87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ : ಎನ್.ಚಲುವರಾಯಸ್ವಾಮಿ
ಮಂಡ್ಯ : ಮೂರನೇ ಬಾರಿಗೆ ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ. ಹಲವು ಹೊಸತನಗಳಿಗೆ ಸಾಕ್ಷಿಯಾಗುತ್ತಿರುವ ಸಾಹಿತ್ಯ ಸಮ್ಮೇಳನಕ್ಕೆ ಮಂಡ್ಯ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ನಗರದ ಹೊರವಲಯದ ಸ್ಯಾಂಜೋ ಆಸ್ಪತ್ರೆ ಹಿಂಭಾಗದಲ್ಲಿ ನಿರ್ಮಿಸುತ್ತಿರುವ ವೇದಿಕೆಗಳ ಸಿದ್ಧತೆ ಕಾರ್ಯಗಳನ್ನು ಬುಧವಾರ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 80 ಎಕರೆ ಪ್ರದೇಶದಲ್ಲಿ 6 ಎಕರೆಯಲ್ಲಿ ಪ್ರಧಾನ ವೇದಿಕೆ, 6 ಎಕರೆಯಲ್ಲಿ ಎರಡು ಸಮಾನಾಂತರ ವೇದಿಕೆ, 40 ಎಕರೆ ಪ್ರದೇಶದಲ್ಲಿ ಪಾಕಿರ್ಂಗ್‍ಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
55 ವಸ್ತುಪ್ರದರ್ಶನ ಮಳಿಗೆಗಳು, 350 ವಾಣಿಜ್ಯ ಮಳಿಗೆ, 450 ಪುಸ್ತಕ ಮಳಿಗೆಗಳು ಕೂಡ ತಲೆಎತ್ತಿವೆ. ಊಟಕ್ಕೆ 100 ಕೌಂಟರ್, ನೋಂದಾಯಿತ ಪ್ರತಿನಿಧಿಗಳಿಗೆ 40 ಕೌಂಟರ್‍ಗಳನ್ನು ತೆರೆಯಲಾಗಿದ್ದು ಎಲ್ಲರಿಗೂ ಒಂದೇ ಊಟದ ಮೆನು ಇರಲಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆಹಾರದ ಗುಣಮಟ್ಟ ಪರೀಕ್ಷೆ ಮಾಡಿ ವರದಿ ಪಡೆಯಲಾಗುತ್ತದೆ. ನೀರನ್ನು ಸಹ ಪರೀಕ್ಷಿಸಲಾಗುತ್ತದೆ ಎಂದು ಅವರು ಹೇಳಿದರು.
ಪ್ರಧಾನ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದವೂ ಸೇರಿದಂತೆ 11 ಗೋಷ್ಠಿಗಳು, 2 ಸಮಾನಾಂತರ ವೇದಿಕೆಗಳಲ್ಲಿ 20 ಗೋಷ್ಠಿಗಳು ಆಯೋಜನೆಗೊಂಡಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ, ಅಂಬೇಡ್ಕರ್ ಭವನ, ಸಮಾನಾಂತರ ವೇದಿಕೆ ಮತ್ತು ಪ್ರಧಾನ ವೇದಿಕೆಗಳಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪ್ರಧಾನ ವೇದಿಕೆಯಲ್ಲಿ ‘ನುಡಿ ಜಾತ್ರೆಯ ಸ್ವರ ಯಾತ್ರೆ’ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ.20ರಂದು ಸಂಜೆ 7ಕ್ಕೆ ಮೊದಲ ದಿನ ಸಾಧುಕೋಕಿಲ ಮತ್ತು ರಾಜೇಶ್ ಕೃಷ್ಣನ್ ತಂಡದವರಿಂದ, 21ರಂದು ಸಂಜೆ 7ಕ್ಕೆ ಅರ್ಜುನ್ ಜನ್ಯ ಮತ್ತು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಡಿ.22ರಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಪೊಲೀಸ್ ಬ್ಯಾಂಡ್ ಇರಲಿದೆ ಎಂದು ವರು ವಿವರಿಸಿದರು.
ಸೆಸ್ಕ್ ವತಿಯಿಂದ ನಗರದಲ್ಲಿ ವಿದ್ಯುತ್ ಅಲಂಕಾರ ಮಾಡಲಾಗುತ್ತಿದೆ. ನಾಡುನುಡಿಗೆ ಸೇವೆ ಸಲ್ಲಿಸಿದ 170 ಮಂದಿ ಸಾಧಕರನ್ನು ಸನ್ಮಾನಿಸಲಾಗುತ್ತಿದೆ. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಾರ್ಥ 87 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ. ಜತೆಗೆ ‘ಬೆಲ್ಲದಾರತಿ’ ಹೆಸರಿನ ಸ್ಮರಣ ಸಂಚಿಕೆ ಕೂಡ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಹೇಶ್ ಜೋಶಿ ಮಾತನಾಡಿ, ಮೂರು ವೇದಿಕೆಗಳಿಗೆ ಸಮಾನ ಗೌರವ, ಘನತೆ ನೀಡಲಾಗಿದೆ. ಮೂರು ವೇದಿಕೆಗೆ ಅಷ್ಟೇ ಮಹತ್ವವಿದೆ. ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರೇ ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ ಮಾಡಿರುವ ‘ಪ್ರಾಚೀನ ಭಾರತದಲ್ಲಿ ರಾಜಕೀಯ ಹಿಂಸಾಚಾರ’, ಕನ್ನಡದಿಂದ ಇಟಲಿಯನ್‍ಗೆ ಅನುವಾದಗೊಂಡಿರುವ ಖ್ಯಾತ ಕಾದಂಬರಿಕಾರ್ತಿ ತ್ರಿವೇಣಿ ಅವರ ‘ಶರಪಂಚರ’ ಕಾದಂಬರಿ ಬಿಡುಗಡೆ ಆಗಲಿವೆ ಎಂದರು.
ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಅಕ್ಕ ಸಂಸ್ಥಾಪಕ ಅಮರ್‍ನಾಥ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
“ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಡಿ.19ರಂದು ಸಂಜೆ ಮಂಡ್ಯಕ್ಕೆ ಆಗಮಿಸಲಿದ್ದು ಅವರನ್ನು ಬರಮಾಡಿಕೊಳ್ಳಲಾಗುವುದು. ಡಿ.20ರಂದು ಬೆಳಗ್ಗೆ 6ಕ್ಕೆ ಧ್ವಜಾರೋಹಣ ನೆರವೇರಲಿದೆ. 7 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಚಾಲನೆ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಹಗಲುವೇಷ, ಮಹಿಳಾ ವೀರಗಾಸೆ, ಗೊರವರ ಕುಣಿತ, ಕಂಸಾಳೆ, ಕರಗ, ಸುಗ್ಗಿಕುಣಿತ, ಕೋಲಾಟ ಒಳಗೊಂಡಂತೆ ಪೂರ್ಣಕುಂಭ ಹೊತ್ತ 300 ಮಹಿಳೆಯರು ಹಾಗೂ 50ಕ್ಕೂ ಹೆಚ್ಚು ಕಲಾತಂಡಗಳು ಪಾಲ್ಗೊಳ್ಳಲಿವೆ.”
-ಎನ್.ಚಲುವರಾಯಸ್ವಾಮಿ, ಸಚಿವ ಎನ್.ಚಲುವರಾಯಸ್ವಾಮಿ.