ನಾಗಮಂಗಲದಲ್ಲಿ ನಾಡಾ ಬಾಂಬ್ ಸ್ಪೋಟ: ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

ನಾಗಮಂಗಲ: ನಾಡ ಬಾಂಬ್ ಸಿಡಿದು ಜೈನ ಮಠದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ತಾಲೂಕಿನ ಕಂಬದಹಳ್ಳಿಯ ಆಂಜನೇಯ ಬೆಟ್ಟದಲ್ಲಿ ನಡೆದಿದೆ.
ಹರಿಹಂತ್ ಪಾಟೀಲ್ ಹಾಗೂ ಪಾರ್ಥ ನಾಡ ಬಾಂಬ್ ಸ್ಪೋಟದಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
ಸ್ಥಳೀಯ ಪ್ರವಾಸಿ ತಾಣವಾಗಿರುವ ಆಂಜನೇಯ ಬೆಟ್ಟದ ದೇವಸ್ಥಾನದ ಸುತ್ತ ಸ್ವಚ್ಛಕಾರ್ಯಕ್ಕೆ ಭಾನುವಾರ ಬೆಳಿಗ್ಗೆ ತೆರಳಿದ್ದ ವಿದ್ಯಾರ್ಥಿಗಳು ಕಸದ ರಾಶಿಗೆ ಕೈ ಹಾಕಿದ ಸಂದರ್ಭ ಯಾರೋ ಇರಿಸಿದ್ದ ನಾಡು ಬಾಂಬ್ ಸ್ಪೋಟವಾಗಿದೆ. ಸ್ಪೋಟದ ತೀವ್ರತೆಗೆ ಒರ್ವ ವಿದ್ಯಾರ್ಥಿ ಅಂಗೈ ಛಿದ್ರವಾಗಿದ್ದು ಮತ್ತೊಬ್ಬ ವಿದ್ಯಾರ್ಥಿಯ ಮುಖದ ಭಾಗಕ್ಕೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಕಾಡು ಹಂದಿ ಬೇಟೆಗೆ ನಾಡ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದ್ದು,ಕಿಡಿಗೇಡಿಗಳ ಕೆಲಸದಿಂದ ಅಮಾಯಕ ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಬಿಂಡಿಗನವಿಲೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.