ರಾಜಕಾರಣಿಗಳ ಕೃತಿಗಳನ್ನು ಸಾಹಿತ್ಯಾರ್ಥದಲ್ಲಿ ಪರಿಗಣಿಸುತ್ತಿಲ್ಲ: ಎಚ್.ಕೆ.ಪಾಟೀಲ್

Update: 2024-12-21 16:02 GMT

ಮಂಡ್ಯ : ರಾಜಕಾರಣಿಗಳ ಕೃತಿಗಳನ್ನು ಸಾಹಿತ್ಯಾರ್ಥದಲ್ಲಿ ಪರಿಗಣಿಸುತ್ತಿಲ್ಲ. ರಾಜಕಾರಣಿಗಳ ಸಾಹಿತ್ಯ ರಚನೆ ಅವರ ಪಾತ್ರಗಳನ್ನು ಒಳಗೊಂಡಿರುತ್ತದೆ. ಇದು ಸಾಹಿತ್ಯಕ್ಕೆ ಸಂಬಂಧಿಸಿದ್ದಲ್ಲ ಎಂಬುದು ದುರದೃಷ್ಟಕರ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಮಂಡ್ಯ ನಗರದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ ರಾಜಮಾತೆ ಕೆಂಪನಂಜಮ್ಮಣಿ ಮತ್ತು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಧಾನ ವೇದಿಕೆಯಲ್ಲಿ ನಡೆದ 'ಸಾಹಿತ್ಯದಲ್ಲಿ ರಾಜಕೀಯ : ರಾಜಕೀಯದಲ್ಲಿ ಸಾಹಿತ್ಯ' ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಹಿತಿಗಳು ರಾಜಕಾರಣವನ್ನು ಅಸ್ಪೃಶ್ಯತೆಯಿಂದ ನೋಡುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಸಾಹಿತ್ಯ ಕೃಷಿ ಮಾಡುವವರು ರಾಜಕಾರಣಿಗಳನ್ನು ಬಹಳ ದೂರವಿಡಲು ನೋಡುತ್ತಾರೆ. ಪ್ರಜಾಪ್ರಭುತ್ವದ ಬಂದ ಮೇಲೆ ಎಲ್ಲಾ ರೀತಿಯ ಮಗ್ಗಲುಗಳನ್ನು ಸಾಹಿತ್ಯದ ಮೂಲಕ ಕಲಿಯಬಹುದಾಗಿದೆ. ಸಾಹಿತ್ಯದ ಮೂಲಕ ರಾಜಕಾರಣವನ್ನು ಬದಲಾಯಿಸಲು ಸಾಧ್ಯವಿದೆ. ಸಾಹಿತ್ಯ ಕ್ಷೇತ್ರದಲ್ಲಿರುವವರು ರಾಜಕಾರಣಕ್ಕೆ ಮಾರ್ಗದರ್ಶನ ಮಾಡಬೇಕಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ರಾಜ ಮಹಾರಾಜರ ಕಾಲದಿಂದಲೂ ಸಾಹಿತ್ಯ ಪೋಷಣೆಯಾಗುತ್ತಿದೆ. ರಾಜಕಾರಣದ ಮೇಲೆ ಸಾಹಿತ್ಯ ಪ್ರಭಾವ ಉಂಟುಮಾಡಿದೆ. ಸಾಹಿತಿಯು ಆಗಿದ್ದ ಗಾಂಧೀಜಿಯವರ ಚಿಂತನೆಗಳು ಸಮಾಜದ ಬದಲಾವಣೆಗೆ ಕಾರಣವಾಗಿವೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ಮಾಡಲಾಗುವ ಮೌಲಿಕ ಭಾಷಣವನ್ನು ಸಾಹಿತ್ಯದ ಭಾಗವಾಗಿ ಏಕೆ ಪರಿಗಣಿಸಬಾರದು? ನೆಹರೂ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣ ಮೈ ನವಿರೇಳಿಸುತ್ತದೆ. ರಾಜಕಾರಣ ಮತ್ತು ಸಾಹಿತ್ಯಕ್ಕೂ ಸಂಬಂಧ ಇಲ್ಲ ಎನ್ನಬಾರದು. ಎರಡಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಎಚ್.ಕೆ ಪಾಟೀಲ್ ತಿಳಿಸಿದರು.

