರಮಗಳಿಗೂ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಆಗ ಮಾತ್ರ ಕನ್ನಡದ ಬಗೆಗಿನ ಪ್ರೀತಿ ಸಾಧ್ಯ ಎಂದು ಖಾದರ್ ಹೇಳಿದರು.