ಮಂಡ್ಯ | ಸರಕಾರಿ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ.ವಂಚನೆ: ಆರೋಪಿಯ ಬಂಧನ, ಸಿಎಂ ನಕಲಿ ಸಹಿ ಸೇರಿದಂತೆ ನಕಲಿ ದಾಖಲೆಗಳ ವಶ

Update: 2025-02-22 12:09 IST
ಮಂಡ್ಯ | ಸರಕಾರಿ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ.ವಂಚನೆ: ಆರೋಪಿಯ ಬಂಧನ, ಸಿಎಂ ನಕಲಿ ಸಹಿ ಸೇರಿದಂತೆ ನಕಲಿ ದಾಖಲೆಗಳ ವಶ
  • whatsapp icon

ಮಂಡ್ಯ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಕಲಿ ಸಹಿ ಸೇರಿದಂತೆ ಹಲವು ನಕಲಿ ದಾಖಲೆ ಸೃಷ್ಟಿಸಿ ಸರಕಾರಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚಿಸಿರುವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ತಾವರೆಗೆರೆ ಬಡಾವಣೆಯ ನಿವಾಸಿ  ಎಚ್.ಸಿ.ವೆಂಕಟೇಶ್ ಎಂಬಾತನನ್ನು ಬಂಧಿಸಿ ಆತನಿಂದ ಹಲವು ನಕಲಿ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಗರದ ಸಾಹುಕಾ‌ರ್ ಚನ್ನಯ್ಯ ಬಡಾವಣೆಯ ಕಿರಣ್ ಮತ್ತು ಕಿರಣ್‌ಗೆ ಪರಿಚಯವಿರುವ ರಾಜೇಶ ಮತ್ತು ರಾಕೇಶ ಎಂಬವರಿಂದ ಅಬಕಾರಿ ಇಲಾಖೆಯಲ್ಲಿ ಚಾಲಕ ಹುದ್ದೆ ಕೊಡಿಸುವುದಾಗಿ ಆರೋಪಿ ವೆಂಕಟೇಶ್‌ಗೆ 14 ಲಕ್ಷ ರೂ. ವಂಚಿಸಿದ್ದಾನೆ ಎಂದು ಕಿರಣ್ ತಾಯಿ ಎಸ್.ಕೆ.ಗಾಯತ್ರಿ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಎಸ್ಪಿ ಮಾಹಿತಿ ನೀಡಿದರು.

ಇದಲ್ಲದೆ, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆಂದು ಹಲವರಿಂದ ಸುಮಾರು 19 ಲಕ್ಷ ರೂ. ಹಾಗೂ ನೇತ್ರಾವತಿ ಎಂಬವರ ಮಗನಿಗೆ ಶಿಕ್ಷಣ ಇಲಾಖೆಯಲ್ಲಿ ಹುದ್ದೆ ಕೊಡಿಸುತ್ತೇನೆಂದು 12.24 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ವಿವಿಧ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆಂದು 35 ರಿಂದ 40 ಜನರಿಗೆ ವಂಚಿಸಿರುವ ಬಗ್ಗೆಯೂ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಆರೋಪಿಯು ವಿಚಾರಣೆ ವೇಳೆ ತಿಳಿಸಿದ ಮಾಹಿತಿ ಮೇರೆಗೆ ಆತನ ಮನೆಯಿಂದ ಕೃತ್ಯಕ್ಕೆ ಬಳಸಿದ ವಸ್ತುಗಳು ಮತ್ತು ಇನ್ನು ಹಲವಾರು ಜನರಿಗೆ ನೀಡಿದ ನಕಲಿ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಒಂದು ಪ್ರಿಂಟ‌ರ್, ಮೊಬೈಲ್ ಫೋನ್, ವಿಧಾನಸೌಧದ ಮುಖ್ಯ ಕಾರ್ಯದರ್ಶಿಗಳ ಕಾರ್ಯಾಲಯದಲ್ಲಿ ಎಫ್‌ಡಿಎ ಹುದ್ದೆಯಲ್ಲಿದ್ದೇನೆಂಬ ಐಡಿ ಕಾರ್ಡ್, ಕತ್ತಿಗೆ ಹಾಕಿಕೊಳ್ಳುವ ಕರ್ನಾಟಕ ಸರಕಾರದ ಲೋಗೊ ಮತ್ತು ಐಡಿ ಹೋಲ್ಡಿಂಗ್ ಟ್ಯಾಗ್‌ಗಳು, ಹಲವಾರು ನಕಲಿ ದಾಖಲೆಗಳು ಆರೋಪಿ ಮನೆಯಲ್ಲಿ ದೊರಕಿವೆ ಎಂದು ಅವರು ತಿಳಿಸಿದರು.

ದೊರಕಿರುವ ನಕಲಿ ದಾಖಲೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿ ಟ್ಯಾಂಪರ್ ಮಾಡಿರುವ ನಕಲಿ ದಾಖಲಾತಿ, ಹಲವಾರು ಹುದ್ದೆಗಳಿಗೆ ನೇಮಿಸಿ ಸ್ಥಳ ನಿಯೋಜಿಸಿ ಆದೇಶ ಹೊರಡಿಸುವ ಮಂಡ್ಯ ಜಿಲ್ಲಾಧಿಕಾರಿ ಸಹಿ ಇರುವ ನೇಮಕಾತಿ ಪತ್ರ ಸೇರಿದಂತೆ ಇನ್ನು ಹಲವಾರು ಅಧಿಕಾರಿಗಳ ನಕಲಿ ದಾಖಲೆಗಳು ದೊರಕಿವೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಎಸ್.ಇ.ಗಂಗಾಧರಸ್ವಾಮಿ, ಡಿವೈಎಸ್ಪಿ ಎಲ್.ಕೆ.ರಮೇಶ್, ಸಿಪಿಐ ಕೆ.ಸಂತೋಷ್, ತನಿಖಾ ತಂಡದ ಇತರ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News