ಆಶಯ ನುಡಿಗಳನ್ನಾಡಿದ ರಾಜಕೀಯ ಚಿಂತಕ ಬಿ.ಎಲ್.ಶಂಕರ್, ಗಾಂಧೀಜಿ ಅವರ ವಿಚಾರ, ಡಾ.ಬಿ.ಆರ್ ಅಂಬೇಡ್ಕರ್ ಅವರ ವಿದ್ವತ್ತು ಸಾಹಿತ್ಯ ರಚನೆ ಚಿಂತನೆ ಮೇಲೆ ಅಗಾಧ ಪರಿಣಾಮ ಬೀರಿವೆ. ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ನಂತರ ಅನೇಕ ರಾಜಕೀಯ ಬರಹಗಳನ್ನು ನಾವು ಕಾಣಬಹುದು. ರಾಜಕಾರಣದ ಮೇಲೆ ಪ್ರಭಾವ ಬೀರಿದ ಅಂಕಣಕಾರರನ್ನು ನೋಡಿದ್ದೇವೆ ಎಂದರು.

ರಾಜಕಾರಣ ಮತ್ತು ಸಾಹಿತ್ಯ ಒಂದೇ. ಕರ್ನಾಟಕದ ಇತಿಹಾಸದಲ್ಲಿನ ಚಳವಳಿಗಳು ಹಾಗೂ ಸಾರ್ವಜನಿಕ ಬದುಕು ನೀತಿ ನಿರೂಪಣೆ ಮಾಡಲು ಅನೇಕ ಸಾಹಿತ್ಯ ಪುಸ್ತಕಗಳು ನೆರವಾಗಿದೆ. ಅನೇಕ ಕವಿಗಳು ತಮ್ಮ ಕವಿತೆಗಳಲ್ಲಿ ರಾಜಕೀಯ ವಿಷಯಗಳನ್ನು ಪರಿಚಯಿಸಿದ್ದಾರೆ. ಮಹಿಳೆಯರು ಹಕ್ಕುಗಳಿಗಾಗಿ ಕವಯಿತ್ರಿಗಳು ಸಾಹಿತ್ಯ ರೂಪಿಸಿದ್ದಾರೆ. ರಾಷ್ಟ್ರದಲ್ಲಿ ನೀತಿ ನಿರೂಪಣೆಗೆ ಸಾಕಷ್ಟು ಸಾಹಿತಿಗಳು ಶ್ರಮಿಸಿದ್ದಾರೆ ಎಂದು ಬಿ.ಎಲ್.ಶಂಕರ್ ತಿಳಿಸಿದರು.

ʼರಾಜಕಾರಣಿಗಳಿಗಿರಬೇಕಾದ ಸಾಹಿತ್ಯ ಪ್ರಜ್ಞೆʼ ಕುರಿತು ವಿಷಯ ಮಂಡನೆ ಮಾಡಿದ ರಾಜಕೀಯ ಚಿಂತಕ ಡಾ.ಕೆ.ಅನ್ನದಾನಿ ಅವರು, ಅನುಭವ ಮಂಟಪ ಎಂಬ ಮೊದಲ ಸಂಸತ್ತು ರಚಿಸಿದ ಹೆಗ್ಗಳಿಕೆ ಬಸವಣ್ಣನವರದ್ದು. ತಾರತಮ್ಯವನ್ನು ಅವರು ಹೋಗಲಾಡಿಸಿದರು. ನಾನೂ ಕೂಡ ಸಾಹಿತ್ಯದ ಜತೆ ನಂಟು ಇಟ್ಟುಕೊಂಡಿದ್ದೇನೆ ಎಂದರು.

ಸಾಹಿತ್ಯ ಮತ್ತು ರಾಜಕೀಯ ಎರಡು ಹಾಲು ಜೇನಿನಂತೆ ಬೆರೆತಿದೆ. ಇವರೆಡು ಬೇರೆಯಾದರೆ ಬದುಕೇ ದುಸ್ತರವಾಗುತ್ತದೆ. 10ನೇ ಶತಮಾನದ ಪಂಪನ ಕಾಲದಿಂದ ಹೊಸಗನ್ನಡದವರೆಗೂ ರಾಜರ ಆಶ್ರಯದಲ್ಲಿ ಸಾಹಿತಿಗಳು ರಚನೆಯಾಗುತ್ತಾ ಬಂದಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಬರುವವರೆಗೂ ರಾಜರ ಆಶ್ರಯದಲ್ಲಿ ಸಾಹಿತ್ಯ, ಕೃತಿಗಳು ರಚನೆಯಾಗುತ್ತಾ ಬಂದಿದೆ ಎಂದು ಡಾ.ಕೆ.ಅನ್ನದಾನಿ ಹೇಳಿದರು.

ಯಾವ ರಾಜಕಾರಣಿ ಸಾಹಿತ್ಯ ಅಂಟಿಸಿಕೊಂಡಿರುತ್ತಾರೋ ಜನರ ಜೀವನದಲ್ಲಿ ನಿರಂತರ ಸ್ಥಾನ ಹೊಂದಿರುತ್ತಾರೆ. ಎಲ್ಲರೂ ಸಾಹಿತ್ಯದ ಒಲವು ಉಳ್ಳವರಾಗಬೇಕು. ಸಾಹಿತ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಡಾ.ಕೆ.ಅನ್ನದಾನಿ ಹೇಳಿದರು.

