ಸಕ್ಕರೆ ನಾಡಿನ 87ನೇ ಸಾಹಿತ್ಯ ಸಮ್ಮೇಳನ ಕರ್ನಾಟದಲ್ಲಿ ದಾಖಲೆ ಸೃಷ್ಠಿಸಿದೆ : ಸಚಿವ ಎನ್.ಚಲುವರಾಯಸ್ವಾಮಿ ಹರ್ಷ
ಮಂಡ್ಯ : ಕನ್ನಡದ ಐಕ್ಯತೆಯ ಧ್ಯೋತಕವಾಗಿ ನಮ್ಮ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಹಾಗೂ ನಾಡು ನುಡಿಯ ಬಗೆಗಿನ ಅಭಿಮಾನವನ್ನು ಜನಮನದಲ್ಲಿ ಮೂಡಿಸುವ ನಿಟ್ಟಿನಲ್ಲಿ ಮಂಡ್ಯದಲ್ಲಿ ವಿಜೃಂಭಣೆಯಿಂದ ನಡೆದ 87ನೇ ಅಖಿಲ ಭಾರತ ಕನ್ನಡ ಸಮ್ಮೇಳನ ರಾಜ್ಯದಲ್ಲೇ ಒಂದು ದಾಖಲೆ ಸೃಷ್ಠಿಸಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಜಿಪಂ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಅಕ್ಷರಜಾತ್ರೆ ಅಭೂತಪೂರ್ವ ಯಶಸ್ಸನ್ನುಕಂಡಿದೆ. ಪ್ರತಿಯೊಬ್ಬರೂ ಪ್ರಾಮಾಣಿಕ ಹಾಗೂ ಜವಾಬ್ದಾರಿಯಿಂದ ಸಂಪೂರ್ಣವಾಗಿ ತೊಡಗಿಸಿಕೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದು, ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ನಾಡಿನಲ್ಲಿ ಇದುವರೆಗೂ ನಡೆದಿರುವ 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು 20 ಸಮ್ಮೇಳನದಲ್ಲಿ ಭಾಗವಹಿಸಿದ್ದು, ಬಹಳ ವ್ಯವಸ್ಥಿತ ಹಾಗೂ ಯಶಸ್ವಿಯಾಗಿ ನಡೆದ ಸಮ್ಮೇಳನವೆಂದರೆ ಅದು ಮಂಡ್ಯದಲ್ಲಿ ನಡೆದ 87ನೇ ಸಮ್ಮೇಳನವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಜಿಲ್ಲಾಡಳಿತ, ಪೆÇಲೀಸ್ ಇಲಾಖೆ, ಜಿಲ್ಲಾ ಪಂಚಾಯತ್‍ನ ಅಧಿಕಾರಿ ಮತ್ತು ಸಿಬ್ಬಂದಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ ವರ್ಗದವರು, ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಒಂದು ದಿನದ ವೇತನವನ್ನು ಸಮ್ಮೇಳನಕ್ಕೆ ನೀಡಿದ ಸರಕಾರಿ ನೌಕರರು, ಶಿಕ್ಷಕರು, ಮಾಧ್ಯಮದವರು ಸೇರಿದಂತೆ ಜಿಲ್ಲೆಯ ಜನತೆಗೆ ಸಚಿವರರು ಧನ್ಯವಾದ ಅರ್ಪಿಸಿದರು.
ಊಟದ ವ್ಯವಸ್ಥೆ, ವಸತಿ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ವಸ್ತುಪ್ರದರ್ಶನ, ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳು, ಸ್ವಚ್ಛತೆ ಮತ್ತು ನೈರ್ಮಲ್ಯ, ವೇದಿಕೆ ಕಾರ್ಯಕ್ರಮಗಳು ಸೇರಿದಂತೆ ಪ್ರತಿಯೊಂದು ವ್ಯವಸ್ಥೆಯು ಬಹಳ ಅಚ್ಚುಕಟ್ಟಾಗಿ ಜರುಗಿತು. ಸಮ್ಮೇಳನದ ಮೂರು ದಿನಗಳ ಕಾಲ ಸುಮಾರು 5 ರಿಂದ 6 ಲಕ್ಷ ಜನರು ಭಾಗವಹಿಸಿದ್ದು, ಜನರ ಪಾಲ್ಗೊಳ್ಳುವಿಕೆಯು ಸರೋವರದಂತಿತ್ತು. ಸಮ್ಮೇಳನದಲ್ಲಿ 30ಕ್ಕೂ ಹೆಚ್ಚು ಗೋಷ್ಠಿಗಳು ಬಹಳ ಯಶಸ್ವಿಯಾಗಿ ನಡೆದಿವೆ ಎಂದು ಅವರು ಹೇಳಿದರು.
ಕನ್ನಡಕ್ಕಾಗಿ ಓಟ ಎಂಬ ಶೀರ್ಷಿಕೆ ಅಡಿಯಲ್ಲಿ ಸ್ಥಳೀಯ ಶಾಸಕ ಪಿ.ರವಿಕುಮಾರ್ ಆಯೋಜಿಸಿದ್ದ ಮ್ಯಾರಥಾನ್ ಓಟವು ಸಮ್ಮೇಳನದ ಪ್ರಚಾರ ಹಾಗೂ ಯಶಸ್ವಿಗೆ ಪಾತ್ರವಾಗಿದೆ ಎಂದ ಅವರು, ಸಮ್ಮೇಳನದಲ್ಲಿ 18 ದೇಶಗಳಿಂದ 250 ವಿದೇಶಿ ಕನ್ನಡಿಗರು ಭಾಗವಹಿಸಿದ್ದು ಪ್ರಶಂಸನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಪಿ.ರವಿಕುಮಾರ್, ಶಾಸಕ, ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಷುಗರ್ ಅಧ್ಯಕ್ಕಷ ಸಿ.ಡಿ.ಗಂಗಾಧರ್, ಮುಡಾ ಅಧ್ಯಕ್ಷ ನಯೀಂ, ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾಶಿವಲಿಂಗಯ್ಯ, ಗೌರವ ಕಾರ್ಯದರ್ಶಿ ಹರ್ಷ ಪಣ್ಣೆದೊಡ್ಡಿ ಸೇರಿದಂತೆ ಇನ್ನಿತರ ಪದಾಧಿಕಾಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ʼ87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣಾರ್ಥವಾಗಿ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಭವನವನ್ನು ನಿರ್ಮಾಣ ಮಾಡಲಾಗುವುದು. ಭವನದ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಹುಡುಕಿ ಶೀಘ್ರದಲ್ಲೇ ಶಂಕುಸ್ಥಾಪನೆಯನ್ನು ಕೈಗೊಳ್ಳಲಾಗುವುದು.ʼ
-ಎನ್.ಚಲುವರಾಯಸ್ವಾಮಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ.