ಸಮ್ಮೇಳನದಲ್ಲಿ ಬಾಡೂಟಕ್ಕೆ ಕೋಳಿ, ಕುರಿ ಸಂಗ್ರಹ : ರಾಜೇಂದ್ರ ಪ್ರಸಾದ್

Update: 2024-12-18 18:16 GMT

ಮಂಡ್ಯ : ಸಾಹಿತ್ಯ ಸಮ್ಮೇಳನದಲ್ಲಿ ಜಾರಿಯಾಗಿರುವ ಅಘೋಷಿತ ಮಾಂಸಾಹಾರ ನಿಷೇಧ ವಿರೋಧಿಸಿ ಸಮ್ಮೇಳನಕ್ಕಾಗಮಿಸುವ ಅತಿಥಿಗಳಿಗೆ ಬಾಡೂಟ ಬಡಿಸಲು ಮನೆಗೊಂದು ಕೋಳಿ, ಊರಿಗೊಂದು ಕುರಿ ಸಂಗ್ರಹ ಅಭಿಯಾನಕ್ಕೆ ಇಂದಿನಿಂದ (ಬುಧವಾರ) ಚಾಲನೆ ನೀಡಲಾಗುತ್ತಿದೆ ಎಂದು ಸಾಹಿತಿ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಬುಧವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಡೂಟ, ಬಾಡೂಟದ ಬಳಗವನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಯತ್ನ ನಡೆಯುತ್ತಿದೆ. ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರದ ಆಗ್ರಹ ಎಂಬ ತಪ್ಪು ಸಂದೇಶ ರವಾನೆಯಾಗುತ್ತಿದೆ. ಆದರೆ, ಮಾಂಸಾಹಾರದ ಪ್ರಾತಿನಿಧ್ಯ ಇರುಬೇಕೆಂಬುದು ಬಳಗದ ಉದ್ದೇಶವಾಗಿದೆ ಎಂದರು.

ಸಮ್ಮೇಳನಕ್ಕೂ ಮೊದಲು ಸಮ್ಮೇಳನದಲ್ಲಿ ತಂಬಾಕು, ಮದ್ಯಪಾನ ಹಾಗೂ ಮಾಂಸಾಹಾರ ನಿಷೇಧಿಸಲಾಗಿದೆ ಎಂಬ ಹೇಳಿಕೆ ವಿರುದ್ಧ ಈ ಒತ್ತಾಯ ಪ್ರಾರಂಭವಾಗಿದೆ. ಮಾಂಸಾಹಾರಕ್ಕೆ ಯಾವುದೇ ರೀತಿಯಲ್ಲಿ ನಿಷೇಧವಿಲ್ಲ. ಆದರೂ ಅದನ್ನು ಕೀಳಾಗಿ, ಅಸ್ಪಶ್ಯತೆಯಿಂದ ಕಾಣುತ್ತಿದ್ದು, ಅದನ್ನು ಹೋಗಲಾಗಡಿಸುವ ಪ್ರಯತ್ನ ನಮ್ಮದಾಗಿದೆ ಎಂದು ಅವರು ಹೇಳಿದರು.

ಸಮ್ಮೇಳನದಲ್ಲಿ ಒಂದು ಮೊಟ್ಟೆ ಹಾಗೂ ಒಂದು ತುಂಡು ಮಾಂಸ ನೀಡುವುದರಲ್ಲಿ ಸಮಸ್ಯೆ ಏನಿದೆಯೆಂದು ಕಾಣುತ್ತಿಲ್ಲ, ಬಾಡೂಟಕ್ಕೆ ಅವಕಾಶ ನೀಡದಿದ್ದರೆ ಇಂದಿನಿಂದ ಕೋಳಿ ಮತ್ತು ಮೊಟ್ಟೆ ಸಂಗ್ರಹಿಸಿ ದಾಸ್ತಾನು ಮಾಡುತ್ತೇವೆ. ಸಮ್ಮೇಳನದ ದಿನ ವಿತರಿಸುತ್ತೇವೆ ಎಂದು ಅವರು ತಿಳಿಸಿದರು.

ಬಳಗದ ಸಂತೋಷ್‌ ಮಾತನಾಡಿ, ಸಚಿವರು ಸಾಕಾರಾತ್ಮಕ ಸ್ಪಂದನೆಯ ಭರವಸೆ ನೀಡಿದ್ದು, ಕೊನೆ ದಿನದವರೆಗೂ ಕಾಯುತ್ತೇವೆ. ಆಹಾರ ಸಮಿತಿ ಬಾಡೂಟ ಅನುಷ್ಠಾನಕ್ಕೆ ಮುಂದಾದರೆ ನಾವು ಸಂಗ್ರಹಿಸಿದ ಕುರಿ, ಕೋಳಿ, ಧಾನ್ಯಗಳನ್ನು ಸಮಿತಿಗೆ ಸಲ್ಲಿಸುತ್ತೇವೆ. ಅನುಷ್ಠಾನಗೊಳಿಸದಿದ್ದರೆ ಸಮ್ಮೇಳನ ಸ್ಥಳದ ಆಸುಪಾಸಿನಲ್ಲಿ ಖಂಡನಾ ಸಭೆ ನಡೆಸಿ ಸಾಹಿತ್ಯ ಅತಿಥಿಗಳಿಗೆ ಮೊಟ್ಟೆ, ಮಾಂಸದ ತುಂಡು ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪ್ರಗತಿಪರ ಸಂಘಟನೆಗಳ ಮುಖಂಡರಾದ ಎಂ.ಬಿ.ನಾಗಣ್ಣಗೌಡ, ಸಿ.ಕುಮಾರಿ, ಮನ್ನೂರ್, ಧನುಷ್, ವಕೀಲರಾದ ಲಕ್ಷ್ಮಣ್ ಚೀರನಹಳ್ಳಿ, ಶಿವಶಂಕರ್, ಇತರ ಮುಖಂಡರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News