ರಾಜಕೀಯ ವಿಶ್ಲೇಷಕ ರವೀಂದ್ರ ರೇಷ್ಮೆ ಅವರು ಸಾಹಿತ್ಯ ಕೃತಿಗಳಲ್ಲಿ ಕಂಡು ಬರುವ ರಾಜಕೀಯ ಚಿತ್ರಣ ಕುರಿತು ವಿಷಯ ಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ಸಮ್ಮೇಳನದ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ, ಶಾಸಕ ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಕುಮಾರ ಸೇರಿ ಹಲವರು ಉಪಸ್ಥಿತರಿದ್ದರು.

ಸಾಹಿತ್ಯ ರಾಜಕಾರಣಕ್ಕೆ ದಿಕ್ಸೂಚಿ..!

ಸಾಹಿತ್ಯ ಕ್ಷೇತ್ರದ ಎಲ್ಲರ ಮನಸ್ಥಿತಿ ಬದಲಾಗಬೇಕಿದೆ. ರಾಜಕಾರಣಕ್ಕೆ ಮಾರ್ಗದರ್ಶನ ಮಾಡುವ ಸಾಹಿತ್ಯಬೇಕಿದೆ. ಗಾಂಧೀಜಿ ಬರವಣಿಗೆಯಿಂದ ಸಮಾಜ ಬದಲಾವಣೆಗೆ ಸಾಹಿತ್ಯ ನೀಡಿದ್ದಾರೆ. ಸಾಹಿತಿಗಳನ್ನು ನಾವು ದೂರ ಇಡುವ ಪ್ರಶ್ನೆ ಇಲ್ಲ. ಉತ್ತಮ ಸಾಹಿತ್ಯ ರಾಜಕಾರಣಕ್ಕೆ ದಿಕ್ಸೂಚಿ. ರಾಜಕಾರಣಿ, ಸಾಹಿತಿ ಪ್ರತ್ಯೇಕಿಸುವ ವ್ಯವಸ್ಥೆ ಹೋಗಲಾಡಿಸಬೇಕು. ರಾಜಕೀಯ ಹಾಲಿನಲ್ಲಿ ತುಪ್ಪ ಇದ್ದ ಹಾಗೆ ಎಂದು ಸಚಿವ ಎಚ್.ಕೆ.ಪಾಟೀಕ್ ತಿಳಿಸಿದರು.

ಸಾಹಿತ್ಯಕ್ಕೆ ವೋಟಿನ ಮುಲಾಜಿಲ್ಲ..!

ರಾಜರು, ಕವಿಗಳು, ಸಾಹಿತಿಗಳನ್ನು ಹೊರತುಪಡಿಸಿ ಯಾವ ಕಾರ್ಯ ನೆರವೇರುತ್ತಿಲ್ಲ. ಯಾವುದೇ ಧರ್ಮ, ಸಾಮಾಜಿಕ ನೆಲೆಗಟ್ಟಿನಲ್ಲಿ ರಾಜಕೀಯವನ್ನು ನಿಗ್ರಹಿಸಿ, ನಿರ್ವಹಿಸುವ ಶಕ್ತಿ ಸಾಹಿತ್ಯಕ್ಕಿದೆ. ಏನೇ ವಿಚಾರ, ವಿಷಯವಿದ್ದರೂ ಅದನ್ನು ಸಾಹಿತ್ಯದಲ್ಲಿ ಬಹಳ ಗಟ್ಟಿಯಾಗಿ ಹೇಳಬಹುದು, ಬರೆಯಬಹುದು. ಅದಕ್ಕೆ ಒಂದು ಶಕ್ತಿಯಿದೆ. ಆದರೆ ರಾಜಕೀಯದಲ್ಲಿ ಅದು ಸಾಧ್ಯವಿಲ್ಲ. ಏಕೆಂದರೆ ಸಾಹಿತ್ಯಕ್ಕೆ ವೋಟಿನ ಮುಲಾಜಿಲ್ಲ, ಹೀಗಾಗಿ ನಿರ್ಭಯದಿಂದ ಸತ್ಯ ಹೇಳಬಹುದು. ಆದರೆ ರಾಜಕೀಯ ವೋಟಿನ ಮುಲಾಜಿಗೆ ಒಳಪಟ್ಟಿದೆ ಎಂದು ಡಾ.ಕೆ.ಅನ್ನದಾನಿ ತಿಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News