ಮಂಡ್ಯ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಮಾಸ್ತಪ್ಪ / ರತ್ಮಮ್ಮ / ಲಕ್ಮಿ
ಮಂಡ್ಯ: ಒಂದೇ ಕುಟುಂಬದ ಮೂವರು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿರುವುದಾಗಿ ವರದಿಯಾಗಿದೆ.
ಶ್ರೀರಂಗಪಟ್ಟಣ ತಾಲೂಕು ಗಂಜಾ ನಿವಾಸಿ ಅಟೋ ರಿಕ್ಷಾ ಚಾಲಕ ಮಾಸ್ತಪ್ಪ(65), ಅವರ ಪತ್ನಿ ರತ್ಮಮ್ಮ(45) ಹಾಗೂ ಪುತ್ರಿ ಲಕ್ಮಿ(18) ಆತ್ಮಹತ್ಯೆ ಮಾಡಿಕೊಂಡವರು. ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮಾಸ್ತಪ್ಪ ತನ್ನ ಹೆಂಡತಿ ಮತ್ತು ಮಗಳೊಂದಿಗೆ ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದ ಸಮೀಪದ ವಿಶ್ವೇಶ್ವರಯ್ಯ ನಾಲೆ(ವಿಸಿ)ಗೆ ಬಳಿಗೆ ತೆರಳಿ ಆಟೋ ನಿಲ್ಲಿಸಿ ತುಂಬಿಹರಿಯತ್ತಿದ್ದ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಾಸ್ತಪ್ಪ ಮತ್ತು ರತ್ನಮ್ಮ ಅವರ ಮೃತದೇಹಗಳನ್ನು ನಾಲೆಯಿಂದ ಹೊರೆ ತೆಗೆಯಲಾಗಿದ್ದು, ಪುತ್ರಿ ಲಕ್ಮಿಗಾಗಿ ಅಗ್ನಿಶಾಮಕ ದಳ ಮತ್ತು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂವರೂ ನಾಲೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಷ ಸೇವನೆ ಮಾಡಿದ್ದಾರೆ ಎನ್ನಲಾಗಿದೆ. ಮಾಸ್ತಪ್ಪ ಸುಮಾರು 12 ಲಕ್ಷ ರೂ.ನಷ್ಟು ಸಾಲಮಾಡಿಕೊಂಡಿದ್ದು, ಸಾಲಗಾರರ ಕಿರುಕುಳ ತಾಳಲಾರದೆ ಆತ್ನಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಸ್ತಪ್ಪ ಅವರ ಸೋದರ ಶಂಕರಪ್ಪ ಆರೋಪಿದ್ದಾರೆ.
ಸುಮಾರು 12 ಲಕ್ಷ ರೂ. ಸಾಲದ ಪೈಕಿ ಮೂರು ಲಕ್ಷ ರೂ. ಸಾಲಕೊಟ್ಟವರು ಇಂದು ಬೆಳಗ್ಗೆ ಮಾಸ್ತಪ್ಪನ ಮನೆ ಬಳಿಗೆ ಬಂದು ಸಾಲ ಮರುಪಾವತಿ ಮಾಡುವಂತೆ ತಾಕೀತು ಮಾಡಿದ್ದು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕರಪ್ಪ ಆರೋಪಿಸಿದ್ದಾರೆ.
ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.