ಮಂಡ್ಯ | ಸ್ಮಶಾನ ದಾರಿಗೆ ತಂತಿ ಬೇಲಿ; ರಸ್ತೆಯಲ್ಲೇ ಅಂತ್ಯಸಂಸ್ಕಾರ

ಮಂಡ್ಯ: ರೈತನೋರ್ವ ಸ್ಮಶಾನ ಮಾರ್ಗದ ರಸ್ತೆಗೆ ತಂತಿ ಬೇಲಿ ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಅನ್ಯಮಾರ್ಗವಿಲ್ಲದೆ ರಸ್ತೆಯಲ್ಲಿಯೇ ಶವಸಂಸ್ಕಾರ ನೆರವೇರಿಸಿದ ಘಟನೆ ಶ್ರೀರಂಗಪಟ್ಟಣ ತಾಲೂಕು ಹಿಬ್ಬಾಡಿಹುಂಡಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಸ್ಮಶಾನ ರಸ್ತೆ ಜಾಗ ತನಗೆ ಸೇರಿದೆ ಎಂದು ಅಂದಾನಿಗೌಡ ಎಂಬವರು ಇತ್ತೀಚೆಗೆ ಈ ಮಾರ್ಗದಲ್ಲಿ ತಂತಿಬೇಲಿ ಹಾಕಿಕೊಂಡಿದ್ದು, ರವಿವಾರ ನಿಧನರಾದ ಗ್ರಾಮದ ಸತೀಶ್(32) ಎಂಬ ಯುವಕನ ಮೃತದೇಹವನ್ನು ರಸ್ತೆಯಲ್ಲೇ ಸಂಸ್ಕಾರ ನೆರವೇರಿಸಿ ಪ್ರತಿಭಟಿಸಿದ್ದಾರೆ.
ಹಲವಾರು ವರ್ಷದಿಂದ ಗ್ರಾಮದ ಸ್ಮಶಾನ, ಜಾನುವಾರುಗಳು ಕುಡಿಯುವ ನೀರಿನ ಕೆರೆಕಟ್ಟೆ ಹಾಗೂ ಜಮೀನಿಗೆ ಸದರಿ ರಸ್ತೆಯ ಮೂಲಕವೇ ತೆರಳುತ್ತಿದ್ದೆವು. ಆದರೆ, ಇದೀಗ ರಸ್ತೆಗೆ ಅಂದಾನಿಗೌಡ ತಂತಿಬೇಲಿ ಹಾಕಿಕೊಂಡು ಸಂಚಾರ ನಿರ್ಬಂಧಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.ಕೂಡಲೇ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ರಸ್ತೆಗೆ ಹಾಕಿರುವ ಬೇಲಿಯನ್ನು ತೆರವುಗೊಳಿಸದಿದ್ದರೆ, ಮುಂದಿನ ದಿನಗಳಲ್ಲಿ ಕಚೇರಿ ಎದುರೇ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.