ಮಂಡ್ಯ | ರಂಗನತಿಟ್ಟು ಪಕ್ಷಿಧಾಮದಲ್ಲಿ ಚಿಟ್ಟೆಪಾರ್ಕ್ ನಿರ್ಮಾಣ : ಸಚಿವ ಈಶ್ವರ್ ಖಂಡ್ರೆ

Update: 2024-11-25 17:17 GMT

ಮಂಡ್ಯ : ಶ್ರೀರಂಗಪಟ್ಟಣ ರಂಗನತಿಟ್ಟು ಪಕ್ಷಿಧಾಮ, ಬನ್ನೇರುಘಟ್ಟದಲ್ಲಿ ಇರುವ ರೀತಿಯಲ್ಲೇ ಚಿಟ್ಟೆಪಾರ್ಕ್ ನಿರ್ಮಾಣ ಮಾಡಿ ಪ್ರವಾಸಿಗರಿಗೆ ಹೊಸ ಆಕರ್ಷಣೆ ಕಲ್ಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಂಗನತಿಟ್ಟು ಪಕ್ಷಿಧಾಮದಲ್ಲಿ ಸೋಮವಾರ ಮೂರು ಹೊಸ ವಿಹಾರ ದೋಣಿಗಳನ್ನು ಉದ್ಘಾಟಿಸಿ ತರುವಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಕರ್ಯ ಒದಗಿಸಲು ಮತ್ತು ರಂಗನತಿಟ್ಟಿನ ಬಗ್ಗೆ ಹೆಚ್ಚಿನ ಪ್ರಚಾರ ಮಾಡಲು ಸೂಚನೆ ನೀಡಿದರು.

ರಂಗನತಿಟ್ಟಿನಲ್ಲಿ ಈಗಾಗಲೇ ಇರುವ ದೋಣಿಗಳಿಗೆ ಹೇಮಾವತಿ, ಕಾವೇರಿ, ಲಕ್ಷ್ಮಣತೀರ್ಥ, ತುಂಗಾ, ಕೃಷ್ಣಾ ಎಂದು ಹೆಸರಿಟ್ಟಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಂದು ಉದ್ಘಾಟಿಸಲಾದ ದೋಣಿಗಳಿಗೆ ಮಾಂಜ್ರಾ, ಗೋದಾವರಿ, ಕಾರಂಜಾ ನದಿಗಳ ಹೆಸರಿಡುವಂತೆ ಸಲಹೆ ನೀಡಿದರು.

ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ:

ಅರಣ್ಯ ಇಲಾಖೆಯ ಚಾರಣ, ಸಫಾರಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ತಾಣದಲ್ಲಿ ರಂಗನತಿಟ್ಟು ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಆಗುವಂತೆ ಪ್ರವೇಶದ ಟಿಕೆಟ್ ಮತ್ತು ದೋಣಿ ವಿಹಾರದ ಟಿಕೆಟ್ ಕಾಯ್ದಿರಿಸುವ ಅವಕಾಶ ಕಲ್ಪಿಸಲು ಸೂಚಿಸಿದರು.

ಗೆಂಡೆಹೊಸಹಳ್ಳಿ ದ್ವೀಪ ಅಭಿವೃದ್ಧಿಗೆ ಪ್ರಸ್ತಾವನೆ ಮಂಡಿಸಲು ಸೂಚನೆ :

ರಂಗನತಿಟ್ಟು ಬಳಿಯ ಗೆಂಡೆ ಹೊಸಹಳ್ಳಿ ದ್ವೀಪದಲ್ಲಿ ಕೂಡ ನೂರಾರು ಬಗೆಯ ಪಕ್ಷಿಗಳು ಬಂದು ಗೂಡುಕಟ್ಟಿ, ಸಂತಾನೋತ್ಪತ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ದ್ವೀಪವನ್ನು ಕೂಡ ರಂಗನತಿಟ್ಟು ರೀತಿಯಲ್ಲೇ ಅಭಿವೃದ್ದಿ ಪಡಿಸಿ, ಪ್ರವಾಸಿ ತಾಣವಾಗಿ ರೂಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.

ದೋಣಿವಿಹಾರ ನಡೆಸಿದ ಅರಣ್ಯ ಸಚಿವರು:

ಕಾವೇರಿ ನದಿಯಲ್ಲಿ ದೋಣಿವಿಹಾರ ನಡೆಸಿದ ಅರಣ್ಯ ಸಚಿವರು, ಬಂಡೆಗಳ ಮೇಲೆ ಮಲಗಿದ್ದ ಬೃಹತ್ ಗಾತ್ರದ ಮೊಸಳೆಗಳು, ಸಂತಾನೋತ್ಪತ್ತಿಗಾಗಿ ಆಗಮಿಸಿರುವ ಪೆಲಿಕಾನ್, ರಿವರ್ ಟರ್ನ್, ಕಾರ್ಮೊರೆಂಟ್, ಪೈಡ್ ಕಿಂಗ್ ಫಿಷರ್ ಮೊದಲಾದ ಪಕ್ಷಿಗಳನ್ನು ವೀಕ್ಷಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News