ಮಂಡ್ಯ | ಕಲುಷಿತ ಆಹಾರ ಸೇವನೆ: ಮತ್ತೊಬ್ಬ ವಿದ್ಯಾರ್ಥಿ ಮೃತ್ಯು

Update: 2025-03-18 23:51 IST
ಮಂಡ್ಯ | ಕಲುಷಿತ ಆಹಾರ ಸೇವನೆ:  ಮತ್ತೊಬ್ಬ ವಿದ್ಯಾರ್ಥಿ ಮೃತ್ಯು
  • whatsapp icon

ಮಂಡ್ಯ : ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದ ಗೋಕುಲ ವಿದ್ಯಾಸಂಸ್ಥೆಯ ಮತ್ತೊಬ್ಬ ವಿದ್ಯಾರ್ಥಿ, ಮೇಘಾಲಯದ ನಮೀಬ್ ಮಾಂತೆ(12) ಸೋಮವಾರ ತಡರಾತ್ರಿ ಮೈಸೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಎರಡಕ್ಕೇರಿದೆ.

ಉದ್ಯಮಿಯೊಬ್ಬರು ಕಳೆದ ಶುಕ್ರವಾರ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಶಾಲೆಗೆ ಕಳುಹಿಸಿದ್ದ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ಮಾಂತೆಯನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಯಿಂದ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಲುಷಿತ ಆಹಾರ ಸೇವಿಸಿದ್ದ 30 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಮೇಘಾಲಯ ರಾಜ್ಯದ 13 ವರ್ಷದ ಕಾರ್ಲಿಂಗ್ ರವಿವಾರ ಮತಪಟ್ಟಿದ್ದ. ಮಕ್ಕಳಿಗೆ ಮಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ನಮೀಬ್ ಮಾಂತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮೇಘಾಲಯದ ಅಧಿಕಾರಿಗಳು ಭೇಟಿ:

ಮೇಘಾಲಯ ಆಡಳಿತ ಇಲಾಖೆಯ ಆಯುಕ್ತ ಸಿರಿಲ್, ಕಾರ್ಯದರ್ಶಿ ಕ್ರಯಿಲ್ ವಿ ಡಿಂಗ್ ದೋ ಅವರು ಮಿಮ್ಸ್ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ, ವೈದ್ಯರಿಂದ ಮಾಹಿತಿ ಪಡೆದರು.

ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ನಾಲ್ವರು ಐಸಿಯುನಲ್ಲಿದ್ದಾರೆ. 16 ವಿದ್ಯಾರ್ಥಿಗಳು ಸಾಮಾನ್ಯ ವಾರ್ಡಿನಲ್ಲಿದ್ದಾರೆ. ಮೇಘಾಲಯ ಮುಖ್ಯಮಂತ್ರಿ ಸೂಚನೆ ಮೇರೆಗೆ ಭೇಟಿ ನೀಡಿದ್ದು, ಮೃತದೇಹಗಳನ್ನು ಅಲ್ಲಿಗೆ ರವಾನಿಸುವ ಬಗ್ಗೆ ಚಿಂತನೆ ನಡೆದಿದೆ. ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದರು.

ಘಟನೆ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳ ತಂಡವು ಘಟನೆಗೆ ಕಾರಣ ಎನ್ನಲಾದ ಮಳವಳ್ಳಿಯ ಲಕ್ಷ್ಮೀನರಸಿಂಹಸ್ವಾಮಿ ಹೋಟೆಲ್‌ನಿಂದ ಆಹಾರದ ಮಾದರಿಗಳನ್ನು ಮಂಗಳವಾರ ಸಂಗ್ರಹಿಸಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News