ಮಂಡ್ಯ | ವಸತಿ ಶಾಲೆಯಲ್ಲಿ ಊಟ ಸೇವಿಸಿದ 29 ವಿದ್ಯಾರ್ಥಿಗಳು ಅಸ್ವಸ್ಥ; ಓರ್ವ ಮೃತ್ಯು

Update: 2025-03-16 14:45 IST
ಮಂಡ್ಯ | ವಸತಿ ಶಾಲೆಯಲ್ಲಿ ಊಟ ಸೇವಿಸಿದ 29 ವಿದ್ಯಾರ್ಥಿಗಳು ಅಸ್ವಸ್ಥ; ಓರ್ವ ಮೃತ್ಯು

ಸಾಂದರ್ಭಿಕ ಚಿತ್ರ

  • whatsapp icon

ಮಂಡ್ಯ : ಮಳವಳ್ಳಿ ತಾಲೂಕು ಟಿ.ಕಾಗೇಪುರ ಗ್ರಾಮದಲ್ಲಿರುವ ಖಾಸಗಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಯೊಬ್ಬ ವಿಷಾಹಾರ ಸೇವಿಸಿ ಸಾವನ್ನಪ್ಪಿದ್ದು, 29 ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದಾರೆ.

ಘಟನೆಯಲ್ಲಿ ಮೇಘಾಲಯ ರಾಜ್ಯದ ಕಾರ್ಲಿಂಗ್(13) ಮೃತಪಟ್ಟಿದ್ದು, ಮೇಘಾಲಯ ಮೂಲದ 23 ಹಾಗೂ 6 ಮಂದಿ ಸ್ಥಳೀಯ ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಎಲ್ಲರನ್ನೂ ಮಿಮ್ಸ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳ ಪೈಕಿ 8 ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಇವರಲ್ಲಿ ಓರ್ವನನ್ನು ಐಸಿಯು ಘಟಕಕ್ಕೆ ರವಾನಿಸಲಾಗಿದೆ. ಎಲ್ಲ ಮಕ್ಕಳೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

ಈ ವಿದ್ಯಾಸಂಸ್ಥೆಯಲ್ಲಿ ಎಲ್‌ಕೆಜಿಯಿಂದ 8ನೇ ತರಗತಿವರಗೆ 202 ಮಕ್ಕಳು ಕಲಿಯುತ್ತಿದ್ದಾರೆ. ಇವರ ಪೈಕಿ ಮೇಘಾಲಯ ರಾಜ್ಯದ 24 ಮತ್ತು ಸ್ಥಳೀಯ 6 ಮಂದಿ ಮಕ್ಕಳು ಶಾಲೆಯಲ್ಲೇ ವಾಸ್ತವ್ಯ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಫುಡ್ ಪಾಯಿಸನ್ ಆಗಿದೆ.

ಮಾ.14ರಂದು ಹೋಳಿ ಹಬ್ಬ ಆಚರಿಸಿದ ಸ್ಥಳೀಯರು ಅಲ್ಲಿನ ವೆಜಿಟೇಬಲ್ ಪಲಾವ್‌ನ್ನು ಶಾಲೆಯಲ್ಲಿ ವಾಸ್ತವ್ಯವಿದ್ದ ಮಕ್ಕಳಿಗೆ ನೀಡಿದ್ದು, ಇದನ್ನು ಸೇವಿಸಿದ್ದ ಮಕ್ಕಳಲ್ಲಿ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಆಹಾರ ನೀಡಿದ 10 ಮಂದಿಯೂ ಅಸ್ವಸ್ಥರಾಗಿದ್ದಾರೆಂದು ಡಾ.ಕುಮಾರ ತಿಳಿಸಿದ್ದಾರೆ.

ಅಸ್ವಸ್ಥಗೊಂಡ ಮಕ್ಕಳನ್ನು ತಕ್ಷನ ಮಳವಳ್ಳಿ ತಾಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದು, ನಂತರ ಎಲ್ಲ ಮಕ್ಕಳನ್ನೂ ಮಿಮ್ಸ್ ಜಿಲ್ಲಾಸ್ಪತ್ರೆಗೆ ರವಾನಿಸಿ ತಜ್ಞ ವೈದ್ಯರ ತಂಡದ ನೇತೃತ್ವದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿ ಕುಮಾರ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಕೆ.ಮೋಹನ್, ಸ್ಥಳೀಯ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸೇರಿದಂತೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಶಾಲೆ ಮತ್ತು ಮಳವಳ್ಳಿ, ಮಿಮ್ಸ್ ಆಸ್ಪತ್ರೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಸತಿ ಶಾಲೆಗೆ ಅನುಮತಿ ಇಲ್ಲ: ಡಾ.ಕುಮಾರ

ವಿದ್ಯಾಸಂಸ್ಥೆಯವರು ಶಾಲೆ ನಡೆಸಲು ಮಾತ್ರ ಅನುಮತಿ ಪಡೆದಿದ್ದು, ಮೇಘಾಲಯದ 26 ಮತ್ತು ಸ್ಥಳೀಯ 6 ವಿದ್ಯಾರ್ಥಿಗಳನ್ನು ಅಲ್ಲಿಯೇ ಇಟ್ಟುಕೊಂಡಿರುವುದು ಕಾನೂನು ಉಲ್ಲಂಘನೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಮಾಧ್ಯಮಗಳಿಗೆ ತಿಳಿಸಿದರು.

ಶಾಲೆಯನ್ನು ಪರಿಶೀಲಿಸಿದಾಗ ಅಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ಕಂಡುಬಂದಿದೆ. ವಿಷಯ ತಿಳಿದ ತಕ್ಷಣ ಮಾ.15ರಂದೇ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ಅಸ್ವಸ್ಥ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಇಂದು ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಆಗಿ ಓರ್ವ ಬಾಲಕ ಮೃತಪಟ್ಟಿದ್ದು, ಉಳಿದವರನ್ನು ಮಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ನಾನು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಶಾಲೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಮೇಘಾಲಯದ ಬಾಲಕ ಕಾರ್ನಿಂಗ್ ಮೃತಪಟ್ಟಿದ್ದು, ಈ ವಿಷಯವನ್ನು ಮೇಘಾಲಯ ಸರಕಾರಕ್ಕೆ ಮುಟ್ಟಿಸಲಾಗಿದೆ. ಮೇಲ್ನೋಟಕ್ಕೆ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News