ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಜಾರಿಗೆ ಬರಲಿ ; ಸಾಹಿತ್ಯ ಸಮ್ಮೇಳನದಲ್ಲಿ ಐದು ನಿರ್ಣಯ ಅಂಗೀಕಾರ

Update: 2024-12-22 16:27 GMT

ಮಂಡ್ಯ : ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯ ಸಮಗ್ರವಾಗಿ ಜಾರಿಯಾಗಬೇಕು, ಸರೋಜಿನಿ ಮಹಿಷಿ ವರದಿ ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು ಎನ್ನುವುದು ಸೇರಿದಂತೆ ಐದು ನಿರ್ಣಯಗಳನ್ನು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ. ಸಮ್ಮೇಳನ ಅಂಗೀಕರಿಸಿದೆ.

ಮಂಡ್ಯದಲ್ಲಿ ನಡೆದ 87ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ನಿರ್ಣಯ ಮಂಡನೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಅಧ್ಯಕ್ಷತೆ ವಹಿಸಿದ್ದು, ಸಾಹಿತ್ಯಾಭಿಮಾನಿಗಳು ನಿರ್ಣಯ ಅಂಗೀಕರಿಸಿದರು.

ಅಂಗೀಕರಿಸಿದ ನಿರ್ಣಯಗಳು ಕೆಳಗಿನಂತಿವೆ :

1. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022 ರ ಎಲ್ಲಾ ಉಪ-ಬಂಧಗಳು ಮತ್ತು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಸಮಗ್ರವಾಗಿ ಜಾರಿಗೆ ಬರಬೇಕಿದ್ದು, ಕೂಡಲೇ ಅನುಷ್ಠಾನ ಆಗಬೇಕು. ಸ್ವಾಯತ್ತತೆ ಹೊಂದಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರನ್ನು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ರಾಜ್ಯ ಮಟ್ಟದ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲು ಸೂಕ್ತ ತಿದ್ದುಪಡಿ ತರಬೇಕು.

2. ರಾಜ್ಯದಲ್ಲಿರುವ ಸರಕಾರದ ಎಲ್ಲ ಕನ್ನಡ ಶಾಲೆಗಳಿಗೆ ಕಟ್ಟಡ, ವಾಚನಾಲಯ, ಆಟದ ಮೈದಾನ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಒದಗಿಸುವ ಮತ್ತು ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಯ ಕ್ರಮಕ್ಕೆ ಸರಕಾರ ತ್ವರಿತ ಕ್ರಮ ಕೈಗೊಳ್ಳಬೇಕು.

3. ಕನ್ನಡ ಅನ್ನದ ಭಾಷೆಯಾಗಲು ಕನ್ನಡಿಗರ ಉದ್ಯೋಗಕ್ಕೆ ತಡೆಯಾಗಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸರಕಾರ ಸಮರ್ಪಕವಾಗಿ ಎದುರಿಸಬೇಕು. ಸರೋಜಿನಿ ಮಹಿಷಿ ವರದಿಯನ್ನು ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸಬೇಕು.

4. ದಾವಣಗೆರೆಯಲ್ಲಿ ನಡೆಯಬೇಕಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಅತಿ ಶೀಘ್ರದಲ್ಲಿ ನಡೆಸಬೇಕು.

5.ರಾಜ್ಯ ಸರಕಾರವು ರಾಷ್ಟ್ರಕವಿಯನ್ನು ಅತಿ ಶೀಘ್ರದಲ್ಲಿ ಘೋಷಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News