ಮಂಡ್ಯ | ಮರ ಕತ್ತರಿಸುವ ಯಂತ್ರದಿಂದ ವ್ಯಕ್ತಿಯ ಬರ್ಬರ ಹತ್ಯೆ
ಮಂಡ್ಯ : ಮರ ಕತ್ತರಿಸುವ ಯಂತ್ರ ಮಾರಾಟ ಮಾಡುವ ಸೋಗಿನಲ್ಲಿ ಕಳವು ಮಾಡಲು ಬಂದು, ಮನೆ ಮಾಲಕನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಹೊರವಲಯದಲ್ಲಿ ಶನಿವಾರ ಸಂಜೆ ನಡೆದಿದೆ.
ಕ್ಯಾತನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಒಂಟಿ ಮನೆ ಮಾಲಕ ರಮೇಶ್ (55) ಎಂಬಾತ ಹತ್ಯೆಗೊಳಗಾದವನು. ಅವರ ಪತ್ನಿ ಯಶೋಧ ಅದೃಷ್ಟವಶಾತ್ ಪಾರಾಗಿದ್ದಾರೆ. ಶ್ರೀರಂಗಪಟ್ಟಣ ನಿವಾಸಿ ಮುಹಮ್ಮದ್ ಇಬ್ರಾಹೀಂ ಕೊಲೆ ಆರೋಪಿ. ನಂಜನಗೂಡಿನ ಟಿವಿಎಸ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಈತ ಆನ್ ಲೈನ್ ಗೇಮ್ ಚಟ ಅಂಟಿಸಿಕೊಂಡಿದ್ದ ಎನ್ನಲಾಗಿದೆ.
ನಿನ್ನೆ (ಡಿ. 21) ಸಂಜೆ ಏಳು ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿ, ರಮೇಶ್ ಮನೆಗೆ ಬಂದು ಮರ ಕತ್ತರಿಸುವ ಯಂತ್ರ ಬುಕ್ ಮಾಡಿದ್ದಾರೆ ಎಂದು ಬಾಗಿಲು ತಟ್ಟಿದ್ದಾನೆ. ಈ ವೇಳೆ ಯಶೋಧ ನಾವು ಯಾವುದನ್ನು ಬುಕ್ ಮಾಡಿಲ್ಲ ಎಂದು ಹೇಳುತ್ತಿದ್ದಂತೆ ಆರೋಪಿ ಮರ ಕತ್ತರಿಸುವ ಯಂತ್ರದಿಂದ ಮನೆ ಬಾಗಿಲು ಕಟ್ ಮಾಡಿ ಒಳನುಗ್ಗಿದ್ದಾನೆ. ಎದುರಿಗೆ ಬಂದ ಮನೆ ಮಾಲಕನ ಪತ್ನಿ ಯಶೋಧರಿಗೆ ಹೊಡೆದಿದ್ದು, ಅವರು ಕೆಳಗೆ ಬಿದ್ದತಕ್ಷಣ ಸಾವನ್ನಪ್ಪಿದ್ದಾರೆ ಅಂತ ತಿಳಿದು ಒಳಹೊಕ್ಕಿದ್ದಾನೆ.
ಬಳಿಕ ಮಂಚದ ಮೇಲೆ ಮಲಗಿದ್ದ ಪಾರ್ಶ್ವವಾಯು ಪೀಡಿತ ರಮೇಶ್ ಅವರ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಆಗ ತಕ್ಷಣ ಎಚ್ಚೆತ್ತ ಯಶೋಧ ಹೊರಕ್ಕೆ ಬಂದು ಹೊರಗಿನಿಂದ ಬಾಗಿಲು ಹಾಕಿಕೊಂಡಿದ್ದಾರೆ. ಈ ವೇಳೆ ಯಶೋಧ ಜೋರಾಗಿ ಕೂಗಿಕೊಂಡಾಗ ಅಲ್ಲಿಗೆ ಬಂದ ಸಾರ್ವಜನಿಕರು ಮನೆಯೊಗಳಗೇ ಸಿಕ್ಕಿ ಬಿದ್ದಿದ್ದ ಆರೋಪಿಗೆ ಮನೆಯಿಂದ ಹೋಗದಂತೆ ದಿಬ್ಬಂಧನ ಹಾಕಿ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ಘಟನಾ ಸ್ಥಳಕ್ಕೆ ಶ್ರೀರಂಗಪಟ್ಟಣ ಡಿವೈಎಸ್ಪಿ ಮುರಳಿ, ಪೊಲೀಸ್ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.