ಮಂಡ್ಯ | ಪೋಕ್ಸೋ ಪ್ರಕರಣ; ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, 10 ಸಾವಿರ ದಂಡ
ಸಾಂದರ್ಭಿಕ ಚಿತ್ರ
ಮಂಡ್ಯ : ಪೋಕ್ಸೋ ಪ್ರಕರಣದ ಆರೋಪಿಗೆ ನಗರದ ಎಫ್.ಟಿ.ಎಸ್.ಸಿ-1 (ಪೋಕ್ಸೋ ವಿಶೇಷ) ನ್ಯಾಯಾಲಯ 20 ವರ್ಷಗಳ ಕಠಿಣ ಸಜೆ ಮತ್ತು 10,000 ರೂ. ದಂಡ ವಿಧಿಸಿದೆ.
ಮಂಡ್ಯ ಜಿಲ್ಲೆ, ಮದ್ದೂರು ತಾಲೂಕು, ಶಿವಪುರ ಟೌನಿನ ಲೇಟ್ ರಾಜು ಟಿ.ಬಿ.(63) ಶಿಕ್ಷೆಗೆ ಗುರಿಯಾಗಿರುವ ಆರೋಪಿ. ಈತನು 7 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ ಬಗ್ಗೆ ದೂರು ದಾಖಲಾಗಿತ್ತು.
ಮದ್ದೂರು ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಕಲಂ-366,376(ಎ)(ಬಿ) ಐ.ಪಿ.ಸಿ ಮತ್ತು ಕಲಂ-4.6.10 ಪೋಕ್ಸೋ ಕಾಯಿದೆ ಹಾಗೂ ಕಲಂ-75 ಜೆ.ಜೆ.ಕಾಯಿದೆ ಅಡಿ ಪ್ರಕರಣ ದಾಖಲಾಗಿತ್ತು.
ಅಂದಿನ ಮದ್ದೂರು ಪೊಲೀಸ್ ಠಾಣಾ ಪಿಐ ಸಂತೋಷ್ ತನಿಖೆಯನ್ನು ನಡೆಸಿದ್ದು, ನಂತರ ಪಿ.ಐ ಶಿವಕುಮಾರ್ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ದಾಖಲಿಸಿದ್ದರು.
ನ್ಯಾಯಾಲಯದಲ್ಲಿ ವಿಶೇಷ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರ ಮುಂದೆ ವಿಚಾರಣೆ ನಡೆಯಿತು.
ಆರೋಪ ಸಾಬೀತಾಗಿದ್ದು, ಕಲಂ-366 ಐ.ಪಿ.ಸಿ.ಗೆ 5 ವರ್ಷಗಳ ಸಾದಾ ಸಜೆ ಮತ್ತು 1,000 ರೂಂ. ದಂಡ ಹಾಗೂ ಕಲಂ-376(ಎ)(ಬಿ) ಐ.ಪಿ.ಸಿ. ಮತ್ತು ಕಲಂ-6 ರ ಪೋಕ್ಸೋ ಕಾಯಿದೆ ಅಪರಾಧಕ್ಕೆ 20 ವರ್ಷಗಳ ಕಠಿಣ ಸಜೆ ಮತ್ತು 10,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ 6,00,000 ರೂ. ಪರಿಹಾರವನ್ನು ಆದೇಶ ಮಾಡಿರುತ್ತಾರೆ.
ಅಭಿಯೋಜನೆಯ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾದ ಎಂ.ಜೆ.ಪೂರ್ಣಿಮಾ ವಾದ ಮಂಡಿಸಿದ್ದರು.