ಮಂಡ್ಯ | ಅನ್ನಸಂತರ್ಪಣೆಯಲ್ಲಿ ಊಟ ಮಾಡಿದ 75ಕ್ಕೂ ಹೆಚ್ಚು ಮಂದಿ ಅಸ್ವಸ್ಥ : ಆಸ್ಪತ್ರೆಗೆ ದಾಖಲು

ಮಂಡ್ಯ : ಇಲ್ಲಿನ ಪಾಂಡವಪುರ ತಾಲೂಕಿನ ನರಹಳ್ಳಿ ಗ್ರಾಮದಲ್ಲಿ ನಡೆದ ದೇವಸ್ಥಾನದ ಅನ್ನಸಂತರ್ಪಣೆ(ಪರ)ಯಲ್ಲಿ ಊಟ ಸೇವನೆ ಮಾಡಿದ 75ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, 25ಕ್ಕೂ ಹೆಚ್ಚು ಮಂದಿ ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಹಾಗೂ 50ಕ್ಕೂ ಹೆಚ್ಚು ಮಂದಿ ನರಹಳ್ಳಿ ಗ್ರಾಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ ನಿವಾಸಿಗಳಾದ ಸೂರ್ಯ, ಚನ್ನಕೇಶವ, ಕುಮಾರ, ಚನ್ನಮ್ಮ, ರಾಕೇಶ್, ಸಣ್ಣಮ್ಮ, ಲಕ್ಷ್ಮಮ್ಮ, ದಾಕ್ಷಾಯಿಣಿ, ರಾಗಿಣಿ, ಹರಿಣಿ, ಬೋರೇಗೌಡ, ಜಗದೀಶ್, ಶ್ರೀಹರಿ, ಸ್ವಾಮಿಗೌಡ, ಕೆಂಪೇಗೌಡ, ಸುಹಾಸ್, ಮರಿಯಪ್ಪ ಸೇರಿದಂತೆ ಇತರರು ಅಸ್ವಸ್ಥರು.
ಚನ್ನಬೀರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ತಡರಾತ್ರಿ ನಡೆದ ದೇವರ ಪರದಲ್ಲಿ ರಾಗಿ ಮುದ್ದೆ, ಅವರೇಕಾಳು ಕೂಟ್ ಹಾಗೂ ಪಾಯಸ ಸೇವಿಸಿದ ನಂತರ ಹೊಟ್ಟೆನೋವು, ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಈ ವೇಳೆ ಅಸ್ವಸ್ಥಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಕೆಲವರಿಗೆ ನರಹಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತೆರೆದಿರುವ ತಾತ್ಕಾಲಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್, ತಹಸೀಲ್ದಾರ್ ಎಸ್.ಸಂತೋಷ್, ತಾ.ಪಂ ಇಒ ಲೋಕೇಶ್ ಮೂರ್ತಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎನ್.ಆಶಾಲತಾ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ ಭೇಟಿ ನೀಡಿ ಪರಿಶೀಲಿಸಿದರು. ಜತೆಗೆ ನೀರು ಮತ್ತು ಆಹಾರವನ್ನು ಪರೀಕ್ಷೆಗೆಗಾಗಿ ಲ್ಯಾಬ್ ಗೆ ಕಳುಹಿಸಲಾಗಿದೆ.
ಎರಡು ಪರಗಳಿಗೆ ನಿಷೇಧ : ಹಲವರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಮುಂದೆ ನಡೆಯಬೇಕಿದ್ದ ಎರಡು ಪರಗಳನ್ನು ತಾಲೂಕು ದಂಡಾಧಿಕಾರಿಗಳು ನಿಷೇಧಿಸಿ ಆದೇಶಿಸಿದ್ದಾರೆ.